ADVERTISEMENT

ಶಾಸಕರು ತಂದ ಅನುದಾನದ ಲೆಕ್ಕ ಕೊಡಲಿ:ಎಚ್.ಎಸ್. ಶಿವಶಂಕರ್ ಸವಾಲು

ಹರಿಹರ: ಆಟೊ ನಿಲ್ದಾಣ ಉದ್ಘಾಟಿಸಿದ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಸವಾಲು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 5:31 IST
Last Updated 2 ನವೆಂಬರ್ 2021, 5:31 IST
ಹರಿಹರ ಜೆ.ಸಿ. ಬಡಾವಣೆಯ 5ನೇ ಮುಖ್ಯ ರಸ್ತೆಯಲ್ಲಿ ನಗರಸಭೆಯಿಂದ ನಿರ್ಮಾಣ ಮಾಡಿರುವ ಆಟೊ ನಿಲ್ದಾಣವನ್ನು ಉದ್ಘಾಟಿಸಿ ಎಚ್.ಎಸ್. ಶಿವಶಂಕರ್ ಮಾತನಾಡಿದರು.
ಹರಿಹರ ಜೆ.ಸಿ. ಬಡಾವಣೆಯ 5ನೇ ಮುಖ್ಯ ರಸ್ತೆಯಲ್ಲಿ ನಗರಸಭೆಯಿಂದ ನಿರ್ಮಾಣ ಮಾಡಿರುವ ಆಟೊ ನಿಲ್ದಾಣವನ್ನು ಉದ್ಘಾಟಿಸಿ ಎಚ್.ಎಸ್. ಶಿವಶಂಕರ್ ಮಾತನಾಡಿದರು.   

ಹರಿಹರ: ‘ಶಾಸಕ ಎಸ್ ರಾಮಪ್ಪ ಮೂರೂವರೆ ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆಂದು ಜನರ ಮುಂದಿಡಲಿ. ಆಗ ನಾನು ಎಷ್ಟು ತಂದಿದ್ದೆ ಎಂಬ ವಿವರವನ್ನು ನೀಡುತ್ತೇನೆ’ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಶಾಸಕರಿಗೆ ಸವಾಲು ಹಾಕಿದರು.

ನಗರದ ಜೆಸಿ ಬಡಾವಣೆಯ 5ನೇ ಮುಖ್ಯ ರಸ್ತೆಯಲ್ಲಿ ನಗರಸಭೆಯಿಂದ ನಿರ್ಮಾಣ ಮಾಡಿರುವ ಎಚ್.ಎಸ್. ಶಿವಶಂಕರ್ ಆಟೊ ನಿಲ್ದಾಣ ಉದ್ಘಾಟಿಸಿ ಅವರು ಮಾತನಾಡಿದರು.

‘ಈಚೆಗೆ ಕೊಮಾರನಹಳ್ಳಿ ಕೆರೆಗೆ ಬಾಗಿನ ಅರ್ಪಿಸುವ ಸಮಯದಲ್ಲಿ ಮಾಜಿ ಶಾಸಕ ತಮ್ಮ ಐದು ವರ್ಷಗಳ ಅವಧಿಯಲ್ಲಿ ₹ 10 ಕೋಟಿಯಷ್ಟು ಅನುದಾನ ಕೂಡ ಕ್ಷೇತ್ರಕ್ಕೆ ತಂದಿಲ್ಲ ಎಂದು ಶಾಸಕ ರಾಮಪ್ಪ ಹೇಳಿಕೆ ನೀಡಿದ್ದರು. ನಾನು ಎಷ್ಟು ಅನುದಾನ ತಂದಿದ್ದೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧ ಇದ್ದೇನೆ’ ಎಂದು ತಿರುಗೇಟು ನೀಡಿದರು.

ADVERTISEMENT

‘ಹರಿಹರ ನಗರಸಭೆಗೆ ಬಂದಿದ್ದ ವಿಶೇಷ ಅನುದಾನ ₹ 8 ಕೋಟಿ ಸೇರಿ ಹಲವು ಅನುದಾನಗಳನ್ನು ಬಿಜೆಪಿ ಸರ್ಕಾರ ವಾಪಸ್ ಪಡೆದಿದೆ. ಸಭೆ-ಸಮಾರಂಭಗಳಲ್ಲಿ ಮಾತನಾಡಿ ಕಾಲಹರಣ ಮಾಡುತ್ತಿದ್ದಾರೆ. ಅವರು ಶಾಸಕರಾಗಿ ಮಂಜೂರಾದ ಅನುದಾನ ಮರಳಿ ತರುವಲ್ಲಿ ಪ್ರಯತ್ನಮಾಡುತ್ತಿಲ್ಲ. ವಿರೋಧ ಪಕ್ಷದ ಶಾಸಕರಿಗೆ ಸರ್ಕಾರ ಸ್ಪಂದಿಸುತ್ತಿಲ್ಲಎಂಬ ಹೇಳಿಕೆ ನೀಡಿ ಸುಮ್ಮನಿದ್ದಾರೆ. ನಾನು ಶಾಸಕನಾಗಿದ್ದ ವೇಳೆ ವಿರೋಧ ಪಕ್ಷದಲ್ಲಿ ಇದ್ದರೂ ಸಾಕಷ್ಟು ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಇವರಿಗೆ ತರಲು ಆಗುವುದಿಲ್ಲ ಎಂದಾದರೆ ಏಕೆ ಶಾಸಕರಾಗಿ ಇರಬೇಕು’ ಎಂದು ಪ್ರಶ್ನಿಸಿದರು.

