ADVERTISEMENT

ಸುಖದ ಜೊತೆಗೆ ಕಷ್ಟದ ಅರಿವೂ ಮೂಡಿಸಿ: ಸಂಗೀತ ನಿರ್ದೇಶಕ ವಿ.ಮನೋಹರ್‌

‘ಅನ್ವೇಷಕರು’ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಸಂಗೀತ ನಿರ್ದೇಶಕ ವಿ.ಮನೋಹರ್‌

​ಪ್ರಜಾವಾಣಿ ವಾರ್ತೆ
Published 11 ಮೇ 2022, 3:00 IST
Last Updated 11 ಮೇ 2022, 3:00 IST
ದಾವಣಗೆರೆಯ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಅನ್ವೇಷಕರು ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ವಿ. ಮನೋಹರ್ ಮಾತನಾಡಿದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಅರಳಗುಪ್ಪಿ, ಪತ್ರಕರ್ತ ಬಾ.ಮ. ಬಸವರಾಜಯ್ಯ, ನೀನಾಸಂ ರಂಗಶಿಕ್ಷಣ ಕೇಂದ್ರ ನಿವೃತ್ತ ಪ್ರಾಂಶುಪಾಲ ಮಹಾಬಲೇಶ್ವರ ಕೆ.ಜಿ., ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ, ಸಿನಿಮಾ ನಿರ್ದೇಶಕ ಎನ್.ಎಸ್. ಶಂಕರ್, ಬಿಇಎ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವಿ.ಜಿ.ಎಸ್. ಇದ್ದಾರೆ –ಪ್ರಜಾವಾಣಿ ಚಿತ್ರ
ದಾವಣಗೆರೆಯ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಅನ್ವೇಷಕರು ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಗೀತ ನಿರ್ದೇಶಕ ವಿ. ಮನೋಹರ್ ಮಾತನಾಡಿದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಅರಳಗುಪ್ಪಿ, ಪತ್ರಕರ್ತ ಬಾ.ಮ. ಬಸವರಾಜಯ್ಯ, ನೀನಾಸಂ ರಂಗಶಿಕ್ಷಣ ಕೇಂದ್ರ ನಿವೃತ್ತ ಪ್ರಾಂಶುಪಾಲ ಮಹಾಬಲೇಶ್ವರ ಕೆ.ಜಿ., ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ, ಸಿನಿಮಾ ನಿರ್ದೇಶಕ ಎನ್.ಎಸ್. ಶಂಕರ್, ಬಿಇಎ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವಿ.ಜಿ.ಎಸ್. ಇದ್ದಾರೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಪೋಷಕರು ಮಕ್ಕಳನ್ನು ಬರಿ ಸುಖದಲ್ಲೇ ಬೆಳೆಸಿದರೆ ಸೋಮಾರಿಗಳಾಗುತ್ತಾರೆ. ತಾವು ಪಟ್ಟ ಕಷ್ಟಗಳನ್ನು ಮಕ್ಕಳಿಗೆ ಅರ್ಥ ಮಾಡಿಸಿ, ಕಷ್ಟದ ಬಗ್ಗೆ ಅರಿವು ಮೂಡಿಸಬೇಕು’ ಎಂದು ಸಂಗೀತ ನಿರ್ದೇಶಕ ವಿ.ಮನೋಹರ್‌ ಹೇಳಿದರು.

ಅನ್ವೇಷಕರು ಆರ್ಟ್‌ ಫೌಂಡೇಷನ್‌ ಆಶ್ರಯದಲ್ಲಿ ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ಅನ್ವೇಷಕರು ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇಂದಿನ ಎಷ್ಟೋ ಮಕ್ಕಳು ಬರಿ ಪುಸ್ತಕವನ್ನು ಓದುತ್ತಿದ್ದಾರೆ. ಬದುಕಿನ ನಿಜವಾದ ಅನುಭವವೇ ಅವರಿಗೆ ಇರುವುದಿಲ್ಲ. ಕೃಷಿಗೆ ಜನ ಸಿಗುತ್ತಿಲ್ಲ. ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಎಂದು ಕೆಲವರು ಸಾಲ ಮಾಡಿ ಪಟ್ಟಣಕ್ಕೆ ಬಂದು ಸುತ್ತುತ್ತಿರುತ್ತಾರೆ. ಕೃಷಿಯ ಬಗ್ಗೆ ಮಕ್ಕಳಿಗೆ ಹೇಳಿಕೊಡಬೇಕು. ಮಕ್ಕಳನ್ನು ಸಂಸ್ಕಾರವಂತರಾಗಿ
ಹಾಗೂ ಜವಾಬ್ದಾರಿಯುತರನ್ನಾಗಿ ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ’ ಎಂದು ಸಲಹೆ ನೀಡಿದರು.

