ADVERTISEMENT

ಹಿಂದೂ ಮಹಾಗಣಪತಿ ಉತ್ಸವಕ್ಕೆ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 13:44 IST
Last Updated 5 ಸೆಪ್ಟೆಂಬರ್ 2024, 13:44 IST

ಪ್ರಜಾವಾಣಿ ವಾರ್ತೆ

ಮಲೇಬೆನ್ನೂರು: ಪಟ್ಟಣದ ಕರ್ನಾಟಕ ನೀರಾವರಿ ನಿಗಮದ ಬಯಲಿನಲ್ಲಿ ಹೋಬಳಿ ವ್ಯಾಪ್ತಿಯ ನಾಗರಿಕರ ಸಹಕಾರದೊಂದಿಗೆ 3ನೇ ವರ್ಷದ ಹಿಂದೂ ಮಹಾಗಣಪತಿ ಸಾರ್ವಜನಿಕ ಗಣೇಶೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಘಟನೆ ಅಧ್ಯಕ್ಷ ಅಶೋಕ್‌ ಎರೆಚಿಕ್ಕನಹಳ್ಳಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಸೆ. 7ರಂದು ಗಣೇಶಮೂರ್ತಿಯನ್ನು ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪಿಸಲಾಗುವುದು. ಸೆ. 21ರಂದು ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಗುವುದು. ಎಂಟೂವರೆ ಅಡಿ ಎತ್ತರದ ಗಣೇಶಮೂರ್ತಿಯನ್ನು ಸ್ಥಳೀಯ ಶಿಲ್ಪಿ ರಾಮಚಂದ್ರಾಚಾರ್‌ ನಿರ್ಮಿಸಿ ಕೊಟ್ಟಿದ್ದಾರೆ. ಮುಖ್ಯದ್ವಾರಕ್ಕೆ ವೀರ ಸಾವರ್ಕರ್‌ ಹಾಗೂ ಬಾಲಗಂಗಾಧರನಾಥ ತಿಲಕ್‌ ಅವರ ಹೆಸರು ಹಾಗೂ ಮಹಾಮಂಟಪಕ್ಕೆ ಸನಾತನ ವೇದಿಕೆ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು.

ADVERTISEMENT

ನಿತ್ಯ ಸಂಜೆ ಭಜನೆ, ಕೀರ್ತನೆ ಹಾಗೂ ವಿದ್ಯಾರ್ಥಿಗಳಿಂದ, ಸ್ಥಳೀಯ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸೆ. 14ರಂದು ಪಿಡಬ್ಲ್ಯುಡಿ ಕ್ರಿಕೇಟರ್ಸ್‌ ವತಿಯಿಂದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಸಂಜೆ ಬೆಂಗಳೂರಿನ ಜಾದುಗಾರ್‌ ರವಿಕುಮಾರ್‌ ಅವರಿಂದ ಜಾದೂ ಪ್ರದರ್ಶನವಿದೆ ಎಂದರು.

ಸಂಘಟಕರಾದ ರಾಜೂ ಪೂಜಾರ್‌, ಜಿ.ಪಿ.ಹನುಮಗೌಡ, ರವಿ ಮೇದಾರ್‌, ಪುರಸಭಾ ಸದಸ್ಯ ಬೋವಿ ಶಿವು, ಕೆ.ಜಿ.ಲೋಕೇಶ್‌, ಮಾಜಿ ಸದಸ್ಯ ಸುದಬ್ಬಿ ರಾಜಪ್ಪ, ಚಿಟ್ಟಕ್ಕಿ ನಾಗರಾಜ್‌, ಎ.ಕೆ.ನಾಗರಾಜ್‌, ಶ್ರೀನಿವಾಸ ಗೌಡ, ಧೀರಜ್‌, ಚಂದ್ರು, ನಟರಾಜ್‌, ಹನುಮೇಶ್‌, ದೊರೈಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.