ADVERTISEMENT

ಬೆಂಗಳೂರಿನಲ್ಲಿ 14ಕ್ಕೆ ಸಂತ್ರಸ್ತರ ಅಧಿವೇಶನ

ಪರಿಹಾರ ನೀಡಿದ ಕೇಂದ್ರ ಸರ್ಕಾರದ ವಿರುದ್ಧ ತಲಕಾವೇರಿಯಿಂದ ಬೆಂಗಳೂರಿಗೆ ವಾಹನ ಜಾಥಾ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 13:48 IST
Last Updated 2 ಅಕ್ಟೋಬರ್ 2019, 13:48 IST
ದಾವಣಗೆರೆಯ ರೈತ ಭವನದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮಂಗಳವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಮತ್ತು ರಾಜ್ಯ ಸಮಿತಿ ಸಭೆಯಲ್ಲಿ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಹಾಗೂ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಪುಷ್ಪನಮನ ಸಲ್ಲಿಸಿದರು. – ಪ್ರಜಾವಾಣಿ ಚಿತ್ರ
ದಾವಣಗೆರೆಯ ರೈತ ಭವನದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮಂಗಳವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಮತ್ತು ರಾಜ್ಯ ಸಮಿತಿ ಸಭೆಯಲ್ಲಿ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಹಾಗೂ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಪುಷ್ಪನಮನ ಸಲ್ಲಿಸಿದರು. – ಪ್ರಜಾವಾಣಿ ಚಿತ್ರ   

ದಾವಣಗೆರೆ: ರಾಜ್ಯದ ಬರ ಹಾಗೂ ನೆರೆ ಸಂತ್ರಸ್ತರಿಗೆ ಪರಿಹಾರ ನೀಡದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಕ್ಟೋಬರ್‌ 14ರಂದು ಮಧ್ಯಾಹ್ನ 1ಕ್ಕೆ ಸಂತ್ರಸ್ತರ ಬಹಿರಂಗ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಂಗೇಂದ್ರ ತಿಳಿಸಿದರು.

ನೆರೆ ಹಾಗೂ ಬರ ಸಂತ್ರಸ್ತರ ಸಮಸ್ಯೆ ಕುರಿತು ಚರ್ಚಿಸಲು ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯ ಸಮಿತಿ ಸಭೆಯ ಪೂರ್ವದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು.

‘ರಾಜ್ಯದಿಂದ ಬಿಜೆಪಿಯ 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಲಾಗಿದೆ. ರಾಜ್ಯದ ಎಲ್ಲಾ ಸಂಸದರು ದೆಹಲಿಯಲ್ಲಿ ಎರಡು ಗಂಟೆ ಪ್ರತಿಭಟನೆ ನಡೆಸಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಆಯ್ಕೆಯಾಗಿ ಬಂದಿರುವ ರಾಜ್ಯದ ಬಿಜೆಪಿ ಸಂಸದರಿಗೆ ಅವರ ಎದುರಿಗೆ ನಿಂತು ಮಾತನಾಡುವ ತಾಕತ್ತು ಇಲ್ಲ’ ಎಂದು ಟೀಕಿಸಿದ ಅವರು, ‘ಸಂಸದರಿಗೆ ಸ್ವಾಭಿಮಾನ, ಸಂತ್ರಸ್ತರ ಬಗ್ಗೆ ಕಾಳಜಿ ಇದ್ದರೆ ನಮ್ಮೊಂದಿಗೆ ಬೀದಿಗೆ ಬಂದು ಹೋರಾಟ ನಡೆಸಲಿ’ ಎಂದು ಸವಾಲು ಹಾಕಿದರು.

ADVERTISEMENT

ದಕ್ಷಿಣ ಕರ್ನಾಟಕದಲ್ಲಿ ಅ. 12ರಂದು 14ರವರೆಗೆ ತಲಕಾವೇರಿಯಿಂದ ಬೆಂಗಳೂರಿಗೆ ವಾಹನ ಜಾಥಾ ನಡೆಸಲಾಗುವುದು. ಇದೇ ಅವಧಿಯಲ್ಲಿ ಉತ್ತರ ಕರ್ನಾಟಕದ ನೆರೆ ಪೀಡಿತ ಜಿಲ್ಲೆಗಳಿಂದಲೂ ವಾಹನ ಜಾಥಾ ಹೊರಡಲಿದೆ. ಸಂತ್ರಸ್ತರ ಅಧಿವೇಶನದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಹಲವು ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಹಕ್ಕೊತ್ತಾಯ ಮಂಡಿಸಲಾಗುವುದು. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಎಂದು ಹೇಳಿದರು.

