ADVERTISEMENT

ದಾವಣಗೆರೆಯಲ್ಲಿ ಮಳೆಯ ಅಬ್ಬರ: ಗುಂಡಿಗೆ ಬಿದ್ದ ಮಹಿಳೆಯರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 2:12 IST
Last Updated 2 ಅಕ್ಟೋಬರ್ 2021, 2:12 IST
ದಾವಣಗೆರೆಯಲ್ಲಿ ಶುಕ್ರವಾರ ರಾತ್ರಿ ಉತ್ತಮವಾಗಿ ಮಳೆ ಸುರಿದಿದ್ದು, ಎಪಿಎಂಸಿ ಬಳಿಯ ರೈಲ್ವೆ ಕೆಳಸೇತುವೆಯ ರಸ್ತೆ ಮೇಲೆ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.  ಪ್ರಜಾವಾಣಿ ಚಿತ್ರ – ಸತೀಶ ಬಡಿಗೇರ್‌
ದಾವಣಗೆರೆಯಲ್ಲಿ ಶುಕ್ರವಾರ ರಾತ್ರಿ ಉತ್ತಮವಾಗಿ ಮಳೆ ಸುರಿದಿದ್ದು, ಎಪಿಎಂಸಿ ಬಳಿಯ ರೈಲ್ವೆ ಕೆಳಸೇತುವೆಯ ರಸ್ತೆ ಮೇಲೆ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.  ಪ್ರಜಾವಾಣಿ ಚಿತ್ರ – ಸತೀಶ ಬಡಿಗೇರ್‌   

ದಾವಣಗೆರೆ: ನಗರವೂ ಸೇರಿ ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿ ಗುಡುಗು ಸಹಿತ ಮಳೆ ಅಬ್ಬರಿಸಿತು. ಅಶೋಕ ರಸ್ತೆಯ ಬಳಿಯ ರೈಲ್ವೆ ಗೇಟ್‌ ಬಳಿ ಮಳೆನೀರು ತುಂಬಿದ್ದ ಗುಂಡಿಗೆ ಇಬ್ಬರು ಮಹಿಳೆಯರು ಬಿದ್ದಿದ್ದು, ತಕ್ಷಣವೇ ಸ್ಥಳೀಯರು ಅವರನ್ನು ರಕ್ಷಿಸಿದರು.

ರಾತ್ರಿ 9ರ ಸುಮಾರಿಗೆ ನಗರದಲ್ಲಿ ಗುಡುಗು ಆರಂಭಗೊಳ್ಳುವ ಮೂಲಕ ಮಳೆಯ ಮುನ್ಸೂಚನೆ ನೀಡಿತು. ಕೆಲ ಹೊತ್ತಿನಲ್ಲೇ ತುಂತುರು ಮಳೆ ಶುರುವಾಯಿತು. ಗುಡುಗು–ಮಿಂಚು ಅಬ್ಬರಿಸುತ್ತ ರಾತ್ರಿ 9.30ರ ಹೊತ್ತಿಗೆ ಬಿರುಸಿನಿಂದ ಮಳೆ ಸುರಿಯತೊಡಗಿತು. ಕೆಲವು ದಿನಗಳಿಂದ ಮಳೆ ಬಾರದೇ ಇರುವುದರಿಂದ ಜನ ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದರು. ಉತ್ತಮವಾಗಿ ಸುರಿದ ಮಳೆಯು ವಾತಾವರಣವನ್ನು ತಂಪು ಮಾಡಿತು.

ನಗರದ ಅಶೋಕ ರೈಲ್ವೆ ಗೇಟ್‌ ಬಳಿ ಚರಂಡಿ ಕಾಮಗಾರಿಗಾಗಿ ತೆರೆದಿದ್ದ ಗುಂಡಿ ಮಳೆ ನೀರಿನಿಂದ ತುಂಬಿಕೊಂಡಿತ್ತು. ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರು ಗಮನಿಸದೇ ಗುಂಡಿಯೊಳಗೆ ಬಿದ್ದಿದ್ದರು. ತಕ್ಷಣವೇ ಸ್ಥಳೀಯರು ಅವರನ್ನು ಮೇಲಕ್ಕೆ ಎತ್ತುವ ಮೂಲಕ ರಕ್ಷಿಸಿದರು. ಸಣ್ಣ–ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ADVERTISEMENT

ಚರಂಡಿಗಳು ಉಕ್ಕಿ ಹರಿದು, ಕೆಲವೆಡೆ ರಸ್ತೆಯ ಮೇಲೂ ನೀರು ಹರಿದವು. ತಗ್ಗು ಪ್ರದೇಶದ ಕೆಲ ಬಡಾವಣೆಗಳಲ್ಲಿ ಮಳೆ ನೀರು ನಿಂತು ಕೆರೆಯಂತಾಗಿತ್ತು. ತಡ ರಾತ್ರಿಯವರೆಗೂ ಮಳೆ ಸಣ್ಣದಾಗಿ ಸುರಿಯುತ್ತಿತ್ತು.

ನ್ಯಾಮತಿ, ಹೊನ್ನಾಳಿ, ಚನ್ನಗಿರಿ, ಹರಿಹರ, ಮಲೇಬೆನ್ನೂರಿನ ಸುತ್ತ ರಾತ್ರಿ ಕೆಲ ಗಂಟೆಗಳ ಕಾಲ ಗುಡುಗು–ಮಿಂಚಿನೊಂದಿಗೆ ಉತ್ತಮವಾಗಿ ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.