
ಸಾಸ್ವೆಹಳ್ಳಿ: ಸಮೀಪದ ಹೊಸಹಳ್ಳಿ ಎರಡನೇ ಕ್ಯಾಂಪ್‌ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಹೊಲಕ್ಕೆ ನೀರು ಹರಿಸಲು ರಸ್ತೆ ಮಧ್ಯೆಯೇ ಕಾಲುವೆ ತೋಡಿ, ಆ ಮಣ್ಣನ್ನು ರಸ್ತೆಗೆ ಏರಿ ರೂಪದಲ್ಲಿ ಹಾಕಿ ಸಂಚಾರ ಬಂದ್ ಮಾಡಿದ್ದಾರೆ. ಇದರಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರಸ್ತೆಯು ಲಿಂಗಾಪುರ ಗ್ರಾಮದ ತ್ಯಾಜ್ಯ ವಿಲೇವಾರಿ ಘಟಕ ಹಾಗೂ ಹೊಸಹಳ್ಳಿ ಎರಡನೇ ಕ್ಯಾಂಪ್‌ನ ಕುಡಿಯುವ ನೀರಿನ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಜನ ನಿತ್ಯ ಓಡಾಡುವ ರಸ್ತೆಯನ್ನು ಸ್ವಂತ ಹಿತಾಸಕ್ತಿಗಾಗಿ ಬಂದ್ ಮಾಡಿರುವುದು ವಿಪರ್ಯಾಸ ಎಂದು ಉಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಿವಾಸಿಗಳಾದ ಹರೀಶ್, ನಾಗರಾಜ್, ರಾಘವೇಂದ್ರ ಮತ್ತು ಗೋಪಾಲ್ ಅವರು, ಸಿಸಿ ರಸ್ತೆ ನಿರ್ಮಾಣವಾಗಿದ್ದರೂ ಕಾಲುವೆಯನ್ನು ಮುಚ್ಚದ ಕಾರಣ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ ಪೈಪ್ ಅಳವಡಸಿ ಅಥವಾ ಕಾಲುವೆ ಮುಚ್ಚಿ ಎಂದು ಒತ್ತಾಯಿಸಿದರು.
ಈ ಸಮಸ್ಯೆಯ ಕುರಿತು ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.