ADVERTISEMENT

ಹರಿಹರ | ಮನುಸ್ಮೃತಿ ಜಾರಿಗೊಳಿಸಲು ಷಡ್ಯಂತ್ರ: ಪುರುಷೋತ್ತಮ ಬಿಳಿಮಲೆ ಆರೋಪ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆರೋಪ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 14:15 IST
Last Updated 28 ಏಪ್ರಿಲ್ 2025, 14:15 IST
ಹರಿಹರದ ಗುರುಭವನದಲ್ಲಿ ಸೋಮವಾರ ಕದಸಂಸ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಸನ್ಮಾನ ಸಮಾರಂಭವನ್ನು ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದರು
ಹರಿಹರದ ಗುರುಭವನದಲ್ಲಿ ಸೋಮವಾರ ಕದಸಂಸ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಸನ್ಮಾನ ಸಮಾರಂಭವನ್ನು ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದರು   

ಹರಿಹರ: ‘ದೇಶೀಯತೆ ಇಲ್ಲ ಎಂಬ ಸಬೂಬು ಹೇಳಿಕೊಂಡು ಸಂವಿಧಾನವನ್ನು ಮೂಲೆಗುಂಪು ಮಾಡಿ ಮನುಸ್ಮೃತಿ ಜಾರಿ ಮಾಡಲು ದೇಶದ ಶೇ 3ರಷ್ಟಿರುವ ಸಮುದಾಯದವರು ದೊಡ್ಡ ಷಡ್ಯಂತ್ರವನ್ನು ರೂಪಿಸಿದ್ದಾರೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆರೋಪಿಸಿದರು.

ನಗರದ ಗುರುಭವನದಲ್ಲಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕ್ರಷ್ಣಪ್ಪ ಸ್ಥಾಪಿತ) ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂವಿಧಾನದ 14ನೇ ವಿಧಿಯಲ್ಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದಿರುವುದು ಭಾರತೀಯರನ್ನು ಉದ್ದೇಶಿಸಿಯೇ ಹೊರತು ಅಮೆರಿಕ, ರಷ್ಯಾ, ಚೀನಾ ಪ್ರಜೆಗಳಿಗಲ್ಲ. 20ನೇ ಶತಮಾನದಲ್ಲಿ ಭಾರತೀಯರ ಪೈಕಿ ಅತಿ ಹೆಚ್ಚು ಪದವಿ ಪಡೆದು ಸಾವಿರಾರು ಪುಸ್ತಕಗಳನ್ನು ಓದಿದ ವ್ಯಕ್ತಿ ಅಂಬೇಡ್ಕರ್ ಆಗಿದ್ದಾರೆ’ ಎಂದರು.

ADVERTISEMENT

‘ಜಗತ್ತಿನ ಹತ್ತಾರು ರಾಷ್ಟ್ರಗಳ ಸಂವಿಧಾನ, ವಿವಿಧ ಧರ್ಮಗ್ರಂಥ, ಪ್ರಮುಖ ಸಿದ್ಧಾಂತಗಳನ್ನು ಆಳವಾಗಿ ಅಭ್ಯಾಸ ಮಾಡಿಯೇ ಅಂಬೇಡ್ಕರ್ ಸಂವಿಧಾನ ರಚನೆಗೆ ಮುಂದಾದರು. ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಅತ್ಯಂತ ಗೌರವ ಪಡೆದ ಅಂಬೇಡ್ಕರ್‌ ಅವರು ಎಲ್ಲ ಭಾರತೀಯರಿಗೂ ಸಮಾನ ಅವಕಾಶ ನೀಡಿರುವುದನ್ನು ದೇಶದ ಶೇ 3ರಷ್ಟಿರುವ ಸಮುದಾಯ ಹಾಗೂ ಕೋಮುವಾದಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದರು.

