ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿಗೆ ಶ್ರಮವೇ ಸಾಧನ: ಸಿ.ಬಿ. ರಿಷ್ಯಂತ್‌

ಎಕ್ಸಾಂ ಮಾಸ್ಟರ್‌ ಮೈಂಡ್‌ ಪತ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಎಸ್‌ಪಿ ಸಿ.ಬಿ. ರಿಷ್ಯಂತ್‌

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 5:13 IST
Last Updated 22 ಫೆಬ್ರುವರಿ 2023, 5:13 IST
ದಾವಣಗೆರೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಅವರು ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್‌’ ಮಾಸ್ಟರ್ ಮೈಂಡ್ ಸಂಚಿಕೆಯನ್ನು ಬಿಡುಗಡೆ ಮಾಡಿದರು. –ಪ್ರಜಾವಾಣಿ ಚಿತ್ರ
ದಾವಣಗೆರೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಅವರು ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್‌’ ಮಾಸ್ಟರ್ ಮೈಂಡ್ ಸಂಚಿಕೆಯನ್ನು ಬಿಡುಗಡೆ ಮಾಡಿದರು. –ಪ್ರಜಾವಾಣಿ ಚಿತ್ರ   

ದಾವಣಗೆರೆ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ), ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಗಳು ಆಯೋಜಿಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭದಲ್ಲಿ ತೇರ್ಗಡೆ ಹೊಂದುವ ವಿಧಾನಗಳಿಲ್ಲ. ಬದಲಿಗೆ, ಶ್ರದ್ಧೆ, ಶ್ರಮದಿಂದ ಓದಿದರಷ್ಟೇ ಸಾಧನೆ ಸಾಧ್ಯ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಅಭಿಪ್ರಾಯಪಟ್ಟರು.

ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಪೂರಕವಾಗಿ ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಸಮೂಹದ ‘ಎಕ್ಸಾಂ ಮಾಸ್ಟರ್‌ ಮೈಂಡ್‌’ ಆನ್‌ಲೈನ್‌ ಪತ್ರಿಕೆಗಳ ಬಿಡುಗಡೆ ಸಮಾರಂಭದಲ್ಲಿ ಮಂಗಳವಾರ, 200 ಜನ ವಿದ್ಯಾರ್ಥಿಗಳಿಗೆ ಚಂದಾದಾರರಿಕೆಯ ಕೊಡುಗೆ ನೀಡಿ ಅವರು ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿ ಸಮಯದ ಸದ್ಬಳಕೆಯನ್ನು ರೂಢಿಸಿಕೊಳ್ಳಬೇಕು. ಸಮಯ ವ್ಯರ್ಥ ಮಾಡಿದರೆ ಸಾಧಿಸಲು ಸಾಧ್ಯವಾಗುವುದಿಲ್ಲ. ನಕಾರಾತ್ಮಕ ಮಾತುಗಳನ್ನು ಆಲಿಸದೆ, ಸಕಾರಾತ್ಮಕ ಚಿಂತನೆಯನ್ನು ಹೊಂದಬೇಕು. ಸೂಕ್ತ ವಯಸ್ಸಿನಲ್ಲಿಯೇ, ಸರಿಯಾದ ಕ್ರಮದಲ್ಲಿ ಅಧ್ಯಯನ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ADVERTISEMENT

‘ಪ್ರತಿಭೆ, ಶ್ರಮ ಮತ್ತು ಅರ್ಹತೆ ಇದ್ದರೆ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಗುರಿ ಸಾಧನೆಯೂ ಸುಲಭ ಸಾಧ್ಯ’ ಎಂದ ಅವರು, ಎಲ್ಲವನ್ನೂ ಸಮಗ್ರವಾಗಿ ನಿಯಮಿತ ಕಾಲಾವಕಾಶದಲ್ಲಿ ಓದಲು ಸಾಧ್ಯವಾಗುವುದಿಲ್ಲ. ಯಾವುದನ್ನು ಓದಬೇಕು ಎಂಬ ಸ್ಪಷ್ಟ ಅರಿವು ಇದ್ದರೆ ಮಾತ್ರ ಯಶಸ್ಸನ್ನು ಗಳಿಸುವುದು ಸಾಧ್ಯ ಎಂು ಕಿವಿಮಾತು ಹೇಳಿದರು.

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳು ಹಿಂದಿನಿಂದಲೂ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಮಾಹಿತಿಯನ್ನು ನೀಡುತ್ತ ವಿದ್ಯಾರ್ಥಿಗಳಿಗೆ ನೆರವಾಗುತ್ತಲೇ ಬಂದಿದೆ. ಈ ನಿಟ್ಟಿನಲ್ಲಿ ದೇ ಪತ್ರಿಕಾ ಸಮೂಹ ಆರಂಭಿಸಿರುವ ‘ಎಕ್ಸಾಂ ಮಾಸ್ಟರ್‌ ಮೈಂಡ್‌’ ಸಹ ಉಪಯುಕ್ತವಾಗಿದೆ ಎಂದರು.

‘ಪ್ರಜಾವಾಣಿ’ ಬ್ಯುರೋ ಮುಖ್ಯಸ್ಥರಾದ ಸಿದ್ದಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ‘ಎಕ್ಸಾಂ ಮಾಸ್ಟರ್‌ ಮೈಂಡ್‌’ ಆನ್‌ಲೈನ್‌ ಪತ್ರಿಕೆಯ ಬಳಕೆಯ ಕುರಿತು ದಿ ಪ್ರಿಂಟರ್ಸ್‌ ಮೈಸೂರು ಪ್ರೈವೇಟ್‌ ಲಿ.ನ ಪ್ರಸರಣ ವಿಭಾಗದ ವ್ಯವಸ್ಥಾಪಕರಾದ ಪ್ರಕಾಶ್‌ ನಾಯಕ್‌ ವಿದ್ಯಾರ್ಥಿಗಳಿಗೆ ವಿವರ ನೀಡಿದರು.

ಡಿವೈಎಸ್‌ಪಿ ಕೃಷ್ಣಮೂರ್ತಿ, ಸೋಮಶೇಖರ್‌, ವೇದಮೂರ್ತಿ, ‘ಪ್ರಜಾವಾಣಿ’ ಪ್ರಸರಣ ವಿಭಾಗದ ಎಸ್‌.ಸತೀಶ್‌ ಮತ್ತಿತರರು ಇದ್ದರು. ಪೊಲೀಸ್‌ ಇಲಾಖೆಯ ಸಿಬ್ಬಂದಿಯ ಮಕ್ಕಳು ಹಾಗೂ ನಗರದ ವಿವಿಧ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಚಂದಾರಿಕೆಯ ಕೊಡುಗೆ ನೀಡಲಾಯಿತು. ಉಪನ್ಯಾಸಕ ವೆಂಕಟೇಶ್‌ಬಾಬು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಬಗೆ ಹಾಗೂ ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಮಹತ್ವ ಕುರಿತು ಮಾತನಾಡಿದರು. ಡಿವೈಎಸ್‌ಪಿ ಪ್ರಕಾಶ್‌ ಸ್ವಾಗತಿಸಿದರು. ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’, ‘ಮಾಸ್ಟರ್ ಮೈಂಡ್‌’ ಪ್ರಚಾರಕ ಮಣಿಕಂಠ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳು ಹಾಗೂ ಪೊಲೀಸ್‌ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.