ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಕೃಷಿ ಮತ್ತು ಮನೆಗಳಿಗೆ ಹಾನಿಯಾಗಿದೆ. ₹ 2.63 ಕೋಟಿ ನಷ್ಟ ಉಂಟಾಗಿದೆ.
ಚನ್ನಗಿರಿಯಲ್ಲಿ 8.2 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ 5.3 ಮಿ.ಮೀ, ಹರಿಹರದಲ್ಲಿ 3.3 ಮಿ.ಮೀ, ಹೊನ್ನಾಳಿಯಲ್ಲಿ 3.6 ಮಿ.ಮೀ, ಜಗಳೂರಿನಲ್ಲಿ 3.2 ಮಿ.ಮೀ, ನ್ಯಾಮತಿಯಲ್ಲಿ 2.3 ಮಿ.ಮೀ ಮಳೆಯಾಗಿದೆ.
ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 8 ಮನೆಗಳಿಗೆ, ಹರಿಹರ ತಾಲ್ಲೂಕಿನಲ್ಲಿ 9 ಮನೆಗಳಿಗೆ ಹಾನಿಯಾಗಿದೆ. ಒಂದು ಕುರಿ ಸಾವಿಗೀಡಾಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ 31 ಮನೆಗಳಿಗೆ ಹಾನಿಯಾಗಿದೆ. ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 17 ಮನೆಗಳು ಕುಸಿದಿವೆ.
ಚನ್ನಗಿರಿ ತಾಲ್ಲೂಕಿನಲ್ಲಿ 56 ಮನೆಗಳು ತೊಂದರೆಗೆ ಈಡಾಗಿವೆ. 10 ಎಕರೆ ಅಡಿಕೆ, 30 ಎಕರೆ ಮೆಕ್ಕೆಜೋಳ ಹಾಗೂ 40 ಎಕರೆ ಭತ್ತ ಹಾನಿಯಾಗಿದೆ. ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 15 ಮನೆಗಳಿಗೆ ತೊಂದರೆಯಾಗಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ದಾವಣಗೆರೆ ತಾಲ್ಲೂಕು ರಾಮಗೊಂಡನಹಳ್ಳಿಯಲ್ಲಿ ಬೀರೂರು–ಸಮ್ಮಸಗಿ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಸೇತುವೆ ನಿರ್ಮಿಸಿರುವುದರಿಂದ ಅದರಲ್ಲಿ ನೀರು ಹರಿದು ಹೋಗದೇ ವಾಪಸ್ಸಾಗುತ್ತಿದೆ. ಇದರಿಂದ ರುದ್ರಮ್ಮ ಸಹಿತ ಹಲವರ ಮನೆಗಳಿಗೆ ನೀರು ನುಗ್ಗಿದೆ. ತೋಟಗಳು ಜಲಾವೃತಗೊಂಡಿವೆ. ಜತೆಗೆ ಇಲ್ಲಿನ ಹಳ್ಳ ಅತಿಕ್ರಮಣ ಆಗಿರುವುದು ಕೂಡ ಸಮಸ್ಯೆಗೆ ಕಾರಣವಾಗಿದೆ.
ಹೆಬ್ಬಾಳು ಗ್ರಾಮದ ಕೆರೆಯು 40 ವರ್ಷಗಳ ಬಳಿಕ ಕೋಡಿ ಬಿದ್ದಿದೆ. ಪಕ್ಕದ ಹಾಲುವರ್ತಿ ಕೆರೆಗೆ ನೀರು ಹರಿದು ಹೋಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.