ADVERTISEMENT

ತನ್ನ ಕಷ್ಟ ಮರೆತು ಬೇರೆಯವರ ಸಂಕಷ್ಟಕ್ಕೆ ನೆರವು

ಸೊಪ್ಪು ಮಾರುವ ಅಂಬುಜಮ್ಮನ ಮಾನವೀಯತೆಗೆ ಕರಗಿ ತಳ್ಳು ಗಾಡಿ ನೀಡಿದ ತಹಶೀಲ್ದಾರ್‌

ಬಾಲಕೃಷ್ಣ ಪಿ.ಎಚ್‌
Published 28 ಮೇ 2021, 2:52 IST
Last Updated 28 ಮೇ 2021, 2:52 IST
ಮಾರಾಟ ಮಾಡಲೆಂದು ತಂದ ಸೊಪ್ಪನ್ನು ಉಚಿತವಾಗಿ ನೀಡುತ್ತಿರುವ ಅಂಬುಜಮ್ಮ
ಮಾರಾಟ ಮಾಡಲೆಂದು ತಂದ ಸೊಪ್ಪನ್ನು ಉಚಿತವಾಗಿ ನೀಡುತ್ತಿರುವ ಅಂಬುಜಮ್ಮ   

ದಾವಣಗೆರೆ: ಪತಿ, ಮಗನನ್ನು ಕಳೆದುಕೊಂಡು ಸೊಪ್ಪು ಮಾರಿ ಜೀವನ ಮಾಡುವ ನೀಲಮ್ಮನ ತೋಟದ ಅಂಬುಜಮ್ಮ ಅವರು ಸಂಕಷ್ಟದಲ್ಲಿ ಇರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ತಮ್ಮಲ್ಲಿರುವ ಅಷ್ಟೂ ಸೊಪ್ಪನ್ನು ಉಚಿತವಾಗಿ ನೀಡಿದ್ದಾರೆ. ಅದನ್ನು ನೋಡಿದ ದಾವಣಗೆರೆಯ ತಹಶೀಲ್ದಾರ್‌ ಸೊಪ್ಪು ಮಾರಲು ಉಪಯೋಗ ಆಗಲು ಒಂದು ತಳ್ಳು ಗಾಡಿಯನ್ನು ಅಂಬುಜಮ್ಮಗೆ ಕೊಡುಗೆಯಾಗಿ ನೀಡಿದ್ದಾರೆ.

ಇಂಥ ಎರಡೆರಡು ಮಾನವೀಯ ಕಾರ್ಯ ಗುರುವಾರ ಇಲ್ಲಿನ ಕೆ.ಆರ್‌.ಮಾರುಕಟ್ಟೆಯಲ್ಲಿ ನಡೆಯಿತು.

ಅಂಬುಜಮ್ಮ ಅವರ ಪತಿ ರಮೇಶ್‌ ಹಮಾಲಿ ಕೆಲಸ ಮಾಡುತ್ತಿದ್ದರು. 9 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇದ್ದ ಮಗನೊಬ್ಬ 6 ವರ್ಷಗಳ ಹಿಂದೆ ಸಂಬಂಧಿಕರ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. 16 ವರ್ಷಗಳ ಹಿಂದೆ ರೈಲು ನಿಲ್ದಾಣದಲ್ಲಿ ಯಾರೋ ತೊಟ್ಟಿಗೆ ಎಸೆದುಹೋಗಿದ್ದ ಹೆಣ್ಣು ಮಗುವನ್ನೂ ಸಾಕಿದ್ದರು. ಈಗ ಈ ತಾಯಿ ಮತ್ತು ಮಗಳು ನೀಲಮ್ಮನ ತೋಟದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಇದ್ದಾರೆ.

