ADVERTISEMENT

ದಾವಣಗೆರೆ: ಅಡವಿಟ್ಟ ಚಿನ್ನಾಭರಣ ಮರಳಿಸಲು ಆಗ್ರಹ

ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಪ್ರತಿಭಟನೆಗಿಳಿದ ಗ್ರಾಹಕರು; ವಾರದಲ್ಲಿ ನಿರ್ಣಯ ಕೈಗೊಳ್ಳುವ ಭರವಸೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 4:18 IST
Last Updated 13 ಸೆಪ್ಟೆಂಬರ್ 2025, 4:18 IST
ನ್ಯಾಮತಿ ಎಸ್.ಬಿ.ಐ ಬ್ಯಾಂಕ್‌ನಲ್ಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದಿದ್ದ ಗ್ರಾಹಕರು ಶುಕ್ರವಾರ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು 
ನ್ಯಾಮತಿ ಎಸ್.ಬಿ.ಐ ಬ್ಯಾಂಕ್‌ನಲ್ಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದಿದ್ದ ಗ್ರಾಹಕರು ಶುಕ್ರವಾರ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು    

ನ್ಯಾಮತಿ: ಪಟ್ಟಣದ ಎಸ್.ಬಿ.ಐ ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನಾಭರಣ ಕಳವು ಪ್ರಕರಣ ಪತ್ತೆಯಾಗಿ 6 ತಿಂಗಳಾಗುತ್ತ ಬಂದರೂ ಗ್ರಾಹಕರಿಗೆ ಹಿಂತಿರುಗಿಸಲು ಕ್ರಮ ಕೈಗೊಂಡಿಲ್ಲ ಎಂದು ಚಿನ್ನಾಭರಣ ಅಡವಿಟ್ಟ ಗ್ರಾಹಕರು ಶುಕ್ರವಾರ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು.

‘ನಮ್ಮ ಬಂಗಾರ ನಮಗೆ ಬೇಕು. ಸಾಲ ಮರುಪಾವತಿಸಲು ನಾವು ಸಿದ್ಧರಿದ್ದೇವೆ. ಯಾವುದೇ ಕಾರಣ ಹೇಳದೆ ಬಂಗಾರ ಕೊಡಿ’ ಎಂದು ಗ್ರಾಹಕರು ಬ್ಯಾಂಕ್ ಮುಂದೆ ಘೋಷಣೆ ಕೂಗಿ, ‘ಈ ಬಗ್ಗೆ ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡಬೇಕು’ ಎಂದು ಪಟ್ಟು ಹಿಡಿದು ಬ್ಯಾಂಕ್ ಮುಂದೆ ಕುಳಿತರು.

ಬ್ಯಾಂಕ್ ವಕೀಲ ರವಿ ಅವರು ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿ, ‘ಪತ್ತೆಯಾದ ಗ್ರಾಹಕರ ಬಂಗಾರದಲ್ಲಿ ಒಂದು ಗ್ರಾಂ ಸಹ ಕಡಿಮೆಯಾಗಬಾರದು ಎಂಬ ಉದ್ದೇಶವಿದೆ. ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ವಜಾ ಆಗಿದ್ದು, ಸಾಲಕ್ಕಾಗಿ ಅಡವಿಟ್ಟ ಚಿನ್ನಾಭರಣ ವಿವರಗಳ ಚೀಟಿ, ಸಾಲ ಪಡೆದ ಮಾಹಿತಿ ಚೀಲಗಳಲ್ಲಿ ಇತ್ತು. ಆದರೆ ಚೀಲಗಳಿಂದ ಹೊರಬಂದ ಚಿನ್ನಾಭರಣದ ಜೊತೆಗೆ ಚೀಟಿಗಳಿಲ್ಲ. ನೈಜ ವಾರಸುದಾರರನ್ನು ಪತ್ತೆ ಮಾಡುವುದು ಕಷ್ಟವಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ, ಬ್ಯಾಂಕ್ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

‘ಪೊಲೀಸರು ಕಳವು ಮಾಲನ್ನು ಪತ್ತೆ ಮಾಡಿ ಆರು ತಿಂಗಳಾಗಿದೆ. ಗ್ರಾಹಕರಿಗೆ ಚಿನ್ನಾಭರಣ ಹಿಂತಿರುಗಿಸುವ ಬಗ್ಗೆ ಶಿಘ್ರ ಕ್ರಮ ಕೈಗೊಳ್ಳಬೇಕು. ಗ್ರಾಹಕರು, ಚಿನ್ನಾಭರಣ ತೂಕ ಮಾಡಿದ ಚಿನಿವಾರ ಎಲ್ಲರೂ ಇದ್ದಾರೆ. ಕಾನೂನು ಪ್ರಕಾರವೇ ಬಂಗಾರ ಹಿಂತಿರುಗಿಸಿ’ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಎಸ್.ರವಿ ಬ್ಯಾಂಕ್‌ ಅಧಿಕಾರಿಗಳಿಗೆ ಸಲಹೆ ನೀಡಿದರು.

