ADVERTISEMENT

8, 9ರಂದು ಸಾರ್ವತ್ರಿಕ ಮುಷ್ಕರ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 16:31 IST
Last Updated 3 ಜನವರಿ 2019, 16:31 IST

ದಾವಣಗೆರೆ: ದೇಶದ ಆರ್ಥಿಕ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುವ ನೀತಿಗಳನ್ನು ಜಾರಿಗೆ ತರುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಜ.8 ಮತ್ತು 9ರಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ (ಜೆಸಿಟಿಯು) ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಜೆಸಿಟಿಯು ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ಹೇಳಿದರು.

ಜಿಎಸ್‌ಟಿ, ನೋಟು ಅಮಾನ್ಯ, ಕಾರ್ಮಿಕ ಕಾನೂನುಗಳ ತಿದ್ದುಪಡಿ, ಸಾರ್ವಜನಿಕ ರಂಗದ ಖಾಸಗೀಕರಣ, ಶಿಕ್ಷಣ, ಆರೋಗ್ಯ, ವಸತಿಗಳ ವೆಚ್ಚದಲ್ಲಿ ಕಡಿತ, ಬ್ಯಾಂಕ್‌ಗಳ ಲೂಟಿ ಮಾಡಲಾಗುತ್ತಿದೆ. 2013–14ರಲ್ಲಿ ಶೇ 1ರಷ್ಟು ಮಂದಿಯಲ್ಲಿ ಈ ದೇಶದ ಶೇ 43ರಷ್ಟು ಸಂಪತ್ತು ಇತ್ತು. ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಅದು ಹೆಚ್ಚಾಗುತ್ತಾ ಹೋಗಿದ್ದು, 2017–18ರಲ್ಲಿ ಶೇ 1ರಷ್ಟು ಮಂದಿ ಶೇ 73ರಷ್ಟು ಆಸ್ತಿ ಹೊಂದಿದ್ದಾರೆ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಮಿಕರಿಗೆ ದೇಶವ್ಯಾಪಿ ಕನಿಷ್ಠ ವೇತನ ₹ 18 ಸಾವಿರ ನಿಗದಿ ಮಾಡಬೇಕು. ಎಲ್ಲ ನೌಕರರನ್ನು ಕಾಯಂಗೊಳಿಸಬೇಕು. ಡಾ.ಅಂಬೇಡ್ಕರ್‌ ಅವರು ಕಾರ್ಮಿಕರ ಪರವಾಗಿ ಜಾರಿಗೆ ತಂದಿದ್ದ 44 ಕಾನೂನುಗಳನ್ನು ರದ್ದು ಮಾಡುವ ಕೇಂದ್ರದ ಮಸೂದೆಯನ್ನು ಕೈಬಿಡಬೇಕು. ಧರ್ಮ ನಿರಾಪೇಕ್ಷ ಭಾರತವನ್ನು ಮತ್ತು ಸಂವಿಧಾನವನ್ನು ರಕ್ಷಿಸಬೇಕು ಇತ್ಯಾದಿ ಬೇಡಿಕೆಗಳನ್ನು ಇಟ್ಟುಕೊಂಡು ಮುಷ್ಕರ ಮಾಡಲಾಗುತ್ತಿದೆ ಎಂದರು.

ADVERTISEMENT

ಜ.5ರಂದು ಸಂಜೆ 6ಕ್ಕೆ ರಾಮ್‌ ಆ್ಯಂಡ್‌ ಕೋ ಸರ್ಕಲ್‌ ಮತ್ತು ಸಂಜೆ 7.30ಕ್ಕೆ ಭಗತ್‌ಸಿಂಗ್‌ ನಗರದಲ್ಲಿ, ಜ.6ರಂದು ಸಂಜೆ 6ಕ್ಕೆ ಹೊಂಡದ ಸರ್ಕಲ್‌ನಲ್ಲಿ, ಸಂಜೆ 7.30ಕ್ಕೆ ಅಕ್ತರ್‌ ರಜಾ ಸರ್ಕಲ್‌ನಲ್ಲಿ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ಜ.7ರಂದು ಬೆಳಿಗ್ಗೆ 11ಕ್ಕೆ ಬೈಕ್‌ ರ‍್ಯಾಲಿ, 8ರಂದು ಬೆಳಿಗ್ಗೆ 9ಕ್ಕೆ ಜಯದೇವ ವೃತ್ತದಿಂದ ಮೆರವಣಿಗೆ ಬಹಿರಂಗ ಸಭೆ, 9ರಂದು ಕಡಿಯಾರ ಕಂಬದ ಬಳಿ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರಾದ ಕೆ.ಎಲ್‌. ಭಟ್‌, ಮಂಜುನಾಥ ಕುಕ್ಕವಾಡ, ತಿಪ್ಪೇಸ್ವಾಮಿ, ಆವರಗೆರೆ ಚಂದ್ರು, ಆನಂದರಾಜ್‌, ಕೆ.ಎಚ್‌. ಆನಂದರಾಜ್‌, ಉಮೇಶ್‌, ಎಚ್‌.ಜಿ ಉಮೇಶ್‌, ಶ್ರೀನಿವಾಸಮೂರ್ತಿ, ಆವರಗೆರೆ ಚಂದ್ರು, ಶ್ರೀನಿವಾಸಮೂರ್ತಿ, ಮಂಜುನಾಥ್‌, ಶಿವಾಜಿರಾವ್‌, ಹನುಮಂತಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.