ADVERTISEMENT

ಹರಿಹರ: ಕಚ್ಚಾವಸ್ತು ಸಾಗಣೆ ವೆಚ್ಚಕ್ಕೆ ಉದ್ಯಮ ಹೈರಾಣು

ಜಿ.ಬಿ.ನಾಗರಾಜ್
Published 23 ಜೂನ್ 2025, 8:20 IST
Last Updated 23 ಜೂನ್ 2025, 8:20 IST
<div class="paragraphs"><p>ಹರಿಹರದ ಕೈಗಾರಿಕಾ ವಸಾಹತುವಿನಲ್ಲಿ ಗುಂಡಿ ಬಿದ್ದಿರುವ ರಸ್ತೆ&nbsp;</p></div>

ಹರಿಹರದ ಕೈಗಾರಿಕಾ ವಸಾಹತುವಿನಲ್ಲಿ ಗುಂಡಿ ಬಿದ್ದಿರುವ ರಸ್ತೆ 

   

ಪ್ರಜಾವಾಣಿ ಚಿತ್ರಗಳು: ಸತೀಶ್‌ ಬಡಿಗೇರ

ಹರಿಹರ (ದಾವಣಗೆರೆ): ‘ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಿಂದ ಕಚ್ಚಾವಸ್ತು ತರಿಸುವುದು ಸುಲಭ. ಹತ್ತಾರು ಟನ್ನಿನ ಭಾರಿ ವಾಹನದಲ್ಲಿ ಕೆಲವೇ ದಿನಗಳಿಗೆ ಹರಿಹರಕ್ಕೆ ಬರುತ್ತದೆ. ಆದರೆ, ಈ ಕಚ್ಚಾವಸ್ತುವನ್ನು ಕೈಗಾರಿಕಾ ವಸಾಹತುವಿಗೆ ಕೊಂಡೊಯ್ಯುವುದು ಕಷ್ಟ. ಹೊರರಾಜ್ಯದಿಂದ ನಗರದವರೆಗಿನ ಸಾಗಣೆಗಿಂತ ಹೆಚ್ಚಿನ ವೆಚ್ಚ ಮುಖ್ಯರಸ್ತೆಯಿಂದ ಕೈಗಾರಿಕೆಗೆ ತಲುಪಿಸಲು ತಗಲುತ್ತಿದೆ...’

ADVERTISEMENT

ಇದು ಹರಿಹರದ ಕೈಗಾರಿಕಾ ವಸಾಹತುವಿನಲ್ಲಿರುವ ಕೈಗಾರಿಕೋದ್ಯಮಿಗಳ ಅಳಲು. ಹದಗೆಟ್ಟ ರಸ್ತೆಯಲ್ಲಿ 10 ಚಕ್ರದ ಲಾರಿಗಳು ಸಂಚರಿಸುತ್ತಿಲ್ಲ. ಒಂದು ವೇಳೆ ಕೈಗಾರಿಕಾ ವಸಾಹತು ಪ್ರವೇಶಿಸಿದರೂ ರಸ್ತೆಯ ಮಧ್ಯದಲ್ಲೇ ವಾಹನದ ಚಕ್ರಗಳು ಸಿಲುಕುತ್ತಿವೆ. ಇಂತಹ ತೊಂದರೆ ಅನುಭವಿಸಿದ ಭಾರಿ ವಾಹನಗಳ ಚಾಲಕರು ಕಚ್ಚಾವಸ್ತುವನ್ನು ಹರಿಹರ–ಹರಪನಹಳ್ಳಿ ಮುಖ್ಯರಸ್ತೆಯಲ್ಲೇ ಸುರಿಯುತ್ತಿದ್ದಾರೆ.

