ADVERTISEMENT

ಹರಿಹರ-ದಾವಣಗೆರೆ ಮಧ್ಯೆ ನುಣುಪಾದ ರಸ್ತೆ

ಹರಿಹರ: ₹3 ಕೋಟಿ ಸಿಆರ್‌ಎಫ್ ಅನುದಾನದಲ್ಲಿ 2.9 ಕಿ.ಮೀ. ರಸ್ತೆ ಡಾಂಬರೀಕರಣ

ಇನಾಯತ್ ಉಲ್ಲಾ ಟಿ.
Published 18 ಮೇ 2025, 7:20 IST
Last Updated 18 ಮೇ 2025, 7:20 IST
ಹರಿಹರ ಹೊರವಲಯದ ಜೋಡಿ ರಸ್ತೆಯಲ್ಲಿ ಡಾಂಬರೀಕರಣ ಕಾಮಗಾರಿ ನಡೆಯುತ್ತಿರುವುದು
ಹರಿಹರ ಹೊರವಲಯದ ಜೋಡಿ ರಸ್ತೆಯಲ್ಲಿ ಡಾಂಬರೀಕರಣ ಕಾಮಗಾರಿ ನಡೆಯುತ್ತಿರುವುದು   

ಹರಿಹರ: ನಗರದ ಹೊರವಲಯದ ಹಳೆ ಪಿ.ಬಿ.ರಸ್ತೆಯ ಡಾಂಬರೀಕರಣ ಕಾಮಗಾರಿಯನ್ನು ಕೇಂದ್ರ ರಸ್ತೆ ನಿಧಿಯ (ಸಿಆರ್‌ಎಫ್) ನೆರವಿನೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕೈಗೊಳ್ಳಲಾಗಿದೆ.

ರೈಲ್ವೆ ಲೆವೆಲ್ ಕ್ರಾಸಿಂಗ್‌ನ ಎರಡು ರೈಲ್ವೆ ಗೇಟ್‌ಗಳಿಂದಾಗಿ ಹರಿಹರ-ದಾವಣಗೆರೆ ನಡುವಿನ ವಾಹನ ಸವಾರರಿಗೆ ಆಗುತ್ತಿದ್ದ ತೊಂದರೆಯನ್ನು ನಿವಾರಿಸಲು 2017-18ನೇ ಸಾಲಿನಲ್ಲಿ ರೈಲ್ವೆ ಹಳಿಗಳ ಪಕ್ಕದಿಂದ ಈ ಹೊಸ ಜೋಡಿ ರಸ್ತೆಯನ್ನು ರಾಜ್ಯ ಸರ್ಕಾರದಿಂದ ನಿರ್ಮಿಸಲಾಗಿತ್ತು.

2.9 ಕಿ.ಮೀ. ಅಂತರದ ಈ ರಸ್ತೆ ಬಹುತೇಕ ಸುಸ್ಥಿತಿಯಲ್ಲಿದ್ದರೂ, ಅಲ್ಲಿಲ್ಲಿ ಡಾಂಬರ್‌ ಪದರ ಸಹಜವಾಗಿ ಕಿತ್ತು ಹೋಗಿತ್ತು. ಹೊಸ ರಸ್ತೆ ನಿರ್ಮಿಸಿದ 8 ವರ್ಷಗಳ ಬಳಿಕ ಈಗ ₹ 3 ಕೋಟಿ ಅನುದಾನದಲ್ಲಿ ಆ ರಸ್ತೆಗೆ ಒಂದು ಪದರದ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ADVERTISEMENT