ADVERTISEMENT

‘ಇಂದು ಪ್ರಸಿದ್ಧರಾಗಲು ಬಹಳಷ್ಟು ದಾರಿಗಳಿವೆ. ಅಭಿನಯ, ಚಿತ್ರಕಲೆ, ಹಾಡುಗಳಂತಹ ತಮ್ಮ ಪ್ರತಿಭೆಯನ್ನು ಚಿತ್ರೀಕರಿಸಿ ಯುಟ್ಯೂಬ್‌ಗೆ ಹಾಕಿದರೆ ಜಗತ್ತಿನ ಕಣ್ಣಿಗೆ ಬೀಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಗುರುಗಳು ಸೂಕ್ತ ಮಾರ್ಗದರ್ಶನ ನೀಡಬೇಕು’ ಎಂದು ಹೇಳಿದರು.

‘ಬೇಸಿಗೆ ಶಿಬಿರಗಳು ಮಕ್ಕಳ ಪ್ರತಿಭೆಗಳನ್ನು ಹೊರಹಾಕಲು ಉತ್ತಮ ವೇದಿಕೆಯಾಗಿದೆ. ಬೇಸಿಗೆ ಶಿಬಿರಗಳಲ್ಲಿ ಕಲಿಸುವ ವಿಧಾನದಲ್ಲೇ ಶಾಲೆಗಳಲ್ಲೂ ಬೋಧನೆ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ’ ಎಂದು ಹೇಳಿದರು.

ಸಿನಿಮಾ ನಿರ್ದೇಶಕ ಎನ್‌.ಎಸ್‌. ಶಂಕರ್‌, ‘ಮಕ್ಕಳಿಗೆ ಪ್ರಪಂಚದ ಅನುಭವ ಅಗತ್ಯವಿದೆ. ಬೇಸಿಗೆ ಶಿಬಿರಗಳಲ್ಲಿ ಬೇರೆಯ ಮಕ್ಕಳೊಂದಿಗೆ ಬೆರೆಯುವುದರಿಂದ ಇಂಥ ಅನುಭವಗಳು ಸಿಗುತ್ತದೆ’ ಎಂದು ತಿಳಿಸಿದರು.

ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ, ‘ಮಕ್ಕಳು ಟಿವಿ, ಪತ್ರಿಕೆ, ವಾಟ್ಸ್‌ಆ್ಯಪ್‌ ನೋಡಿದಾಗ ದೇಶದ ಎಲ್ಲೆಡೆ ಅಸೂಯೆ, ಅತ್ಯಾಚಾರ, ಅನಾಚಾರಗಳನ್ನೇ ನೋಡುತ್ತಿದ್ದಾರೆ. ದೇಶದಲ್ಲಿ ಆಕಾರ ಇಲ್ಲ; ವಿಕಾರ ಇದೆ. ಸಮಾಜಕ್ಕೆ ಆರೋಗ್ಯಕರ
ಮಕ್ಕಳನ್ನು ನೀಡಲು ಇಂಥ ಶಿಬಿರ ಅಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಮಕ್ಕಳನ್ನು ಕ್ರಿಯಾಶೀಲರನ್ನಾಗಿಸಲು ಬೇಸಿಗೆ ಶಿಬಿರ ಸಹಕಾರಿಯಾಗಿದೆ. ಸಾಮಾಜಿಕ, ಆರ್ಥಿಕ ಅಂಶಗಳನ್ನೂ ಮಕ್ಕಳಿಗೆ ಕಲಿಸಬೇಕು. ಇಲ್ಲಿ ರಂಗಭೂಮಿಯ ಮೂಲಕ ಆಕೆಲಸ ಮಾಡಲಾಗುತ್ತಿದೆ’ ಎಂದು ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ರವೀಂದ್ರ ಎಚ್‌. ಅರಳಗುಪ್ಪಿ, ರಂಗಕರ್ಮಿ ಬಾ.ಮ. ಬಸವರಾಜಯ್ಯ, ಬಿಇಎ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವಿ ಜಿ.ಎಸ್‌., ನೀನಾಸಂ ರಂಗ ಶಿಕ್ಷಣ ಕೇಂದ್ರದ ನಿವೃತ್ತ ಪ್ರಾಂಶುಪಾಲ ಮಹಾಬಲೇಶ್ವರ ಕೆ.ಜಿ. ಇದ್ದರು.

ಶಿಬಿರದ ನಿರ್ದೇಶಕ ಸಿದ್ಧರಾಜು ಎಸ್‌.ಎಸ್‌. ಸ್ವಾಗತಿಸಿದರು. ಶಿಬಿರದ ಮಕ್ಕಳು ಕುಮಾರವ್ಯಾಸ ಭಾರತದ ‘ಕರ್ಣ ಭೇದ’ ವಾಚನ ಹಾಗೂ ಬಿ.ವಿ. ಕಾರಂತರ ‘ಪಂಜರ ಶಾಲೆ’ ನಾಟಕವನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.