ADVERTISEMENT

ಅಗ್ನಿಪಥ ಯೋಜನೆ ಕೈಬಿಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 2:46 IST
Last Updated 24 ಜೂನ್ 2022, 2:46 IST
ಅಗ್ನಿಪಥ ಯೋಜನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ದಾವಣಗೆರೆಯ ಉಪವಿಭಾಗಾಧಿಕಾರಿ ಕಚೇರಿ ಎದುರು ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾ ಸಮಿತಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು
ಅಗ್ನಿಪಥ ಯೋಜನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ದಾವಣಗೆರೆಯ ಉಪವಿಭಾಗಾಧಿಕಾರಿ ಕಚೇರಿ ಎದುರು ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾ ಸಮಿತಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು   

ದಾವಣಗೆರೆ:ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಅಗ್ನಿಪಥ’ ಯೋಜನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾ ಸಮಿತಿಯಿಂದ ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

‘ಅಗ್ನಿಪಥ’ ಯೋಜನೆಯನ್ನು ಮೂಲಕದೇಶದ ಸೈನ್ಯದ ವ್ಯವಸ್ಥೆಯನ್ನೇ ನಾಶ ಮಾಡುವ ಹುನ್ನಾರ ಅಡಗಿದೆ. ದೇಶದ ಸೇವೆಗೆ ಸೈನ್ಯ ಸೇರಬೇಕು. ದೇಶ ಸೇವೆಯ ಜೊತೆಗೆ ಕುಟುಂಬದ ನಿರ್ವಹಣೆಯನ್ನು ಮಾಡಬೇಕು ಎಂದು ಲಕ್ಷಾಂತರ ಯುವಜನರಿಗೆ ಕನಸು ಕಾಣುತ್ತಿದ್ದಾರೆ. ಅಗ್ನಿಪಥ ಯೋಜನೆ ಕನಸಿಗೆ ಭಂಗ ತರುತ್ತಿದೆ. ದೇಶದ ಯುವಜನರು ಕಾಯಂ ಉದ್ಯೋಗ ಬಯಸುತ್ತಿದ್ದಾರೆಯೇ ಹೊರತು ತಾತ್ಕಾಲಿಕ ಉದ್ಯೋಗವಲ್ಲ ಎಂದುಅಖಿಲ ಭಾರತ ಯುವಜನ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ದೂರಿದರು.

ಅಗ್ನಿಪಥ ಯೋಜನೆಯಿಂದ ನಾಲ್ಕು ವರ್ಷಗಳಿಗೆ ಸೇನೆಯಲ್ಲಿ ತಾತ್ಕಾಲಿಕ ನೇಮಕಾತಿ ಮಾಡಿಕೊಂಡು ಆ ನಂತರ ಅವರನ್ನು ಪ್ರಮಾಣಪತ್ರ ನೀಡಿ ಬಿಡುಗಡೆಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಹೀಗಾದರೆ ಅವರ ಮುಂದಿನ ಭವಿಷ್ಯವೇನು? ಈ ನೇಮಕಾತಿ ವಿಧಾನವು ದೇಶದ ಆಂತರಿಕ ಮತ್ತು ಬಾಹ್ಯದ ಭದ್ರತೆಗೆ ಅಪಾಯಕಾರಿಯಾಗಿದೆ ಎಂದು ಅವರು ಆರೋಪಿಸಿದರು.

ADVERTISEMENT

ಸಮಿತಿ ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪೇಶಿ, ಜಿಲ್ಲಾ ಉಪಾಧ್ಯಕ್ಷ ನಿಟುವಳ್ಳಿ ಜೀವನ್, ಜಿಲ್ಲಾ ಉಪಾಧ್ಯಕ್ಷ ಗುರುಮೂರ್ತಿ ಸಿ., ಶೇಖರ್ ಕೆ., ಪದಾಧಿಕಾರಿಗಳಾದ ರುದ್ರೇಶ್ ಮಳಲ್ಕೆರೆ, ಫೈಜುಲ್‍ ವುಲ್ಲಾ, ಇರ್ಫಾನ್, ಮಂಜುನಾಥ್ ಮಳಲ್ಕೆರೆ, ಮಂಜುನಾಥ್ ಡಿ. ಹಳೇ ಚಿಕ್ಕನಹಳ್ಳಿ, ಪರಶುರಾಮ್ ಗುದ್ದಾಲ್, ಹನುಮಂತಪ್ಪ ಎ.ಕೆ., ಹನುಮಂತಪ್ಪ ನಾಗತಿಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.