ADVERTISEMENT

ನಮ್ಮ ಜಮೀನಿನಲ್ಲಿ ಮನೆ ನಿರ್ಮಿಸುತ್ತಿರುವ ಹೊನ್ನಾಳಿ ಶಾಸಕ: ಸಂತ್ರಸ್ತರ ಆರೋಪ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2022, 4:52 IST
Last Updated 18 ಏಪ್ರಿಲ್ 2022, 4:52 IST
ಎಂ.ಪಿ.ರೇಣುಕಾಚಾರ್ಯ
ಎಂ.ಪಿ.ರೇಣುಕಾಚಾರ್ಯ   

ದಾವಣಗೆರೆ: ‘ನಮ್ಮ ಕುಟುಂಬದ ಪಿತ್ರಾರ್ಜಿತ ಜಮೀನಿನಲ್ಲಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅಕ್ರಮವಾಗಿ ಮನೆ ನಿರ್ಮಿಸುತ್ತಿದ್ದು, ಪ್ರಕರಣ ನ್ಯಾಯಾಲಯದಲ್ಲಿದ್ದರೂ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ’ ಎಂದು ಇತಿಹಾಸ ಉಪನ್ಯಾಸಕಿ ವನಜಾಕ್ಷಮ್ಮ ಆರೋಪಿಸಿದರು.

‘ಜಮೀನಿಗೆ ಸಂಬಂಧವಿಲ್ಲದ ವ್ಯಕ್ತಿಗಳಿಂದ ಎಂ.ಪಿ. ರೇಣುಕಾಚಾರ್ಯ ಕ್ರಯಕ್ಕೆ ಪಡೆದು ಅಕ್ರಮವಾಗಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಇ-ಸ್ವತ್ತು ತಂತ್ರಾಂಶದಡಿ ನಮ್ಮ ಹೆಸರಿನ ದಾಖಲೆ ನೀಡಿದ್ದರೂ ಕೂಡ ಮನೆ, ವಾಣಿಜ್ಯ ಮಳಿಗೆ ನಿರ್ಮಿಸುವ ಮೂಲಕ ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಳ್ಳುವವರೆಗೆ ನಮ್ಮ ಆಸ್ತಿಯಲ್ಲಿ ಯಾವುದೇ ಹಸ್ತಕ್ಷೇಪ ಮಾಡದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಜನಸಾಮಾನ್ಯರು ತಿಂಗಳು ಗಟ್ಟಲೆ ಕಚೇರಿಗೆ ಅಲೆದಾಡಿದರೂ ಪಹಣಿ ಸಿಗುವುದಿಲ್ಲ. ನಮ್ಮ ಕುಟುಂಬಕ್ಕೆ ಯಾವುದೇ ಸಂಬಂಧವಿಲ್ಲದವರಿಗೆ ಉಪ ವಿಭಾಗಾಧಿಕಾರಿ ಹಾಗೂ ತಹಶಿಲ್ದಾರ್ ಶಾಮೀಲಾಗಿ 5.8 ಎಕರೆ ಜಮೀನನ್ನು ಕೇವಲಒಂದೇ ವಾರದಲ್ಲಿ ಪಹಣಿ ಮಾಡಿಕೊಟ್ಟಿದ್ದಾರೆ. ನಮ್ಮ ಹೆಸರಿನಲ್ಲಿರುವ ಆಸ್ತಿ ದಾಖಲೆಗಳಲ್ಲಿ ಶಾಸಕರು ಮತ್ತು ಹೆಸರು ಸೇರಿಸಲಾಗಿದೆ. ಅಧಿಕಾರ ದುರ್ಬಳಕೆ ಇದು’ ‌ಎಂದು ದೂರಿದರು.

ADVERTISEMENT

ಕುಟುಂಬದ ಸದಸ್ಯೆ ದೊಡ್ಡ ಕೆಂಚಮ್ಮ ಮಾತನಾಡಿ, ‘ಯಾವುದೇ ಆಸ್ತಿಯನ್ನು ಮತ್ತೊಬ್ಬರಿಗೆ ನೋಂದಣಿ ಮಾಡುವಾಗ 13 ವರ್ಷದ ವಂಶವೃಕ್ಷ ಪರಿಗಣಿಸಬೇಕು. ಅದರೆ ಅಂತಹ ಯಾವುದೇ ದಾಖಲೆ ಇಲ್ಲದೇ, ನಿಜವಾದ ಆಸ್ತಿ ವಾರಸುದಾರರು ಬದುಕಿದ್ದರೂ ನಮ್ಮ ಒಪ್ಪಿಗೆ ಇಲ್ಲದೆ ಬೇರೆಯವರಿಂದ ಅಕ್ರಮವಾಗಿ ಆಸ್ತಿ ಪಡೆದಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಇಡೀ ಕುಟುಂಬ ವಿಷ ಕುಡಿಯುವ ಪರಿಸ್ಥಿತಿ ಬರುತ್ತದೆ. ಸಮಸ್ಯೆ ಪರಿಹರಿಸದಿದ್ದರೆ ತಹಶೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಈ ಕುಟುಂಬದ ಗೀತಾ, ಪ್ರತಿಭಾ, ಸುಭಾಷ್‌ಚಂದ್ರ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.