43 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ‘ಹರಿಹರ ಕೈಗಾರಿಕಾ ವಸಾಹತು’ 1 ಮತ್ತು 2ನೇ ಹಂತದ ಕೈಗಾರಿಕೆಗಳು ‘ಕಿರ್ಲೋಸ್ಕರ್‌’ ಅಸ್ತಂಗತವಾದ ಬಳಿಕ ಮೆರುಗು ಕಳೆದುಕೊಂಡಿವೆ. ನಿರ್ಮಾಣದ ಸಂದರ್ಭದಲ್ಲಿ ಕಲ್ಪಿಸಿದ ಮೂಲಸೌಲಭ್ಯ ನಿರ್ವಹಣೆಯ ಕೊರತೆಯಿಂದ ಹಾಳಾಗಿವೆ. ಹರಿಹರ ನಗರಸಭೆಯ ಸುಪರ್ದಿಗೆ ಬಂದ ಬಳಿಕವೂ ಮೂಲಸೌಲಭ್ಯ ಸಿಕ್ಕಿಲ್ಲ. ಕಬ್ಬಿಣ, ಸ್ಟೀಲ್‌, ಮರಳು, ಕಟ್ಟಿಗೆ ಸೇರಿದಂತೆ ಇತರ ಕಚ್ಚಾವಸ್ತುಗಳಿಗೆ ಎರಡು ಬಾರಿ ಸಾಗಣೆ ವೆಚ್ಚ ಭರಿಸಬೇಕಾದ ಸ್ಥಿತಿ ಇಲ್ಲಿದೆ.

ಕೈಗಾರಿಕಾ ವಸಾಹತುವಿನಲ್ಲಿದ್ದ ಮಳೆನೀರು ಚರಂಡಿಗಳು ಸಂಪೂರ್ಣ ಮುಚ್ಚಿಹೋಗಿವೆ. ಸಣ್ಣ ಮಳೆಗೂ ಕೈಗಾರಿಕಾ ಪ್ರದೇಶ ಜಲಾವೃತವಾಗುತ್ತಿದೆ. ತಗ್ಗು ಪ್ರದೇಶದಲ್ಲಿರುವ ಕೈಗಾರಿಕೆಗಳಿಗೆ ನೀರು ನುಗ್ಗಿ ಲಕ್ಷಾಂತರ ನಷ್ಟ ಉಂಟಾಗುವುದು ಸಾಮಾನ್ಯವಾಗಿದೆ. ಎಂಜಿನಿಯರಿಂಗ್‌, ಯಂತ್ರೋಪಕರಣಗಳ ಬಿಡಿಭಾಗ, ಎಂಜಿನ್‌ ಲೈನರ್‌, ಫೌಂಡ್ರಿ ವರ್ಕ್‌ಶಾಪ್‌ಗಳು ಹೆಚ್ಚಾಗಿರುವ ಈ ಪ್ರದೇಶದಲ್ಲಿ ಮಳೆನೀರು ದುಃಸ್ವಪ್ನವಾಗಿ ಕಾಡುತ್ತಿದೆ.

‘ಮಳೆ ನೀರು ಚರಂಡಿ ಇಲ್ಲದೇ ಇರುವ ಕಾರಣಕ್ಕೆ ತೊಂದರೆ ಆಗುತ್ತಿದೆ. ಕೈಗಾರಿಕೆಗೆ ನೀರು ನುಗ್ಗಿದಾಗ ಹತ್ತಾರು ದಿನ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಮಳೆನೀರು ಚರಂಡಿ ನಿರ್ಮಾಣಕ್ಕೆ ನಗರಸಭೆಗೆ ಹಲವು ಬಾರಿ ಮನವಿ ಪತ್ರ ನೀಡಿದ್ದೇವೆ. 15 ವರ್ಷಗಳಿಂದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹರಿಹರೇಶ್ವರ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೆಹಮಾನ್‌.

ಕೈಗಾರಿಕಾ ವಸಾಹತುವಿನಲ್ಲಿ ಒಳಚರಂಡಿ ನಿರ್ಮಾಣಕ್ಕೆ 4 ವರ್ಷಗಳ ಹಿಂದೆ ಕಾಮಗಾರಿ ನಡೆದಿದೆ. ನಿರ್ಮಾಣ ಹಂತದಲ್ಲಾದ ಎಡವಟ್ಟುಗಳಿಂದ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ಅಸಾಧ್ಯವಾಗಿದೆ. ಡಾಂಬರು, ಸಿ.ಸಿ ರಸ್ತೆ ಮಾಡದೇ ಇರುವುದರಿಂದ ಮಳೆಗಾಲದಲ್ಲಿ ವಾಹನ ಸಂಚಾರ ಕಷ್ಟವಾಗುತ್ತಿದೆ.

