ADVERTISEMENT

ಬಡ ವಿದ್ಯಾರ್ಥಿಗಳಿಗೆ ನೀಟ್‌ಗೆ ಉಚಿತ ತರಬೇತಿ

ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ನಿರ್ದೇಶಕ ಡಾ.ಡಿ.ಎಸ್. ಜಯಂತ್

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 3:18 IST
Last Updated 8 ನವೆಂಬರ್ 2020, 3:18 IST

ದಾವಣಗೆರೆ: ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥ ದಿ. ಶಿವಣ್ಣ ಅವರ ಸ್ಮರಣಾರ್ಥ 50 ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಗೆ ಉಚಿತವಾಗಿ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದು ಪದವಿಪೂರ್ವ ಕಾಲೇಜಿನ ನಿರ್ದೇಶಕ ಡಾ.ಡಿ.ಎಸ್. ಜಯಂತ್ ಹೇಳಿದರು.

‘ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯಿತ್ತು. ಮಾರ್ಚ್‍ನಲ್ಲಿ 200 ಮಕ್ಕಳಿಗೆ ಉಚಿತ ಸಿಇಟಿ ತರಬೇತಿ ನೀಡುವ ಉದ್ದೇಶ ಹೊಂದಲಾಗಿತ್ತು. ಲಾಕ್‍ಡೌನ್ ಕಾರಣ ಇದು ಕಾರ್ಯರೂಪಕ್ಕೆ ಬರಲಿಲ್ಲ. ಇದಕ್ಕೆ ಪರ್ಯಾಯವಾಗಿ ಈಗ ನೀಟ್ ಪರೀಕ್ಷೆಗೆ ದೀರ್ಘ ಅವಧಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕಡಿಮೆ ಶುಲ್ಕದೊಂದಿಗೆ 150 ವಿದ್ಯಾರ್ಥಿಗಳಿಗೆ ನೀಟ್‌ಗೆ ದೀರ್ಘ ಅವಧಿಗೆ ತರಬೇತಿ ನಿಡಲಾಗುತ್ತದೆ. ಉಳಿದ 50 ಮಂದಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ಕೊಡಲಾಗುತ್ತದೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು 400ಕ್ಕಿಂತ ಹೆಚ್ಚು, ಹಿಂದುಳಿದ ವರ್ಗದವರು 350, ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳು 300ಕ್ಕಿಂತ ಹೆಚ್ಚು ಅಂಕ ಪಡೆದವರು ಈ ವರ್ಷದ ಮೆಡಿಕಲ್ ಸೀಟ್‌ನಿಂದ ವಂಚಿತರಾಗಿದ್ದರೆ ಕಾಲೇಜಿನಲ್ಲಿ ನುರಿತ ಅಧ್ಯಾಪಕರಿಂದ ತರಬೇತಿ ಪಡೆಯಬಹುದು’ ಎಂದು ಹೇಳಿದರು.

ADVERTISEMENT

‘ಉಚಿತವಾಗಿ ತರಬೇತಿ ನೀಡಲು ಪೋಷಕರ ಆದಾಯ ವಾರ್ಷಿಕ ₹8 ಲಕ್ಷ ಒಳಗಡೆ ವಿದ್ಯಾರ್ಥಿಗಳು ಆದಾಯ ಪ್ರಮಾಣ ಪತ್ರದೊಂದಿಗೆ ನೋಂದಣಿ ಮಾಡಿಕೊಂಡು ತರಬೇತಿ ಪಡೆಯಬಹುದು’ ಎಂದರು.

‘ಬಾಲಕ- ಬಾಲಕಿಯವರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಇದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ. ವಿವರಗಳಿಗೆ ಮೊ: 9982230899ಗೆ ಮಿಸ್ಡ್‌ ಕಾಲ್ ನೀಡಿ, ನವೆಂಬರ್ 18ರೊಳಗೆ ಹೆಸರು ನೋಂದಾಯಿಸಬಹುದು. 27ರಿಂದ ತರಬೇತಿ ಆರಂಭವಾಗಲಿದೆ’ ಎಂದು ಹೇಳಿದರು. ಗೋಷ್ಠಿಯಲ್ಲಿ ಗಾಯತ್ರಿ ಚಿಮ್ಮಡ್, ಕೆ.ಸಿ.ಸಿದ್ದಪ್ಪ, ಯು.ಡಿ.ಲಕ್ಷ್ಮೀನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.