ADVERTISEMENT

ದಾವಣಗೆರೆ: ಲಾಕ್‍ಡೌನ್ ನಂತರ ಪದವಿ ಪರೀಕ್ಷೆ ಫಲಿತಾಂಶ

ನೇರ ಫೋನ್-ಇನ್-ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹಲಸೆ

​ಪ್ರಜಾವಾಣಿ ವಾರ್ತೆ
Published 11 ಮೇ 2021, 6:02 IST
Last Updated 11 ಮೇ 2021, 6:02 IST
ಪ್ರೊ. ಶರಣಪ್ಪ ವಿ. ಹಲಸೆ
ಪ್ರೊ. ಶರಣಪ್ಪ ವಿ. ಹಲಸೆ   

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಸ್ನಾತಕ ಪದವಿಯ ಒಂದು, ಮೂರು ಮತ್ತು ಐದನೇ ಸೆಮಿಸ್ಟರ್ ಪರೀಕ್ಷೆಗಳು ಮುಗಿದಿದ್ದು, ಲಾಕ್‍ಡೌನ್ ಮುಗಿದ ನಂತರ ಫಲಿತಾಂಶ ಪ್ರಕಟಿಸಲಾಗುವುದು ಎಂದು ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಸೋಮವಾರ ನಡೆದ ನೇರ ಫೋನ್-ಇನ್- ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪರೀಕ್ಷೆ ಫಲಿತಾಂಶದ ಬಗ್ಗೆ ಎಲ್ಲ ವಿದ್ಯಾರ್ಥಿಗಳಲ್ಲಿ ಕುತೂಹಲವಿದೆ. ಫಲಿತಾಂಶ ಪ್ರಕಟಣೆಗೆ ಸಿದ್ಧತೆ ನಡೆಯುತ್ತಿದ್ದಾಗಲೇ ಕೊರೊನಾ ಕಾರಣಕ್ಕಾಗಿ ಸ್ಥಗಿತಗೊಳಿಸಲಾಗಿದೆ. ಕಾಲೇಜು ಆರಂಭಕ್ಕೆ ಸರ್ಕಾರ ಅನುಮತಿ ನೀಡುತ್ತಿದ್ದಂತೆಯೇ ಫಲಿತಾಂಶ ಪ್ರಕಟಿಸಲಾಗುವುದು’ ಎಂದು ಭರವಸೆ ನೀಡಿದರು.

‘ಕೋವಿಡ್ ಕಾರಣಕ್ಕಾಗಿ ಬಿ.ಇಡಿ ಪದವಿಯ ಪಠ್ಯ ಮತ್ತು ಪ್ರಾಯೋಗಿಕ ಪರೀಕ್ಷೆಯೂ ವಿಳಂಬವಾಗಿದೆ. ಎರಡು ವರ್ಷಗಳಲ್ಲಿ ಮುಗಿಯಬೇಕಾಗಿದ್ದ ಪದವಿಗೆ ಮೂರು ವರ್ಷವಾಗುತ್ತಿದೆ. ಕೆಲವು ಕಾಲೇಜುಗಳಲ್ಲಿ ಕೋ ಆರ್ಡಿನೇಷನ್ ಸಮಿತಿ ಸಭೆಯಾಗಿ ವರದಿ ಬರಲು ತಡವಾದ ಕಾರಣ ಮಾರ್ಚ್ ಒಳಗೆ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ವೇಳಾಪಟ್ಟಿ ಸಿದ್ಧಪಡಿಸಿ ಪರೀಕ್ಷೆಗೆ ಅಣಿಯಾಗುತ್ತಿದ್ದಂತೆ ಕೊರೊನಾ ಕಾರಣದಿಂದ ರಜೆ ನೀಡಲಾಗಿದೆ. ಲಾಕ್‍ಡೌನ್ ನಂತರ ಆದ್ಯತೆ ಮೇರೆಗೆ ಪರೀಕ್ಷೆ ನಡೆಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

