
ಬಸವಾಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಸೋಮವಾರ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ವಿದ್ಯಾರ್ಥಿಗಳೊಂದಿಗೆ ಉಪಾಹಾರ ಸೇವಿಸಿದರು
ಬಸವಾಪಟ್ಟಣ: ಸೋಮವಾರ ಮುಂಜಾನೆಯ ಸೂರ್ಯೋದಯದ ವೇಳೆ ಚುಮುಚುಮು ಚಳಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಅವರು, ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್.ಪ್ರಕಾಶ್ ಅವರೊಂದಿಗೆ ಇಲ್ಲಿನ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಸಂದರ್ಶಿಸಿ, ಸಾರ್ವಜನಿಕರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಆಸ್ಪತ್ರೆಯ ಕುಂದು– ಕೊರತೆಗಳು, ಅಗತ್ಯ ಔಷಧಗಳ ಕೊರತೆಯನ್ನು ಗಮನಿಸಿ ಕೂಡಲೇ ಜಿಲ್ಲಾ ಆರೋಗ್ಯಾಧಿಕಾರಿ ಷಣ್ಮುಖಪ್ಪನವರೊಂದಿಗೆ ಮಾತನಾಡಿ, ‘ಈ ದಿನವೇ ಅಗತ್ಯ ಔಷಧಗಳನ್ನು ಪೂರೈಸಬೇಕು ಹಾಗೂ ಆಂಬುಲೆನ್ಸ್ ದುರಸ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಆದೇಶಿಸಿದರು.
ನಂತರ ಇಲ್ಲಿನ ಬಾಲಕಿಯರ ಬಿಸಿಎಂ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿನಿಯರೊಂದಿಗೆ ಚರ್ಚಿಸಿದರು. ಅಲ್ಲಿ ಸಿದ್ಧವಾಗಿದ್ದ ಬೆಳಗಿನ ಉಪಾಹಾರದ ರುಚಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಇಲ್ಲಿನ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್.ಪ್ರಕಾಶ್ ಅವರೊಂದಿಗೆ ಉಪಾಹಾರ ಸವಿದು, ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು.
ನಂತರ ಅವರು ಇಲ್ಲಿನ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದರು. ಬಳಿಕ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಗ್ರಾಮದ ಕಸ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮಾ ಬಸವರಾಜ್, ಸದಸ್ಯರಾದ ಬಿ.ಜಿ.ಸಚಿನ್, ಎಂ.ಎಸ್.ರಮೇಶ್, ಪಿ.ಅತಾವುಲ್ಲಾ, ವಾಹಿದಾಬಾನು, ಅರ್ಷಿದಾಬಾನು, ಫರೀದಾಬಾನು ಜಹೀರ್ ಪಟೇಲ್, ಆರ್.ಶಿವಾಜಿ, ಸಿ.ಮಂಜುನಾಥ್, ನೂರ್ಯಾನಾಯ್ಕ, ಶೋಭಾ ಹರೀಶ್, ಜರೀನಾಬಾನು, ಪಿಡಿಒ ಹನುಮಂತ ರಾಯಪ್ಪ, ಕಾರ್ಯದರ್ಶಿ ಮಹಮದ್ ಹಬೀಬುಲ್ಲಾ ಮತ್ತು ಗ್ರಾಮದ ಮುಖಂಡರಾದ ಎಚ್.ಹೊನ್ನಪ್ಪ, ಎಂ.ಮಂಜುನಾಥ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.