ADVERTISEMENT

ಹರಪನಹಳ್ಳಿಗೆ 371ಜೆ ವಿಶೇಷ ಸ್ಥಾನಮಾನ: ಅನುಷ್ಠಾನಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 15:30 IST
Last Updated 25 ಏಪ್ರಿಲ್ 2019, 15:30 IST
   

ಹರಪನಹಳ್ಳಿ: ಬಳ್ಳಾರಿ ಜಿಲ್ಲೆಗೆ ಸೇರಿದ ಹರಪನಹಳ್ಳಿ ತಾಲ್ಲೂಕಿಗೆ ಸಂವಿಧಾನದ ಅನುಚ್ಛೇದ ‘371ಜೆ’ರಂತೆ ಹೈದರಾಬಾದ್‌–ಕರ್ನಾಟಕದ ವಿಶೇಷ ಸ್ಥಾನಮಾನ ಲಭಿಸಿದ್ದು, ಇದರಡಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವು ಎಲ್ಲಾ ಇಲಾಖೆಗಳಿಗೆ ಸೂಚಿಸಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್‌ ಅವರು ಬುಧವಾರ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದಾರೆ.

ಸ್ಥಳೀಯ ವ್ಯಕ್ತಿ ಅರ್ಹತೆ ಪಡೆದವರಿಗೆ ಸ್ಥಳೀಯ ವ್ಯಕ್ತಿ ಪ್ರಮಾಣ ಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು. ಎಲ್ಲಾ ಇಲಾಖೆಗಳು ತಮ್ಮ ಆಡಳಿತ ವ್ಯಾಪ್ತಿಗೆ ಸಂಬಂಧಿಸಿದಂತೆ ಹರಪನಹಳ್ಳಿ ಕಂದಾಯ ತಾಲ್ಲೂಕಿನ ಹುದ್ದೆಗಳನ್ನೂ ಪರಿಗಣಿಸಿ ಸ್ಥಳೀಯ ವೃಂದ ರಚಿಸಿ ಅಧಿಸೂಚನೆ ಹೊರಡಿಸಬೇಕು. ಈಗಾಗಲೇ ಹುದ್ದೆಗಳನ್ನು ಗುರುತಿಸಿ ಹೊರಡಿಸಿದ ಅಧಿಸೂಚನೆಗೆ ಹರಪನಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆಗೆ ಸೇರಿರುವುರಿಂದ ಲಭ್ಯವಾಗುವ ಹುದ್ದೆಗಳನ್ನು ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಬೇಕು.

ADVERTISEMENT

ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್- ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಹಾಗೂ ಸ್ಥಳೀಯ ವೃಂದಗಳ ರಚನೆ, ಹಂಚಿಕೆ ಮತ್ತು ವ್ಯಕ್ತಿಗಳ ವರ್ಗಾವಣೆ ನಿಯಮ 5ರ ಪ್ರಕಾರ ಸ್ಥಳೀಯ ವೃಂದ ಆಯ್ಕೆಗೆ ಹರಪನಹಳ್ಳಿಯ ಅರ್ಹ ಸ್ಥಳೀಯ ವ್ಯಕ್ತಿಗಳಿಗೆ ಮಾತ್ರ ಅಭಿಮತ ಚಲಾಯಿಸಲು ಅವಕಾಶ ನೀಡಬೇಕು. ಆಯ್ಕೆಗೆ ಅನುಸಾರ ತತ್ಸಂಬಂಧ ವೃಂದಗಳಿಗೆ ಹಂಚಿಕೆ ಮಾಡಿ ಕಾಲಕಾಲಕ್ಕೆ ಈ ಸಂಬಂಧ ಹೊರಡಿಸುವ ಸುತ್ತೋಲೆಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಸ್ಥಳೀಯ ವೃಂದಕ್ಕೆ ಹಂಚಿಕೆಯಾದ ನೌಕರರ ಜ್ಯೇಷ್ಠತೆಯನ್ನು ನಿಗದಿಪಡಿಸಬೇಕು. ರೋಸ್ಟರ್‌ ಬಿಂದುಗಳನ್ನು ಚಾಲನೆಗೊಳಿಸಬೇಕು. ಹರಪನಹಳ್ಳಿ ತಾಲ್ಲೂಕಿನಲ್ಲಿ ಇರುವ ಶೈಕ್ಷಣಿಕ ಸಂಸ್ಥೆಗಳಲ್ಲಿನ ಅಧ್ಯಯನದ ಪ್ರತಿ ಕೋರ್ಸ್‌ನಲ್ಲಿ ಲಭ್ಯವಿರುವ ಸೀಟ್‌ಗಳಿಗೆ ಸಂಬಂಧಿಸಿದಂತೆ ಸ್ಥಳೀಯ ವ್ಯಕ್ತಿಗಳಿಗೆ ನಿಗದಿತ ಮೀಸಲಾತಿ ಕಲ್ಪಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.