‘ಸದ್ಯಕ್ಕೆ ಯಾವುದೇ ತರಗತಿಗೂ ಪರೀಕ್ಷೆ ಇಲ್ಲದೇ ಮುಂದಿನ ತರಗತಿಗೆ ತೇರ್ಗಡೆ ಮಾಡುವ ಉದ್ದೇಶ ವಿಶ್ವವಿದ್ಯಾಲಯಕ್ಕೆ ಇಲ್ಲ. ಅಲ್ಲದೆ ಮುಂದಿನ ತರಗತಿಗಳಿಗೆ ಮೇ 12ರಿಂದ ಆನ್‍ಲೈನ್‍ನಲ್ಲಿ ಪಾಠ ಆರಂಭಿಸುವಂತೆ ಎಲ್ಲ ಕಾಲೇಜು ಪ್ರಾಧ್ಯಾಪಕರಿಗೂ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿಯದಂತೆ ಗಮನ ನೀಡಲು ಆದ್ಯತೆ ನೀಡುವಂತೆಯೂ ತಿಳಿಸಲಾಗಿದೆ’ ಎಂದರು.

‘ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆಟ್‍ವರ್ಕ್ ಸಿಗದೆ ಆನ್‍ಲೈನ್ ತರಗತಿಗಳಿಂದ ವಂಚಿತರಾಗುವ ಸಾಧ್ಯತೆಗಳಿವೆ. ಆದ್ದರಿಂದ ಪರ್ಯಾಯ ವ್ಯವಸ್ಥೆಗೂ ಆದ್ಯತೆ ನೀಡಬೇಕು. ಕೆಲವು ಕಾಲೇಜುಗಳಲ್ಲಿ ಆನ್‍ಲೈನ್‍ನಲ್ಲೂ ಪಾಠ ನಡೆಸುತ್ತಿಲ್ಲ. ಕಳೆದ ವರ್ಷ ಶೇ 50ರಷ್ಟೂ ಪಾಠವನ್ನು ಹೇಳದೆ ಪರೀಕ್ಷೆ ನಡೆಸಲಾಯಿತು. ಇದರಿಂದ ಶಿಕ್ಷಣಕ್ಕೆ ಅಡ್ಡಿಯಾಯಿತು’ ಎಂದು ವಿದ್ಯಾರ್ಥಿಗಳು ಕುಲಪತಿ ಅವರಿಗೆ ದೂರಿದರು.

ವಿದ್ಯಾರ್ಥಿಗಳ ಆತಂಕಕ್ಕೆ ಸ್ಪಂದಿಸಿದ ಕುಲಪತಿ ಪ್ರೊ. ಹಲಸೆ ಅವರು, ‘ಕಳೆದ ಬಾರಿಯೂ ಕಡ್ಡಾಯವಾಗಿ ಪಾಠ ಮಾಡುವಂತೆ ಸೂಚಿಸಲಾಗಿತ್ತು. ಆಗಿರುವ ಲೋಪದ ಬಗ್ಗೆ ವಿಚಾರಣೆ ನಡೆಸಲಾಗುವುದು. ಈ ಬಾರಿ ಅದು ಮುಂದುವರಿಯಲು ಅವಕಾಶ ನೀಡುವುದಿಲ್ಲ. ವಿದ್ಯಾರ್ಥಿಗಳ ಹಿತಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ. ಆನ್‍ಲೈನ್ ಅಲ್ಲದೆ ಲಾಕ್‍ಡೌನ್ ನಂತರ ಭೌತಿಕವಾಗಿಯೂ ಪಾಠ ಮಾಡಿ ವಿದ್ಯಾರ್ಥಿಗಳಿಗೆ ಅರ್ಥೈಸುವಂತೆ ಮಾಡಲಾಗುವುದು. ಜೊತೆಗೆ ಪಠ್ಯಪೂರಕ ಅಧ್ಯಯನ ಸಾಮಗ್ರಿಗಳನ್ನು ವಿದ್ಯಾರ್ಥಿಗಳ ಪೋರ್ಟಲ್‍ಗೆ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ್, ಪರೀಕ್ಷಾಂಗ ಕುಲಸಚಿವೆ ಪ್ರೊ. ಎಚ್.ಎಸ್. ಅನಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.