ಹೊನ್ನಾಳಿ: ‘ರಾಜ್ಯದ ಹಾಸನ ಸೇರಿದಂತೆ ಕೆಲವು ಕಡೆಗಳಲ್ಲಿ ಹೃದಯಾಘಾತಕ್ಕೆ ಹೆಚ್ಚಾಗಿ ಯುವಕರು ಬಲಿಯಾಗುತ್ತಿದ್ದು, ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುತ್ತಿದೆ’ ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಕಳವಳ ವ್ಯಕ್ತಪಡಿಸಿದರು.
ಮಂಗಳವಾರ ತಾಲ್ಲೂಕಿನ ಕತ್ತಿಗೆ ಗ್ರಾಮದಲ್ಲಿ ರಾಜ್ಯ ಸರ್ಕಾರದ ₹ 3.5 ಕೋಟಿ ಅನುದಾನದಡಿ ನಿರ್ಮಿಸಿದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಾವು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳದಿದ್ದರೆ ಅದಕ್ಕೆ ತಕ್ಕ ದಂಡ ತೆರಬೇಕಾಗುತ್ತದೆ. ಆದ್ದರಿಂದ ಕರಿದಿರುವ ಎಣ್ಣೆ ಪದಾರ್ಥಗಳು, ಮದ್ಯಪಾನ, ಧೂಮಪಾನ, ಗುಟ್ಕಾದಂತಹ ದುರಭ್ಯಾಸಗಳನ್ನು ಕೈಬಿಡಬೇಕು, ಪ್ರತಿನಿತ್ಯ ಶಿಸ್ತುಬದ್ಧ ಜೀವನ ನಡೆಸಬೇಕು’ ಎಂದು ಕಿವಿಮಾತು ಹೇಳಿದರು.
ಒತ್ತಡದ ಜೀವನದಿಂದ ಮುಕ್ತರಾಗಬೇಕಾದರೆ ಮೊದಲು 7 ರಿಂದ 8 ತಾಸು ಮೊಬೈಲ್‍ನಿಂದ ದೂರ ಇದ್ದು, ಸಂಪೂರ್ಣ ನಿದ್ದೆ ಮಾಡಿ. ಆಗ ನೀವು ಒತ್ತಡದ ಜೀವನದಿಂದ ಮುಕ್ತರಾಗುವಿರಿ ಎಂದು ಹೇಳಿದರು.
‘ಪ್ರತಿಯೊಬ್ಬರು ನಿಯಮಿತವಾಗಿ ನಿಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಮುಖ್ಯವಾಗಿ ಮಹಿಳೆಯರು ಕ್ಯಾನ್ಸರ್ ಸೇರಿದಂತೆ ಇತರೆ ರೋಗಗಳ ಬಗ್ಗೆ ಆಗಾಗ ತಪಾಸಣೆ ಮಾಡಿಸಿಕೊಂಡರೆ ಮುಂದಾಗುವ ಅನಾಹುತಗಳನ್ನು ತಪ್ಪಿಸಿಕೊಳ್ಳಬಹುದು. ಹಿಂದೆ ಆರೋಗ್ಯವೇ ಭಾಗ್ಯ ಎನ್ನುತ್ತಿದ್ದರು, ಈಗ ಆರೋಗ್ಯವೇ ಮಹಾಭಾಗ್ಯ ಎನ್ನುವಂತಾಗಿದೆ’ ಎಂದರು.
‘ರಾಜ್ಯ ಹೆದ್ದಾರಿ 25ರ ರಸ್ತೆ ಕಾಮಗಾರಿ ಸಂಪೂರ್ಣ ಹಾಳಾಗಿದ್ದು, ಈ ಸಂಬಂಧ ಸಂಸದರಾದ ತುಕರಾಂ, ನಾನು ಹಾಗೂ ಶಿವಮೊಗ್ಗದ ಸಂಸದರು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದು, ಅವರು ಹಸಿರು ನಿಶಾನೆ ತೋರಿಸಿದ್ದಾರೆ. ಮಾಧ್ಯಮದವರು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರೆ ಅದನ್ನು ಸಂಸತ್ ಅಧಿವೇಶನದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದರು.
ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ‘ನಾವೆಲ್ಲರೂ ನಡೆದಾಡುವುದನ್ನೇ ಕಡಿಮೆ ಮಾಡಿದ್ದೇವೆ, ಸೈಕಲ್ ತುಳಿಯುವುದನ್ನು ಬಿಟ್ಟಿದ್ದೇವೆ, ನಿರಂತರ ಚಟುವಟಿಕೆಗಳು ನಮ್ಮಿಂದಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳು ನಮ್ಮನ್ನು ಸಾವಿನಂಚಿಗೆ ತಂದಿಟ್ಟಿವೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಕತ್ತಿಗೆ ಹಾಗೂ ಕೂಲಂಬಿ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ₹ 7 ಕೋಟಿ ಅನುದಾನ ತಂದಿದ್ದು, ತಲಾ ಮೂರುವರೆ ಕೋಟಿ ವೆಚ್ಚದಲ್ಲಿ ಆರೋಗ್ಯ ಕೇಂದ್ರವನ್ನು ನಿರ್ಮಿಸಲಾಗಿದೆ’ ಎಂದರು.
ಗ್ರಾ.ಪಂ. ಅಧ್ಯಕ್ಷೆ ಓಬಮ್ಮ, ಉಪಾಧ್ಯಕ್ಷೆ ಮೀನಮ್ಮ, ಮಾಜಿ ಶಾಸಕ ಡಾ.ಡಿ.ಬಿ. ಗಂಗಪ್ಪ, ಜಿಲ್ಲಾ ಘಟಕದ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಡಿಎಚ್‍ಒ ಷಣ್ಮುಖಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗದ್ದಿಗೇಶ್, ಮುಖಂಡರಾದ ಕೆಂಗಲಹಳ್ಳಿ ಷಣ್ಮುಖಪ್ಪ, ಹನುಮನಹಳ್ಳಿ ಬಸವರಾಜಪ್ಪ, ಆರ್,ನಾಗಪ್ಪ, ಗುತ್ತಿಗೆದಾರ ಸಂತೋಷ್ ಉಪಸ್ಥಿತರಿದ್ದರು. ತಿಮ್ಮನಗೌಡ ಅವರು ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.