ADVERTISEMENT

ಗಾಜಿನಮನೆ ಈಗ ಹೂವಿನ ಅರಮನೆ!

ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ನಾಳೆಯಿಂದ

ವಿನಾಯಕ ಭಟ್ಟ‌
Published 22 ಆಗಸ್ಟ್ 2019, 9:15 IST
Last Updated 22 ಆಗಸ್ಟ್ 2019, 9:15 IST
ದಾವಣಗೆರೆಯ ಗಾಜಿನಮನೆಯಲ್ಲಿ ಶುಕ್ರವಾರದಿಂದ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕಾಗಿ ನಿರ್ಮಿಸಿರುವ ‘ಹಾರ್ಟ್‌’ ಆಕೃತಿಯ ಎದುರು ಯುವತಿಯರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. – ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಗಾಜಿನಮನೆಯಲ್ಲಿ ಶುಕ್ರವಾರದಿಂದ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕಾಗಿ ನಿರ್ಮಿಸಿರುವ ‘ಹಾರ್ಟ್‌’ ಆಕೃತಿಯ ಎದುರು ಯುವತಿಯರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. – ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ನಗರದ ಗಾಜಿನಮನೆ ಈಗ ಮತ್ತೊಮ್ಮೆ ‘ಹೂವಿನ ಅರಮನೆ’ಯಾಗಿ ಕಂಗೊಳಿಸುತ್ತಿದೆ. ವೈವಿಧ್ಯಮಯ ಹೂವುಗಳಿಂದ ಅಲಂಕಾರ ಮಾಡಿಕೊಂಡು ಸಾವಿರಾರು ಜನರನ್ನು ಸೆಳೆಯಲು ಗಾಜಿನಮನೆ ಸಜ್ಜಾಗುತ್ತಿದೆ.

ತೋಟಗಾರಿಕೆ ಇಲಾಖೆಯು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಸಂಘದ ಆಶ್ರಯದಲ್ಲಿ ಗಾಜಿಮನೆ ಆವರಣದಲ್ಲಿ ಇದೇ 23ರಿಂದ 27ರವರೆಗೆ ಐದು ದಿನಗಳ ಹಮ್ಮಿಕೊಂಡಿರುವ ಫಲಪುಷ್ಪ ಪ್ರದರ್ಶನದಲ್ಲಿ ಮತ್ತೊಮ್ಮೆ ‘ಪುಷ್ಪ ಲೋಕ’ ಅನಾವರಣಗೊಳ್ಳಲಿದೆ. ಕಳೆದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಮೊದಲ ಬಾರಿಗೆ ಗಾಜಿನಮನೆಯಲ್ಲಿ ಆಯೋಜಿಸಿದ್ದ 10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ನಿರೀಕ್ಷೆಗೂ ಮೀರಿ ಜನಸಾಗರವೇ ಹರಿದು ಬಂದಿತ್ತು. ಇದೀಗ ಎರಡನೇ ಬಾರಿಗೆ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಡಾಲ್‌ಫಿನ್‌, ಮಿಕ್ಕಿಮೌಸ್‌, ಸೈಕಲ್‌, ಅಣಬೆ ಸೇರಿ ವಿವಿಧ ಆಕೃತಿಗಳನ್ನು ಹಲವು ಬಗೆಯ ಹೂವುಗಳನ್ನು ಬಳಸಿಕೊಂಡು ರೂಪಿಸಲಾಗುತ್ತಿದೆ. ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೂವಿನಿಂದ ‘ಫೋಟೊ ಫ್ರೇಮ್‌’ ನಿರ್ಮಿಸಲಾಗಿದೆ. ‘ಹಾರ್ಟ್‌’ ಮಾದರಿಯ ಆಕೃತಿಯನ್ನೂ ನಿರ್ಮಿಸಲಾಗುತ್ತಿದ್ದು, ಇದು ಯುವಕ–ಯುವತಿಯರ ಮನಸೂರೆಗೊಳ್ಳಲಿದೆ.

ADVERTISEMENT

ಸುಮಾರು 25 ಬಗೆಯ ಬೊನ್ಸಾಯ್‌ಗಳು, ಕ್ಯಾಕ್ಟಸ್‌ ಸಸಿಗಳನ್ನು ಪ್ರದರ್ಶನದಲ್ಲಿ ಇಡಲಾಗುತ್ತಿದೆ. ಲಿಲ್ಲಿ, ಗುಲಾಬಿ, ಅಂಥೋನಿಯಂ, ಆರ್ಕಿಡ್‌, ಜಿನಿಯಾ, ಚೆಂಡುಹೂ, ಬಾಲ್ಸ್‌ ಸೀಮಾ ಸೇರಿ ಹಲವು ಹೂವಿನ ಗಿಡಗಳ ಕುಂಡಗಳನ್ನು ಗಾಜಿನಮನೆಯ ಆವರಣದ ಸುತ್ತಲೂ ಅಂದವಾಗಿ ಜೋಡಿಸಿಡಲಾಗುತ್ತಿದೆ. 20 ಬಗೆಯ ದೇಶ–ವಿದೇಶಗಳ ಹಣ್ಣುಗಳನ್ನೂ ಪ್ರದರ್ಶನಕ್ಕೆ ಇಡಲಾಗುತ್ತಿದೆ.

