ADVERTISEMENT

ಗಂಗಾಕಲ್ಯಾಣ ಪಟ್ಟಿಗೆ ಅನುಮೋದನೆ ಪಡೆಯಿರಿ

ಕೆಡಿಪಿ ಸಭೆಯಲ್ಲಿ ತಾ.ಪಂ.ಆಡಳಿತಾಧಿಕಾರಿ ಲಕ್ಷ್ಮಣ್ ತಳವಾರ್‌

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2025, 16:00 IST
Last Updated 22 ಫೆಬ್ರುವರಿ 2025, 16:00 IST
ಮೊಳಕಾಲ್ಮುರು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಕೆಡಿಪಿ ಸಭೆ ನಡೆಯಿತು
ಮೊಳಕಾಲ್ಮುರು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಕೆಡಿಪಿ ಸಭೆ ನಡೆಯಿತು   

ಮೊಳಕಾಲ್ಮುರು: ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆಬಾವಿ ಕೊರೆಸಲು ಫಲಾನುಭವಿಗಳ ಪಟ್ಟಿಗೆ ಶೀಘ್ರ ಅನುಮೋದನೆ ಪಡೆದು ಮಾರ್ಚ್‌ ಅಂತ್ಯಕ್ಕೆ ಆಡಳಿತಾತ್ಮಕ ಮಂಜೂರಾತಿ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಲಕ್ಷ್ಮಣ್ ತಳವಾರ್‌ ಸೂಚಿಸಿದರು.

ತಾಲ್ಲೂಕು ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಳೆದ ವರ್ಷ ಮತ್ತು ಈ ವರ್ಷದ ಒಟ್ಟು 32 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿದೆ. ಇದಕ್ಕೆ 138 ಅರ್ಜಿಗಳು ಬಂದಿದ್ದು, ಅಂತಿಮಗೊಳಿಸಿ ಶಾಸಕರ ಅನುಮೋದನೆ ಪಡೆಯಬೇಕು. ಇದನ್ನು ಮಾರ್ಚ್ ತಿಂಗಳ ಒಳಗಾಗಿ ಮಾಡಬೇಕಿದೆ. ವಿಳಂಬವಾದಲ್ಲಿ ಅನುದಾನ ವಾಪಾಸ್‌ ಹೋಗಲಿದೆ. ತಕ್ಷಣ ಕಾರ್ಯ ಪ್ರವೃತ್ತರಾಗಿ ಪಟ್ಟಿಗೆ ಅನುಮೋದನೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.

ADVERTISEMENT

ಪಟ್ಟಣದ ಬಿಆರ್‌ಸಿ ಕಚೇರಿ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಟ್ಟಡವನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. 2 ವರ್ಷಗಳಿಂದ ಸ್ಥಗಿತವಾಗಿರುವ ಈ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಲಾಗುತ್ತಿದೆ. ಮಂಜೂರಾಗಿದ್ದ ₹ 50 ಲಕ್ಷ ಅನುದಾನವನ್ನು ಅಡಿಪಾಯಕ್ಕೆ ಖರ್ಚು ಮಾಡಲಾಗಿದೆ. ಪೂರ್ಣಗೊಳಿಸಲು ಕ್ರಮ ಕೈಗೊಳ್ಳಿ ಎಂದು ಭೂಸೇನಾ ನಿಗಮದ ಎಂಜಿನಿಯರ್‌ಗೆ ಸೂಚಿಸಿದರು.

‘ಕಟ್ಟಡಕ್ಕೆ ಸಂಬಂಧಪಟ್ಟಂತೆ ₹ 1.40 ಕೋಟಿ ಅನುದಾನ ಬರಬೇಕಿದೆ. ಇದನ್ನು ಮಂಜೂರು ಮಾಡಿದಲ್ಲಿ ಪೂರ್ಣಗೊಳಿಸಲು ಸಿದ್ಧ. ಶೀಘ್ರ 2025-26ನೇ ಸಾಲಿನ ಹೊಸ ಕ್ರಿಯಾಯೋಜನೆ ಅನುಷ್ಠಾನಕ್ಕೆ ಬರಲಿದೆ’ ಎಂದು ಎಂಜಿನಿಯರ್‌ ತಿಳಿಸಿದರು.

ತಾಲ್ಲೂಕಿನ ಕೆಲ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆ ಎಂಬ ದೂರುಗಳು ಬಂದಿದ್ದು, ನಿಯೋಜನೆ ಮೂಲಕ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಆಂಬುಲೆನ್ಸ್‌ಗಳನ್ನು ನಿಯೋಜನೆ ಮಾಡುವ ಮೂಲಕ ಸೇವೆಗೆ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಇಒ ಎಂ. ಹನುಮಂತಪ್ಪ, ವ್ಯವಸ್ಥಾಪಕ ನಂದೀಶ್‌ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.