ಕೈಗಾರಿಕಾ ವಸಾಹತುವಿನಲ್ಲಿ ಬೀದಿ ದೀಪದ ವ್ಯವಸ್ಥೆಯೂ ಸರಿಯಾಗಿಲ್ಲ. ಸಂಜೆಯಾಗುತ್ತಿದ್ದಂತೆ ಕುಡುಕರ ಹಾವಳಿ ವಿಪರೀತವಾಗಿದೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಕಣ್ಣಿಗೆ ರಾಚುತ್ತವೆ. ರಸ್ತೆ ಬದಿಯಲ್ಲಿ ಆಳೆತ್ತರದ ಗಿಡಗಳು ಬೆಳೆದಿವೆ. ಕಸ ಸಂಗ್ರಹ ಮತ್ತು ವಿಲೇವಾರಿ ಜವಾಬ್ದಾರಿಯನ್ನೂ ನಗರಸಭೆ ನಿರ್ವಹಿಸುತ್ತಿಲ್ಲ ಎಂಬುದು ಕೈಗಾರಿಕೋದ್ಯಮಿಗಳ ಆರೋಪ.

ಹರಿಹರದ ಕೈಗಾರಿಕಾ ವಸಾಹತುವಿನಲ್ಲಿ ಬಾಗಿಲು ಮುಚ್ಚಿದ ಕೈಗಾರಿಕೆ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವ್ಯಾಪ್ತಿಯಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿ ತಕ್ಕಮಟ್ಟಿಗೆ ಸೌಲಭ್ಯಗಳಿವೆ. ಹನಗವಾಡಿ ಕೈಗಾರಿಕಾ ಪ್ರದೇಶದಲ್ಲಿ ಹದಗೆಟ್ಟ ರಸ್ತೆಯ ಗುಂಡಿಗಳನ್ನು ಇತ್ತೀಚೆಗೆ ಮುಚ್ಚಲಾಗಿದೆ. ಎಲ್ಲೆಂದರಲ್ಲಿ ಬೆಳೆದ ಗಿಡಗಳನ್ನು ತೆರವುಗೊಳಿಸಲಾಗಿದೆ. ಇದೇ ಕಾರ್ಯವನ್ನು ನಗರ ಸ್ಥಳೀಯ ಸಂಸ್ಥೆ ಏಕೆ ಮಾಡುತ್ತಿಲ್ಲ ಎಂಬುದು ಕೈಗಾರಿಕೋದ್ಯಮಿಗಳ ಪ್ರಶ್ನೆ.

ಹರಿಹರದಲ್ಲಿ ತಯಾರಾಗುವ ಯಂತ್ರಗಳ ಬಿಡಿ ಭಾಗಗಳಿಗೆ ವಿಶ್ವದಾದ್ಯಂತ ಮಾರುಕಟ್ಟೆ ಇದೆ. ಆದರೆ ಕೈಗಾರಿಕಾ ವಸಾಹತು ಸ್ಥಿತಿ ವಿದೇಶಿ ಗ್ರಾಹಕರನ್ನು ಆಕರ್ಷಿಸುವಂತಿಲ್ಲ
ಎಂ.ಆರ್‌. ಸತ್ಯನಾರಾಯಣ ಮಾಲೀಕರು ಪ್ರದೀಪ್‌ ಎಂಟರ್‌ಪ್ರೈಸಸ್‌ ಹರಿಹರ
ಜಿಲ್ಲಾಮಟ್ಟದ ಏಕಗವಾಕ್ಷಿ ಸಭೆ ನಿಯಮಿತವಾಗಿ ನಡೆಯಬೇಕು. ಕೈಗಾರಿಕೆಗಳ ಅಭಿವೃದ್ಧಿಗೆ ಸಲಹಾ ಸಮಿತಿ ರಚಿಸಬೇಕು. ಅಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಬೇಕು
ಎನ್‌.ಸಿ. ಹನುಮಂತರಾವ್‌ ಕಾರ್ಯದರ್ಶಿ ಹರಿಹರೇಶ್ವರ ಸಣ್ಣ ಕೈಗಾರಿಕೆಗಳ ಸಂಘ
ಕೈಗಾರಿಕಾ ವಸಾಹತು ದೊಡ್ಡದಾಗಿದೆ. ನಗರಸಭೆಯ ಅನುದಾನದಲ್ಲಿ ರಸ್ತೆ ಚರಂಡಿ ಅಭಿವೃದ್ಧಿಪಡಿಸುವುದು ಕಷ್ಟ. ವಿಶೇಷ ಅನುದಾನ ಸಿಕ್ಕರೆ ಅನುಕೂಲ. ಬೀದಿದೀಪ ಅಳವಡಿಸಲಾಗುತ್ತಿದೆ
ಸುಬ್ರಮಣ್ಯ ಶೆಟ್ಟಿ ಪೌರಾಯುಕ್ತ ಹರಿಹರ ನಗರಸಭೆ

