ADVERTISEMENT

ಹರಿಹರ: ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 14:47 IST
Last Updated 11 ಫೆಬ್ರುವರಿ 2025, 14:47 IST
ಹರಿಹರದ ತಹಶೀಲ್ದಾರ್ ಕಚೇರಿ ಎದುರು ಮಂಗಳವಾರ ಮುಷ್ಕರ ನಡೆಸಿದ ಗ್ರಾಮ ಆಡಳಿತ ಅಧಿಕಾರಿಗಳು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು
ಹರಿಹರದ ತಹಶೀಲ್ದಾರ್ ಕಚೇರಿ ಎದುರು ಮಂಗಳವಾರ ಮುಷ್ಕರ ನಡೆಸಿದ ಗ್ರಾಮ ಆಡಳಿತ ಅಧಿಕಾರಿಗಳು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು   

ಹರಿಹರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಮಂಗಳವಾರ ಕರ್ತವ್ಯಕ್ಕೆ ಗೈರಾಗಿ ನಗರದ ತಹಶೀಲ್ದಾರ್ ಕಚೇರಿ ಎದುರು 2ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ಕಳೆದ ಬಾರಿ ಮುಷ್ಕರ ನಡೆಸಿದಾಗ 8 ದಿನಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ನೀಡಿದ್ದ ಭರವಸೆ ಈಡೇರದ್ದರಿಂದ ಮತ್ತೆ ಮುಷ್ಕರ ಆರಂಭಿಸಿರುವುದಾಗಿ ಪ್ರತಿಭಟನಕಾರರು ತಿಳಿಸಿದರು.

ಸುಸಜ್ಜಿತ ಕಚೇರಿ, ಮೊಬೈಲ್, ಸಿಯುಜಿ ಸಿಮ್, ಡೆಟಾ, ಲ್ಯಾಪ್‌ಟಾಪ್, ಪ್ರಿಂಟರ್ ವ್ಯವಸ್ಥೆ ಮಾಡಬೇಕು. ತಾಂತ್ರಿಕ ಕೆಲಸಕ್ಕೆ ತಕ್ಕ ವೇತನ ನೀಡಬೇಕು, ಪದೋನ್ನತಿ, ಪತಿ–ಪತ್ನಿಯ ವರ್ಗಾವಣೆ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ವೃಂದ ಹಾಗೂ ನೇಮಕಾತಿಗೆ ತಿದ್ದುಪಡಿ, ಕರ್ತವ್ಯದ ವೇಳೆ ಮೃತಪಟ್ಟ ನೌಕರರ ಕುಟುಂಬಕ್ಕೆ ₹50 ಲಕ್ಷ ಪರಿಹಾರ, ಪ್ರಯಾಣ ಭತ್ಯೆ ₹5,000ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದರು.

ಬೆಳೆ ಸಮೀಕ್ಷೆ, ಬೆಳೆ ಹಾನಿ ಪರಿಹಾರದ ಕೆಲಸ ಕೃಷಿ, ತೋಟಗಾರಿಕೆ ಇಲಾಖೆಗೆ ವಹಿಸಬೇಕು. ಮ್ಯೂಟೇಶನ್ ಅವಧಿ ವಿಸ್ತರಿಸಬೇಕು. ಪ್ರೋಟೋಕಾಲ್ ಕೆಲಸದಿಂದ ಕೈಬಿಡಬೇಕು. ದಫ್ತರ್ ಹಾಗೂ ಜಮಾಬಂದಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್ ಕೆ. ಮನವಿ ಸ್ವೀಕರಿಸಿದರು. ಗ್ರಾಮ ಆಡಳಿತಾಧಿಕಾರಿ ನೌಕರರ ಸಂಘದ ಅಧ್ಯಕ್ಷ ಹೇಮಂತಕುಮಾರ್, ಉಪಾಧ್ಯಕ್ಷ ದೇವರಾಜ್, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪ್ರಭು, ಖಜಾಂಚಿ ಸೌಮ್ಯ ಮಲ್ಲಿಕಾರ್ಜುನ, ಮಾರುತಿ, ಶಿವಪ್ರಕಾಶ್, ಹರೀಶ್, ಬೋರಯ್ಯ, ಪುಷ್ಪ ದೊಡ್ಡಮನಿ, ಅನ್ನಪೂರ್ಣ, ನವೀನ್ ಕಟ್ಟೇರ, ರೇಖಾ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.