ADVERTISEMENT

‘ಗುರುವಾರ ಸೊಪ್ಪು ಮಾರುತ್ತಾ ಹಳೇ ದಾವಣಗೆರೆ ಕಡೆ ಹೋದೆ. ಬಹಳ ಸಂಕಷ್ಟದಲ್ಲಿ ಇರುವ ಲಿಂಗತ್ವ ಅಲ್ಪಸಂಖ್ಯಾತರಿಗೆ ಆಹಾರದ ಕಿಟ್‌ ವಿತರಣೆ ಮಾಡಲು ತಹಶೀಲ್ದಾರರು ತಯಾರಿ ನಡೆಸುತ್ತಿದ್ದರು. ಅದಕ್ಕಾಗಿ ನನ್ನ ಗಾಡಿಯಲ್ಲಿ ₹ 1 ಸಾವಿರಕ್ಕಿಂತ ಹೆಚ್ಚಿನ ಬೆಲೆಯ ಸೊಪ್ಪು ಇತ್ತು. ಅದನ್ನು ಕೊಟ್ಟುಬಿಟ್ಟೆ. ಒಬ್ಬರ ಕಷ್ಟಕ್ಕೆ ಒಬ್ಬರು ಆಗಬೇಕಲ್ಲ’ ಎಂದು ಅಂಬುಜಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಡತನದಲ್ಲೇ ಬದುಕುತ್ತಿರುವ ನನಗೆ ಕಷ್ಟ ಅಂದರೆ ಏನೆಂಬುದು ಗೊತ್ತು. ಪಾಪ ಅವರಾದರೂ ಒಂದು ಹೊತ್ತು ನೆಮ್ಮದಿಯಾಗಿ ಊಟ ಮಾಡಲಿ ಎಂದು ನೆರವಾದೆ’ ಎಂದರು.

‘ಅಂಬುಜಮ್ಮ ಸೊಪ್ಪು ಕೊಡುತ್ತೇನೆ ಎಂದು ಹೇಳಿದಾಗ ನಂಬಲಾಗಲಿಲ್ಲ. ನೀವೇ ಕಷ್ಟದಲ್ಲಿದ್ದೀರಿ; ಯಾಕೆ ಕೊಡುತ್ತೀರಿ ಅಂದೆ.
ನನ್ನ ಮಾತನ್ನು ಕೇಳದೇ ಸೊಪ್ಪು ಕೊಟ್ಟರು. ಅವರ ಬಗ್ಗೆ ವಿಚಾರಿಸಿದೆ. ತುಂಬಾ ಕಷ್ಟದಲ್ಲಿದ್ದಾರೆ. ಅವರು ಸೊಪ್ಪು ಮಾರುವ ತಳ್ಳುಗಾಡಿಯನ್ನೂ ದಿನದ ಬಾಡಿಗೆಗೆ ಪಡೆಯುತ್ತಿದ್ದಾರೆ ಎಂದು ಗೊತ್ತಾಯಿತು. ಜೈನ್‌ ಫ್ರೆಂಡ್ಸ್‌ ಗ್ರೂಪ್‌ನವರು ಬಡ ವ್ಯಾಪಾರಿಗಳಿಗೆ ವಿತರಿಸಿ ಎಂದು 25 ಗಾಡಿ ನೀಡಿದ್ದರು. ಅದರಲ್ಲಿ ಒಂದೇ ಒಂದು ಗಾಡಿ ಉಳಿದಿತ್ತು. ಅದನ್ನು ಅಂಬುಜಮ್ಮನವರಿಗೆ ನೀಡಿದೆ. ಜತೆಗೆ ಒಂದು ಫುಡ್‌ಕಿಟ್‌ ಕೂಡ ಕೊಟ್ಟು ಕಳುಹಿಸಿದೆ’ ಎಂದು ದಾವಣಗೆರೆ ತಹಶೀಲ್ದಾರ್‌ ಬಿ.ಎನ್‌.ಗಿರೀಶ್‌ ಹೇಳಿದರು.

‘ಪತಿ ಮೃತಪಟ್ಟಿರುವುದರಿಂದ ವಿಧವಾ ಪಿಂಚಣಿ ಪಡೆಯಬೇಕು ಎಂಬುದು ಕೂಡ ಅಂಬುಜಮ್ಮ ಅವರಿಗೆ ಗೊತ್ತಿಲ್ಲ. ಕೂಡಲೇ ಪಿಂಚಣಿ ಒದಗಿಸಲು ಕ್ರಮ ವಹಿಸುವಂತೆ ಗ್ರಾಮ ಲೆಕ್ಕಾಧಿಕಾರಿಗೆ ತಿಳಿಸಿದ್ದೇನೆ’ ಎಂದು ಹೇಳಿದರು.

ಅಂಬುಜಮ್ಮ ಅನಕ್ಷರಸ್ಥೆ ಇರಬಹುದು; ಆಕೆ ತೋರಿಸಿದ ಮಾನವೀಯ ಸ್ಪಂದನವನ್ನು ಅಕ್ಷರ ಕಲಿತವರು ನೋಡಿ ಕಲಿಯಬೇಕಿದೆ. ಅಂಥವರಿಂದಲೇ ಜಗತ್ತು ಸುಂದರವಾಗಿದೆ ಎಂದು ತಹಶೀಲ್ದಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.