ಖಾಲಿ ಇವೆ ಕೈಗಾರಿಕಾ ನಿವೇಶನ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (ಕೆಎಸ್‌ಎಸ್‌ಐಡಿಸಿ) ಹರಿಹರದಲ್ಲಿ ಅಭಿವೃದ್ಧಿಪಡಿಸಿದ ಕೈಗಾರಿಕಾ ವಸಾಹತುವಿನಲ್ಲಿ ಹಲವು ನಿವೇಶನಗಳು ಖಾಲಿ ಬಿದ್ದಿವೆ. ಕೈಗಾರಿಕೆ ಸ್ಥಾಪಿಸುವುದಾಗಿ ಪಡೆದ ನಿವೇಶನಗಳನ್ನು ಅನೇಕರು ಖಾಲಿ ಬಿಟ್ಟಿದ್ದಾರೆ. ನಾಲ್ಕೈದು ದಶಕಗಳ ಹಿಂದೆ ಅಭಿವೃದ್ಧಿಯಾಗಿರುವ ಹರಿಹರ ಕೈಗಾರಿಕಾ ವಸಾಹತುವಿನಲ್ಲಿ ಜಾಲಿ ಕಳೆ ಗಿಡಗಳು ಬೆಳೆದುಕೊಂಡಿದ್ದು ಹಾಳು ಕೊಂಪೆಯಂತೆ ಕಾಣಿಸುತ್ತಿವೆ. ಕೆಎಸ್‌ಎಸ್‌ಐಡಿಸಿ ದಾಖಲೆಗಳ ಪ್ರಕಾರ ಇಲ್ಲಿ 67 ಕೈಗಾರಿಕೆಗಳಿವೆ. ವಾಸ್ತವದಲ್ಲಿ ಹಲವು ಕಟ್ಟಡಗಳಿಗೆ ಬೀಗ ಹಾಕಲಾಗಿವೆ. ಕೆಲವು ಕೈಗಾರಿಕಾ ಕಟ್ಟಡಗಳ ಎದುರು ‘ಬಾಡಿಗೆ ದೊರೆಯುತ್ತದೆ’ ಎಂಬ ಫಲಕ ನೇತು ಹಾಕಲಾಗಿದೆ. ‘ರಾಜಕೀಯ ಪ್ರಭಾವ ಬಳಸಿ ಪಡೆದ ನಿವೇಶನದಲ್ಲಿ ಕೈಗಾರಿಕೆಗಳೇ ಕಾರ್ಯಾರಂಭವಾಗಿಲ್ಲ. ಕಾಲಮಿತಿಯಲ್ಲಿ ಕೈಗಾರಿಕೆ ಪ್ರಾರಂಭಿಸದಿದ್ದರೆ ನಿವೇಶನ ಹಿಂಪಡೆಯುವ ಅಧಿಕಾರ ನಿಗಮಕ್ಕಿದೆ. ನಿವೇಶನ ಹಂಚಿಕೆ ಮಾಡಿ ಕೈತೊಳೆದುಕೊಳ್ಳುವ ಕೆಲಸವನ್ನು ನಿಗಮ ಮಾಡುತ್ತಿದೆ. ಕೈಗಾರಿಕೆಗಳ ಸುಸ್ಥಿತಿಯ ಪರಿಶೀಲನೆ ಮಾಡಬೇಕಾಗಿರುವ ಕೈಗಾರಿಕಾ ಇಲಾಖೆಯ ನಿರ್ಲಕ್ಷ್ಯವೂ ಇಲ್ಲಿ ಎದ್ದು ಕಾಣುತ್ತಿದೆ’ ಎಂಬುದು ಉದ್ಯಮಿಗಳ ಆಕ್ರೋಶ.

Quote -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.