ADVERTISEMENT

ಪರಿಶಿಷ್ಟ ಜಾತಿ ಪಟ್ಟಿಗೆ ನಾಲ್ಕು ಜನಾಂಗ ಅನಧಿಕೃತ ಸೇರ್ಪಡೆ: ಆರೋಪ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:43 IST
Last Updated 4 ಸೆಪ್ಟೆಂಬರ್ 2021, 3:43 IST

ದಾವಣಗೆರೆ: ‘ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಅನಧಿಕೃತವಾಗಿ ಸೇರ್ಪಡೆಗೊಂಡ ನಾಲ್ಕು ಜಾತಿಗಳನ್ನು ತೆಗೆದು ಹಾಕಲು ಪ್ರಸ್ತಾವ ಸಲ್ಲಿಸುವಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್‌ ಹಾಗೂ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ನಿರ್ದೇಶನವನ್ನು ಉಲ್ಲಂಘಿಸಿದ್ದಾರೆ’ ಎಂದು ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಯುವ ಘಟಕದ ರಾಜ್ಯಾಧ್ಯಕ್ಷ ಕೃಷ್ಣ ಸಿ.ಎಂ. ಆರೋಪಿಸಿದರು.

‘ಬಂಜಾರ, ಬೋವಿ, ಕೊರಮ ಹಾಗೂ ಕೊರಚ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆದು ಹಾಕುವ ಕುರಿತು ಸುಪ್ರೀಂ ಕೋರ್ಟ್ ಹಾಗೂ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ಮುಖ್ಯ ಕಾರ್ಯದರ್ಶಿಗೆ ಪ್ರಸ್ತಾವ ಸಲ್ಲಿಸಲು ಆದೇಶಿಸಿತ್ತು. ಆದರೆ ಮುಖ್ಯ ಕಾರ್ಯದರ್ಶಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿ ಆದೇಶ ಉಲ್ಲಂಘಿಸಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳಿಂದ ಆಯ್ಕೆಗೊಂಡಿರುವ ಹೊಲೆಯ, ಮಾದಿಗ ಜನಪ್ರತಿನಿಧಿಗಳೂ ಈ ಬಗ್ಗೆ ಮೌನ ವಹಿಸಿದ್ದು, ಸಮುದಾಯಕ್ಕೆ ದ್ರೋಹ ಎಸಗಿದ್ದಾರೆ. ಇದು ಖಂಡನೀಯ ಎಂದರು.

ADVERTISEMENT

ಕೂಡಲೇ ಮುಖ್ಯ ಕಾರ್ಯದರ್ಶಿಗಳು ಪ್ರಸ್ತಾವವನ್ನು ಸಲ್ಲಿಸಬೇಕು. ಅಲ್ಲದೇ ಸುಳ್ಳು ಜಾತಿ ಪ್ರಮಾಣಪತ್ರ ಪಡೆದುಕೊಂಡವರು ಹಾಗೂ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಅಲ್ಲದೇ ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರುಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕೆ.ರವಿ, ಸಿದ್ದೇಶ್, ಇಬ್ರಾಹಿಂ, ದಾದಾಪೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.