ADVERTISEMENT

ದಾವಣಗೆರೆಯಲ್ಲಿ ಶ್ರೀರಾಮ ಫೈನಾನ್ಸ್‌ ಕಚೇರಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 3:09 IST
Last Updated 3 ಜುಲೈ 2019, 3:09 IST
   

ದಾವಣಗೆರೆ: ನಗರದ ಪಿ.ಬಿ. ರಸ್ತೆಯ ಶ್ರಮಜೀವಿ ಲಾಜ್ಡ್‌ ಸಮೀಪದ ಶ್ರೀರಾಮ ಫೈನಾನ್ಸ್‌ ಕಚೇರಿಯಲ್ಲಿ ಬುಧವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಹಲವು ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ.

ಬೆಳಿಗ್ಗೆ ಕಟ್ಟಡದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ದಾರಿಹೋಕರು, ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಮೂರು ಅಗ್ನಿಶಾಮಕ ವಾಹನಗಳಲ್ಲಿ ಬಂದ ಸಿಬ್ಬಂದಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದರು.

ಕಟ್ಟಡದೊಳಗೆ ದಟ್ಟ ಹೊಗೆ ತುಂಬಿಕೊಂಡಿದ್ದರಿಂದ ಕಿಟಕಿಗಳ ಗಾಜುಗಳನ್ನು ಒಡೆದು ಹೊಗೆ ಹೊರ ಹೋಗಲು ಮೊದಲು ಅವಕಾಶ ಮಾಡಿಕೊಟ್ಟರು. ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ರಾಷ್ಟ್ರೀಯ ಕಟ್ಟಡಗಳ ನಿಯಮಾವಳಿಗಳನ್ನು ಪಾಲಿಸದೇ ಕಟ್ಟಡ ನಿರ್ಮಿಸುವುದರಿಂದ ಅಗ್ನಿ ಅವಘಡಗಳು ನಡೆಯುತ್ತವೆ. ಇಂಥ ಸಂದರ್ಭಗಳಲ್ಲಿ ಕಾರ್ಯಾಚರಣೆ ನಡೆಸುವುದು ಕಷ್ಟವಾಗಲಿದೆ ಎಂದು ಬಸವಪ್ರಭು ಶರ್ಮ ತಿಳಿಸಿದರು.

ADVERTISEMENT

ಈ ಘಟನೆಯಲ್ಲಿ ಎಷ್ಟು ಪ್ರಮಾಣದ ಹಾನಿ ಸಂಭವಿಸಿದೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಎರಡು ದಿನಗಳ ಹಿಂದೆ ನಗರದ ಅಂಬೇಡ್ಕರ್‌ ವೃತ್ತದ ಬಳಿ ಸೋನಿ ಶೋರೂಂ ಕಟ್ಟಡಕ್ಕೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.