‘ಕೆಲವು ಮಠಾಧೀಶರು, ರಾಜಕಾರಣಿಗಳ ಮೂಲಕ ಧ್ವನಿ ಮೂಡಿಸಿ ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಿಸುವ ಚರ್ಚೆ ಆರಂಭಿಸಲಾಗಿದೆ. ಈಗಿನ ಪ್ರಭುತ್ವದಲ್ಲಿರುವವರ ವರಸೆ ನೋಡಿದರೆ ಮುಂದಿನ 50 ವರ್ಷ ದೇಶದ ದಲಿತ ವರ್ಗದವರಿಗೆ ಬಿಕ್ಕಟ್ಟಿನ ಅವಧಿಯಾಗಿದೆ. ಎಚ್ಚೆತ್ತುಕೊಳ್ಳದಿದ್ದರೆ ಹಿಂದಿಗಿಂತ ಹೆಚ್ಚು ಸಂಕಟಮಯ ದುಸ್ಥಿತಿಗೆ ತಳ್ಳುತ್ತಾರೆ’ ಎಂದು ಎಚ್ಚರಿಸಿದರು.

‘ಧರ್ಮವು ನಮ್ಮನ್ನು ಶೂದ್ರ ಎಂದು ಕರೆದರೆ ಸಂವಿಧಾನವು ನಮ್ಮನ್ನು ಮನುಷ್ಯ ಎಂದು ಹೇಳುತ್ತದೆ. ಶೂದ್ರರನ್ನು ಮನುಷ್ಯರೆಂದು ಪರಿಗಣಿಸದ ಧರ್ಮವನ್ನು ನಾವು ಅನುಸರಿಸಬಾರದು’ ಎಂದು ಅಧ್ಯಕ್ಷತೆ ವಹಿಸಿದ್ದ ಕದಸಂಸ ರಾಜ್ಯ ಘಟಕದ ಸಂಚಾಲಕ ಎಂ.ಗುರುಮೂರ್ತಿ ಶಿವಮೊಗ್ಗ ಹೇಳಿದರು.

‘ಇಡೀ ದೇಶದ ದಲಿತರು, ಹಿಂದುಳಿದ ವರ್ಗದವರ ಹಣದಿಂದ ಅಯೋಧ್ಯೆಯಲ್ಲಿ ನಿರ್ಮಿಸಿದ ರಾಮಮಂದಿರದ 26 ಟ್ರಸ್ಟಿಗಳೂ ಬ್ರಾಹ್ಮಣರೇ ಆಗಿದ್ದಾರೆ. ಉಳಿದ ವರ್ಗದವರು ಅವರ ಕಣ್ಣಿಗೆ ಕಾಣಲಿಲ್ಲವೇ’ ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಘಟಕದ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ಪ್ರಶ್ನಿಸಿದರು.

ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 134 ಸಾಧಕರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.

ಮಾಜಿ ಶಾಸಕ ಎಸ್.ರಾಮಪ್ಪ, ನಗರಸಭೆ ಉಪಾಧ್ಯಕ್ಷ ಎಂ.ಜಂಬಣ್ಣ, ಕದಸಂಸ ತಾಲ್ಲೂಕು ಘಟಕದ ಸಂಚಾಲಕ ಪಿ.ಜೆ.ಮಹಾಂತೇಶ್, ಜಿಲ್ಲಾ ಘಟಕದ ಸಂಚಾಲಕ ಕುಂದವಾಡ ಮಂಜುನಾಥ, ವಿ.ಟಿ.ನಾಗರಾಜ್, ಸಚಿನ್ ಬೊಂಗಾಳೆ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವಿಜಯ್ ಮಹಾಂತೇಶ್, ಎ.ಕೆ.ಭೂಮೇಶ್, ಶಿವಮೊಗ್ಗ ಜಿಲ್ಲಾ ಘಟಕದ ಸಂಚಾಲಕ ಎಂ.ಏಳುಕೋಟಿ, ಸಿದ್ಧರಾಮಣ್ಣ ಬುಳ್ಳಸಾಗರ, ಹೊನ್ನಾಳಿ ಶಿಕ್ಷಕ ಚನ್ನಕೇಶ, ರಾಜಪ್ಪ ಎ.ಕೆ. ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.