ADVERTISEMENT

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಹೈಟೆಕ್‌ ನಕಲು: 5 ಮಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 19:56 IST
Last Updated 6 ಆಗಸ್ಟ್ 2019, 19:56 IST
   

ದಾವಣಗೆರೆ: ಎರಡು ವರ್ಷಗಳ ಹಿಂದೆ ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಯ ಸಂದರ್ಭ ಕಿವಿಯಲ್ಲಿ ಮೈಕ್ರೊ ಸ್ಪೀಕರ್‌, ಬನಿಯನ್‌ನಲ್ಲಿ ಎಲೆಕ್ಟ್ರಾನಿಕ್ ಡಿವೈಸ್‌ ಅಳವಡಿಸಿಕೊಂಡು ಹೈಟೆಕ್‌ ರೀತಿಯಲ್ಲಿ ನಕಲು ಮಾಡಿ ಅಭ್ಯರ್ಥಿಗಳು ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಎನ್‌ ಪೊಲೀಸರು ಮತ್ತೆ ಐವರನ್ನು ಬಂಧಿಸಿದ್ದಾರೆ.

ಬೆಂಗಳೂರು ಜಲಮಂಡಳಿಯ ಮಾಜಿ ನೌಕರ, ಧಾರವಾಡದಲ್ಲಿ ಕೋಚಿಂಗ್‌ ಕ್ಲಾಸ್‌ ನಡೆಸುತ್ತಿದ್ದ ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕು ಕೋಣನಕೊಪ್ಪದ ಮಾರುತಿ ‍ಪುರ‍್ಲೆ (32), ಬೆಂಗಳೂರು ಜಲಮಂಡಳಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಸಾಗರ ಕರ್ಕಿ (26), ಕಲಬುರ್ಗಿ ರೇಷ್ಮೆ ಕಾಲೇಜಿನ ಪ್ರಾಂಶುಪಾಲ ಶ್ರೀಶೈಲ (32), ಹುಬ್ಬಳ್ಳಿ ರೈಲ್ವೆ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಮಂಜುನಾಥ (36), ದಾವಣಗೆರೆ ನಿಟುವಳ್ಳಿಯ ರಾಜಪ್ಪ (42) ಬಂಧಿತ ಆರೋಪಿಗಳು.

ಕೆಪಿಎಸ್‌ಸಿ ವತಿಯಿಂದ 2017ರ ಅಕ್ಟೋಬರ್‌ 13ರಿಂದ 16ರವರೆಗೆ ಮೊರಾರ್ಜಿ ದೇಸಾಯಿ ಸಹ ಶಿಕ್ಷಕರ ನೇಮಕಾತಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ದಾವಣಗೆರೆಯ ಮಿಲಾತ್‌ ಕಾಲೇಜಿನಲ್ಲಿ ತಿಪ್ಪೇಶ್‌ ನಾಯ್ಕ ಹಾಗೂ ವಿದ್ಯಾನಗರದ ನೂತನ್‌ ಕಾಲೇಜಿನಲ್ಲಿ ಸುಭಾಶ್‌ ಮತ್ತು ಡಿ. ಶ್ರೀನಿವಾಸ್‌ ಈ ರೀತಿ ಹೈಟೆಕ್‌ ನಕಲು ಮಾಡುತ್ತಿದ್ದಾಗ ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ನೇತೃತ್ವದ ತಂಡ ದಾಳಿ ನಡೆಸಿ ಪತ್ತೆಹಚ್ಚಿತ್ತು.

ADVERTISEMENT

ಪರೀಕ್ಷೆ ಬರೆಯಲು ಸಹಾಯ ಮಾಡಿದ್ದ ಹರಪನಹಳ್ಳಿ ಲಕ್ಷ್ಮೀಪುರ ತಾಂಡಾದ ಕೃಷ್ಣನಾಯ್ಕ (24), ಪ್ರದೀಪ್‌ (26), ಶಿವರಾಜ್‌ (24), ಪಾಪಣ್ಣ (51), ನಾಗೇಶ್‌ ಪಾಟೀಲ್‌ (30), ರಾಮಚಂದ್ರಯ್ಯ (59), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಪ್ರಕಾಶ್‌, ಸಿವಿಲ್‌ ಎಂಜಿನಿಯರ್‌ ಲೋಕೇಶ್‌ ರೆಡ್ಡಿ, ಬೆಂಗಳೂರು ಜಲಮಂಡಳಿಯಲ್ಲಿ ಮೀಟರ್‌ ರೀಡರ್‌ ಆಗಿದ್ದ ರಾಘವೇಂದ್ರ (36) ಅವರನ್ನು ಆಗ ಬಂಧಿಸಲಾಗಿತ್ತು.

ಪ್ರಕರಣದ ರೂವಾರಿ ಮಾರುತಿ ಪುರ‍್ಲೆ ಸಿಕ್ಕಿರಲಿಲ್ಲ. ಈ ವರ್ಷ ಜುಲೈ 23ರಂದು ಕೆಪಿಎಸ್‌ಸಿಯಿಂದ ಎಸ್‌ಡಿಎ, ಎಫ್‌ಡಿಎ ಪರೀಕ್ಷೆಗಳು ನಡೆಯುತ್ತಿದ್ದಾಗ ರಾಣೆಬೆನ್ನೂರಿನಲ್ಲಿ ಅಶ್ವಿನಿ ಎಂಬ ಅಭ್ಯರ್ಥಿ ಇದೇ ರೀತಿ ನಕಲು ಮಾಡಲು ಹೋಗಿ ಸಿಕ್ಕಿಬಿದ್ದಿದ್ದರು. ಈ ಆರೋಪಿಯ ವಿಚಾರಣೆ ನಡೆಸಿದಾಗ ಮಾರುತಿ ಪುರ‍್ಲೆಯ ಮಾಹಿತಿ ಸಿಕ್ಕಿದ್ದರಿಂದ ಬಂಧಿಸಲಾಗಿದೆ.

ಪರೀಕ್ಷೆ ಆರಂಭಗೊಂಡ ತಕ್ಷಣ ಪ್ರಾಂಶುಪಾಲ ಶ್ರೀಶೈಲ ಪ್ರಶ್ನೆಪತ್ರಿಕೆಯ ಫೋಟೊ ತೆಗೆದು ಆರೋಪಿಗಳಿಗೆ ಕಳುಹಿಸುತ್ತಿದ್ದ. ಅವರು ಲಾಡ್ಜ್‌ನಲ್ಲಿ ಕುಳಿತುಕೊಂಡು ಅದರ ಉತ್ತರ ಹುಡುಕಿ ಅಭ್ಯರ್ಥಿಗಳಿಗೆ ತಿಳಿಸುತ್ತಿದ್ದರು. ಇನ್ನಷ್ಟು ಆರೋಪಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದ್ದು ತನಿಖೆ ನಡೆಯುತ್ತಿದೆ. ಅಲ್ಲದೇ 2017ರ ಸೆಪ್ಟೆಂಬರ್‌ನಲ್ಲಿ ನಡೆದ ಎಂಜಿನಿಯರ್‌ ನೇಮಕಾತಿ ಪರೀಕ್ಷೆಯಲ್ಲಿಯೂ ನಕಲು ಆಗಿರುವ ಬಗ್ಗೆ ಮಾಹಿತಿ ಇದೆ. ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಎಎಸ್‌ಪಿ ಎಂ. ರಾಜೀವ್‌, ಸಿಇಎನ್‌ ಠಾಣೆಯ ಇನ್‌ಸ್ಪೆಕ್ಟರ್‌ ಟಿ.ವಿ. ದೇವರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.