‘ಗ್ರಾಹಕರು ಬ್ಯಾಂಕ್‌ನಲ್ಲಿ ಗಲಾಟೆ ಮಾಡುವುದು, ಕಾನೂನು ಬಾಹಿರ ವರ್ತನೆ. ಯಾರು ಪ್ರತಿಭಟನೆ ಮಾಡಬಾರದು’ ಎಂದು ಎಚ್ಚರಿಸಿದರು.

‘ಚಿನ್ನಾಭರಣ ಕಳವು ಆದಾಗಿನಿಂದ ಪತ್ತೆಯಾದ ಇಲ್ಲಿಯವರೆಗೆ ಗ್ರಾಹಕರಿಗೆ ಬಡ್ಡಿ ಹಾಕಬಾರದು. ಸಿಬಿಲ್ ಸ್ಕೋರ್ ಸರಿಪಡಿಸಬೇಕು. ಬ್ಯಾಂಕ್‌ನಿಂದ ಗ್ರಾಹಕರ ಮೊಬೈಲ್‌ಗೆ ಹಣ ಪಾವತಿಸುವಂತೆ ಸಂದೇಶ ಬರಬಾರದು ಹಾಗೂ ಬ್ಯಾಂಕ್ ವ್ಯವಸ್ಥಾಪಕರು ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು’ ಎಂದು ಚಿನ್ನಾಭರಣ ಅಡವಿಟ್ಟಿರುವ ಗ್ರಾಹಕರಾದ ನಿವೃತ್ತ ಶಿಕ್ಷಕ ಯರಗನಾಳ್ ಎಂ.ಎಚ್.ಮಂಜಪ್ಪ, ರಾಮೇಶ್ವರ ತೀರ್ಥಲಿಂಗಪ್ಪ, ಕುದುರೆಕೊಂಡ ಉಮೇಶ, ಕುಂಬಾರ ಚನ್ನೇಶ, ಕೆಂಚಿಕೊಪ್ಪ ಗಜೇಂದ್ರ, ಚಟ್ನಹಳ್ಳಿ ರವಿ, ದಾನಿಹಳ್ಳಿ ಶಶಿಧರ, ರಾಣಿ, ಗೀತಾ ಆಗ್ರಹಿಸಿದರು.

ಅಧಿಕಾರಿಗಳ ಮತ್ತು ಗ್ರಾಹಕರ ಸಭೆ: ‘ಸೆ. 19ರಂದು ಬೆಳಿಗ್ಗೆ 11ಕ್ಕೆ ಸುರಹೊನ್ನೆ ಬನಶಂಕರಿ ದೇವಸ್ಥಾನ ಸಮುದಾಯ ಭವನದಲ್ಲಿ ಬ್ಯಾಂಕ್ ಅಧಿಕಾರಿಗಳು ಮತ್ತು ಗ್ರಾಹಕರ ಸಮ್ಮುಖದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳೋಣ’ ಎಂದು ದಾವಣಗೆರೆ ಬ್ಯಾಂಕ್ ಅಧಿಕಾರಿ ಆನಂದ ನಲ್ಕುದರೆ ತಿಳಿಸಿದರು.

ಬ್ಯಾಂಕ್ ವ್ಯವಸ್ಥಾಪಕ ಸುನೀಲ್‌ಕುಮಾರ್ ಯಾದವ್, ವಕೀಲರಾದ ಪ್ರಭಾಕರ, ಎಚ್.ಎಂ.ಸುನೀಲಕುಮಾರ, ಅಧಿಕಾರಿಗಳಾದ ಸುರೇಶ, ಅಮಿತ್, ಸ್ಟಾಲಿನ್,

ಬೇರೆಯವರ ಬಳಿ ಬಂಗಾರ ಪಡೆದು ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆದಿರುವೆ. ಬಂಗಾರ ವಾಪಸ್ ಕೊಡುವಂತೆ ಒತ್ತಡ ಹಾಕಿದ್ದಾರೆ. ಬ್ಯಾಂಕ್‌ನವರು ಇತ್ಯರ್ಥ ಮಾಡದಿದ್ದರೆ ಬ್ಯಾಂಕ್ ವ್ಯವಸ್ಥಾಪಕರ ಹೆಸರು ಬರೆದಿಟ್ಟು ವಿಷ ಕುಡಿಯುತ್ತೇನೆ.
– ಎಸ್.ಸುರೇಶ, ಗ್ರಾಹಕ ಯರಗನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.