ಫ್ಲೈ ಓವರ್‌ವರೆಗೂ ಡಾಂಬರ್: ದಾವಣಗೆರೆ ಕಡೆಯ 2ನೇ ರೈಲ್ವೆ ಗೇಟ್‌ನ ಡಿಜಿಆರ್ ಅಮ್ಯೂಸ್‌ಮೆಂಟ್ ಪಾರ್ಕ್‌ನಿಂದ ಆರಂಭಗೊಂಡು ಹರಿಹರದ ಕಡೆಯ ರೈಲ್ವೆ ಮೇಲ್ಸೇತುವೆ (ಆರ್‌ಒಬಿ) ಡಾಂಬರೀಕರಣ ನಡೆಯಲಿದೆ. ಫ್ಲೈ ಓವರ್‌ನ ಅಕ್ಕಪಕ್ಕದಲ್ಲಿ ಹದಗೆಟ್ಟಿದ್ದ ರಸ್ತೆಯು ಈಗ ಡಾಂಬರೀಕರಣಕ್ಕೆ ಒಳಗಾಗಲಿದ್ದು, ವಾಹನ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯ ಇಕ್ಕೆಲಗಳಲ್ಲಿ ಗ್ರಾವೆಲ್‌ (1 ಮೀ.ವರೆಗೆ ಕೆಂಪು ಮಣ್ಣಿನ ಹಾಸು) ಹಾಕುವುದು, ಜಂಗಲ್ ತೆರವು ಕಾರ್ಯವೂ ಇದೇ ಸಂದರ್ಭದಲ್ಲಿ ಕೈಗೊಳ್ಳಲಾಗುತ್ತಿದೆ. ಹರಿಹರ ದಾವಣಗೆರೆ ಮಧ್ಯದ 14 ಕಿ.ಮೀ. ಅಂತರದ ಪೈಕಿ 2.9 ಕಿ.ಮೀ. ರಸ್ತೆ ಮಾತ್ರ ಡಾಂಬರ್‌ನದ್ದು. ಉಳಿದೆಡೆ ಜೋಡಿ ಕಾಂಕ್ರೀಟ್ ರಸ್ತೆ ಇದೆ. 

ಒಂದು ಪದರ ಡಾಂಬರೀಕಣದಿಂದ ಜೋಡಿ ರಸ್ತೆಯು ನುಣುಪಾಗಿದೆ. ಎಲ್ಲಿಯೂ ರಸ್ತೆ ತಡೆ ಅಳವಡಿಸಿಲ್ಲ. ಸಾಕಷ್ಟು ಬಸ್‌, ಲಾರಿ, ಕಾರುಗಳು ಸಂಚರಿಸುವುದರಿಂದ ಬೈಕ್‌ ಸವಾರರು ಅತಿವೇಗವಾಗಿ ಸಂಚರಿಸದೇ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುವ ಅಗತ್ಯವಿದೆ.

ರಸ್ತೆಯು 7 ಮೀಟರ್ ಅಗಲವಿದ್ದು ಡಾಂಬರೀಕರಣ ಕಾರ್ಯ ಮುಗಿಯುವ ಹಂತಕ್ಕೆ ಬಂದಿದೆ. ಶೀಘ್ರವೇ ಇನ್ನುಳಿದ ಕಾಮಗಾರಿ ಕೈಗೊಳ್ಳಲಾಗುವುದು
ಜಗದೀಶ್ ಕೋಳಿವಾಡ ಎಇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚಿತ್ರದುರ್ಗ
ಜೋಡಿ ರಸ್ತೆಯ ವಿಭಜಕದಲ್ಲಿ ಬೀದಿದೀಪಗಳ ಅಳವಡಿಕೆ ರೈಲು ಹಳಿ ಮತ್ತು ಈ ರಸ್ತೆ ನಡುವಿನ ಜಾಗದಲ್ಲಿ ಪಾದಚಾರಿ ಮಾರ್ಗ ಆಗಬೇಕು. ಇದರಿಂದ ಬೆಳಿಗ್ಗೆ ಸಂಜೆ ವಾಯುವಿಹಾರ ಮಾಡುವವರಿಗೆ ಅನುಕೂಲವಾಗುತ್ತದೆ
ಮೊಹಮ್ಮದ್ ಫರೂಖ್ ಹರಿಹರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.