ಮರಿಗೌಡರ ಕಲಾಕೃತಿ: ತೋಟಗಾರಿಕೆಯ ಪಿತಾಮಹಾ ಡಾ. ಎಂ.ಎಚ್‌. ಮರಿಗೌಡ ಅವರ ಕಲಾಕೃತಿಯನ್ನು ಈ ಬಾರಿ ಸಿರಿಧಾನ್ಯದಲ್ಲಿ ನಿರ್ಮಿಸುತ್ತಿರುವುದು ಒಂದು ವಿಶೇಷವಾಗಿದೆ. ಜೊತೆಗೆ ಡಾ. ಬಿ.ಆರ್‌. ಅಂಬೇಡ್ಕರ್‌, ಬಸವಣ್ಣ ಅವರ ಕಲಾಕೃತಿಗಳೂ ಗಮನ ಸೆಳೆಯಲಿವೆ.

ಈ ಬಾರಿಯೂ ತರಕಾರಿಗಳಿಂದ ಕೆತ್ತಿರುವ ಸುಮಾರು 20 ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ. ಪ್ರಾಣಿ ಸೇರಿ ವಿವಿಧ ಆಕಾರದ ಕಲಾಕೃತಿಗಳು ಬೆರಗು ಮೂಡಿಸಲಿವೆ. ಮೀನುಗಾರಿಕಾ ಇಲಾಖೆಯಿಂದ ಮತ್ಸ್ಯ ಪ್ರದರ್ಶನವನ್ನೂ ಆಯೋಜಿಸಲಾಗುತ್ತಿದ್ದು, ಇದು ಮಕ್ಕಳನ್ನು ಸೆಳೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ: ‘ಫಲಪುಷ್ಪ ಪ್ರದರ್ಶನಕ್ಕೆ ಬರುವ ಜನರನ್ನು ರಂಜಿಸಲು ಪ್ರತಿ ದಿನಾಲೂ ಸಂಜೆ 7ರಿಂದ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗಾಜಿನಮನೆ ಹಾಗೂ ವಿದೇಶಿ ಅಲಂಕಾರಿಕ ಗಿಡಗಳಿಗೆ ವಿದ್ಯುತ್‌ ಅಲಂಕಾರ ಮಾಡಲಾಗುತ್ತಿದ್ದು, ರಾತ್ರಿ ವೇಳೆ ಇಡೀ ಆವರಣದ ಝಗಮಗಿಸಲಿದೆ. ಗಣೇಶೋತ್ಸವ ಮುಗಿಯುವವರೆಗೂ ಗಾಜಿನಮನೆಗೆ ವಿದ್ಯುತ್‌ ದೀಪಾಲಂಕಾರ ಉಳಿಸಿಕೊಳ್ಳಬೇಕು ಎಂದುಕೊಂಡಿದ್ದೇವೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬಿ. ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಆ. 23ರಿಂದ 27ರವರೆಗೆ ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. ದೊಡ್ಡವರಿಗೆ ₹ 20 ಹಾಗೂ ಮಕ್ಕಳಿಗೆ ₹ 10 ಪ್ರವೇಶ ಶುಲ್ಕ ನಿಗದಿಗೊಳಿಸಲಾಗಿದೆ.

ಐಫೆಲ್‌ ಟವರ್‌ ಮೆರುಗು

ಪ್ಯಾರಿಸ್‌ನ ‘ಐಫೆಲ್‌ ಟವರ್‌’ ಮಾದರಿ ಈ ಬಾರಿಯ ಫಲಪುಷ್ಪ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿದೆ. 35 ಅಡಿ ಎತ್ತರದ ಐಫೆಲ್‌ ಟವರ್‌ ಮಾದರಿ ಗಮನ ಸೆಳೆಯಲಿದೆ. ಗಾಜಿನಮನೆಯ ಮಧ್ಯದಲ್ಲಿ ಈ ಮಾದರಿಯನ್ನು ನಿರ್ಮಿಸಲಾಗಿದೆ. ಇದಕ್ಕೆ ಸುಮಾರು 80 ಸಾವಿರ ಗುಲಾಬಿ ಹೂವುಗಳನ್ನು ಬಳಸಲಾಗುತ್ತಿದೆ. ಇದು ‘ಸೆಲ್ಫಿ’ ತೆಗೆದುಕೊಂಡು ಸಂಭ್ರಮಿಸುವವರ ನೆಚ್ಚಿನ ತಾಣವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.