ಅಗಸನಕಟ್ಟೆ ಕೆರೆ ವಿಚಾರದಲ್ಲಿ ಖಾದಿ, ಕಾವಿ, ಮಾಜಿ ಮಂತ್ರಿಗಳು, ಚಿಂತಕರೆಲ್ಲ ಸೇರಿ ಚರ್ಚೆ, ಸಭೆಗಳನ್ನು ನಡೆಸಿ ನಿಯೋಗ ಹೋದದ್ದು ಏನಾಯಿತು? ನನ್ನ ಅವಧಿಯಲ್ಲಿ ಬಸವ ವಸತಿ ಯೋಜನೆಗಳಲ್ಲಿ ಮಂಜೂರಾಗಿದ್ದ ಮನೆಗಳನ್ನು ನಿಮ್ಮಿಂದ ಉಳಿಸಿಕೊಳ್ಳಲಾಗಲಿಲ್ಲ. ನಿಮ್ಮಿಂದ ಕ್ಷೇತ್ರದ ಜನತೆ ಏನನ್ನುನಿರೀಕ್ಷೆ ಮಾಡಬಹುದು’ ಎಂದು ಕೇಳಿದರು.

ಸಮಾರಂಭದಲ್ಲಿ ಆಟೋ ಚಾಲಕರ ಸಂಘದ ಗೌರವ ಅಧ್ಯಕ್ಷ ಸಿದ್ದಲಿಂಗಸ್ವಾಮಿ, ‘ಶಿವಶಂಕರ್ ಅವರಲ್ಲಿ ಇಲ್ಲಿನ ಆಟೊ ಚಾಲಕರು ಮಾಡಿದ ಮೌಖಿಕ ಮನವಿಗೆ ಕೂಡಲೇ ಸ್ಪಂದಿಸಿದ್ದಾರೆ. ವಾರ್ಡಿನ ನಗರಸಭೆ ಸದಸ್ಯರಾದ ಉಷಾ ಮಂಜುನಾಥ್ ಮತ್ತು ಪತಿ ಮಂಜುನಾಥ್ ಗಮನಕ್ಕೆ ತಂದು ಅಧಿಕಾರಿಗಳೊಂದಿಗೆ ಚರ್ಚಿಸಿ ಕೇವಲ ಒಂದು ತಿಂಗಳಲ್ಲಿ ಆಟೊ ನಿಲ್ದಾಣ ನಿರ್ಮಿಸಿಕೊಟ್ಟಿದ್ದಾರೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೇಯ ಆಸ್ಪತ್ರೆಯ ವೈದ್ಯೆ ಡಾ. ರಶ್ಮಿ, ಶ್ರೀಗುರು ಬ್ರಹ್ಮಾನಂದ ಮಠದ ವಿವೇಕಾನಂದ ಸ್ವಾಮಿ ಸೇರಿ ಹಲವರು ಮಾತನಾಡಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಚಿದಾನಂದಪ್ಪ, ನಗರಸಭೆ ಅಧ್ಯಕ್ಷೆ ರತ್ನಾ ಡಿ. ಉಜ್ಜೇಶ್, ಸದಸ್ಯರಾದ ಆರ್.ಸಿ. ಜಾವಿದ್, ದಾದಾ ಖಲಂದರ್, ಉಷಾ ಮಂಜುನಾಥ್, ಮುಜಮಿಲ್ ಬಿಲ್ಲು, ಜಾಕೀರ್, ಮನ್ಸೂರ್, ನಿಂಬಕ್ಕ ಚಂದಾಪುರ, ಆಟೊ ಚಾಲಕರ ಸಂಘದ ಅಧ್ಯಕ್ಷ ಮೋಹನ್, ಮುಖಂಡರಾದ ನಂಜಪ್ಪ, ಲಕ್ಷ್ಮಿ ಆಚಾರ್, ಸುರೇಶ್ ಹಾದಿಮನಿ, ರೇವಣಸಿದ್ದಪ್ಪ ಅಂಗಡಿ, ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ, ಫೈನಾನ್ಸ್ ಮಂಜುನಾಥ್, ಸಿ.ಎನ್. ಮಂಜುನಾಥ್ ಅವರೂ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.