ರೈತ ಸಂಘದ ರಾಜ್ಯ ಘಟಕದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ, ‘ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೆರೆಯಿಂದಾಗಿ ಬೆಳೆ, ಮನೆ ಕಳೆದುಕೊಂಡು ಜನರ ಬದುಕು ಬೀದಿಗೆ ಬಿದ್ದಿದೆ. ಇನ್ನೊಂದೆಡೆ ಬರಗಾಲದಿಂದಾಗಿ ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸ ಸಿಗದೇ ಪಟ್ಟಣಕ್ಕೆ ಗುಳೆ ಹೋಗುತ್ತಿದ್ದಾರೆ. ಮೇವು ಸಿಗದೇ ಜಾನುವಾರು ಮಾರುತ್ತಿದ್ದಾರೆ. ರಾಜ್ಯದಲ್ಲಿ ನೆರೆ–ಬರ ಎರಡೂ ಇದ್ದರೂ ಪ್ರಧಾನಿ ನರೇಂದ್ರ ಮೋದಿ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಪರಿಹಾರ ಕೊಡಬೇಕು ಎಂಬ ಬೇಡಿಕೆ ಜನರಿಂದ ಇದೆ. ‘ಚಂದ್ರಯಾನ–2’ ವೀಕ್ಷಿಸಲು ಬೆಂಗಳೂರಿಗೆ ಬಂದಿದ್ದ ಪ್ರಧಾನಿ ಸೌಜನ್ಯಕ್ಕೂ ನೆರೆ ಹಾನಿ ಅವಲೋಕಿಸಿಲ್ಲ. ಆದರೆ, ಅಮೆರಿಕಕ್ಕೆ ಹೋಗಿ ಟ್ರಂಪ್‌ ಅವರನ್ನು ಮತ್ತೆ ಗೆಲ್ಲಿಸಲು ಪ್ರಚಾರ ಮಾಡಿದ್ದಾರೆ’ ಎಂದು ಟೀಕಿಸಿದರು.

ಕಾರ್ಯದರ್ಶಿ ನೂಲೇನೂರು ಎಂ. ಶಂಕರಪ್ಪ, ‘ಈರುಳ್ಳಿಗೆ ಬೆಲೆ ಸಿಗದೇ ಹಲವು ವರ್ಷಗಳ ಕಾಲ ರೈತರು ನಷ್ಟ ಅನುಭವಿಸಿದ್ದರು. ಈಗ ಒಳ್ಳೆಯ ಬೆಲೆ ಸಿಗುತ್ತಿರುವಾಗ ಕೇಂದ್ರ ಸರ್ಕಾರ ರಫ್ತು ನಿಷೇಧಿಸಿರುವುದು ಸರಿಯಲ್ಲ. ಕೂಡಲೇ ರಫ್ತು ನಿಷೇಧವನ್ನು ತೆಗೆದುಹಾಕಬೇಕು’ ಎಂದು ಒತ್ತಾಯಿಸಿದರು.

ಕಾರ್ಯದರ್ಶಿ ಬಲ್ಲೂರು ರವಿಕುಮಾರ್‌, ‘ಮೆಕ್ಕೆಜೋಳ ಬೆಳೆ ಬೆಲೆ ಕುಸಿಯುತ್ತಿದೆ. ಹೀಗಾಗಿ ಜಿಲ್ಲಾಧಿಕಾರಿ ವರ್ತಕರ ಹಾಗೂ ರೈತರ ಸಭೆ ನಡೆಸಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಎಂ. ರಾಮು, ರವಿಕಿರಣ ಪೂಣಚ್ಚ, ಚಿಕ್ಕನಹಳ್ಳಿ ರೇವಣಸಿದ್ಧಪ್ಪ, ಹೊಸೂರು ಕುಮಾರ್‌, ಭೀಮಾ ನಾಯ್ಕ, ಭೀಮಣ್ಣ ಆನಗೋಡ, ಮಾಯಕೊಂಡ ನಿಂಗಪ್ಪ ಅವರೂ ಇದ್ದರು.

ಆರ್‌.ಸಿ.ಇ.ಪಿ ಒಪ್ಪಂದಕ್ಕೆ ವಿರೋಧ

‘ಜಾಗತಿಕ ಮುಕ್ತ ಮಾರುಕಟ್ಟೆ ಒಪ್ಪಂದದಿಂದಾಗಿ ಸಾರ್ವಜನಿಕ ವಲಯದ ಉದ್ಯಮಗಳು ಮುಚ್ಚಿ ಹೋಗುತ್ತಿವೆ. ಇನ್ನೊಂದೆಡೆ ಆರ್ಥಿಕ ಕುಸಿತವಾಗುತ್ತಿದೆ. ಇದರ ನಡುವೆಯೇ ನವೆಂಬರ್‌ ತಿಂಗಳಲ್ಲಿ ರೀಜನಲ್‌ ಕಾಂಪ್ರಹೆನ್ಸಿವ್‌ ಇಕಾನಮಿಕ್‌ ಪಾರ್ಟ್‌ನರ್‌ಷಿಪ್‌ (ಆರ್‌.ಸಿ.ಇ.ಪಿ) ಅಡಿ ಮುಕ್ತ ಮಾರುಕಟ್ಟೆ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಇದನ್ನು ವಿರೋಧಿಸಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆಯಬೇಕು. ರಾಜ್ಯದ ಸಂಸದರು ಇದನ್ನು ವಿರೋಧಿಸಬೇಕು’ ಎಂದು ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.