ADVERTISEMENT

ಜಗಳೂರು ಹಾಸ್ಟೆಲ್‌ | ಬಯೋಮೆಟ್ರಿಕ್ ನಕಲಿ, ಮಾಂಸಾಹಾರ ಇಲ್ಲ: ಆರೋಪ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 5:54 IST
Last Updated 1 ಸೆಪ್ಟೆಂಬರ್ 2025, 5:54 IST
ಜಗಳೂರಿನ ಸಮಾಜ ಕಲ್ಯಾಣ ಇಲಾಖೆಯ ಕಾಲೇಜು ಹಾಸ್ಟೆಲ್‌ಗೆ ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು
ಜಗಳೂರಿನ ಸಮಾಜ ಕಲ್ಯಾಣ ಇಲಾಖೆಯ ಕಾಲೇಜು ಹಾಸ್ಟೆಲ್‌ಗೆ ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಜಗಳೂರು: ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳು ಅವ್ಯವಸ್ಥೆಯ ಆಗರವಾಗಿವೆ ಎಂಬ ದೂರಿನ ಮೇರೆಗೆ ಪಟ್ಟಣದ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ಹಾಸ್ಟೆಲ್‌ಗಳಿಗೆ ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಮಾಜಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ಕೊಡುತ್ತಿಲ್ಲ. ನೈರ್ಮಲ್ಯ ಕಾಪಾಡುತ್ತಿಲ್ಲ. ಮೇಲಧಿಕಾರಿಗಳು ಸೂಕ್ತ ನಿಗಾ ವಹಿಸದ್ದರಿಂದ ಅವ್ಯವಸ್ಥೆಯ ಆಗರವಾಗಿದೆ ಎಂಬ ದೂರುಗಳು ಬಂದಿದ್ದವು. ದೂರಿನ ಆಧಾರದ ಮೇಲೆ, ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್.ಪಿ. ಶ್ರೀಧರ್ ನಿರ್ದೇಶನದ ಮೇರೆಗೆ ಸಿಪಿಐ ಎಂ.ವಿ.ಮೇಘರಾಜ್ ನೇತೃತ್ವದಲ್ಲಿ ಪಿಎಸ್‌ಐ ಸಂಜೀವ್‌ ಕುಮಾ‌ರ್ ಹಾಗೂ ಸಿಬ್ಬಂದಿ ಒಳಗೊಂಡ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. 

ವಿದ್ಯಾರ್ಥಿಗಳ ನಕಲಿ ಬಯೋಮೆಟ್ರಿಕ್ ತೋರಿಸಿರುವುದು, ಬಿಲ್ ದಾಸ್ತಾನು ಪುಸ್ತಕ ಹಾಗೂ ದೈನಂದಿನ ಡೈರಿ ಮುಂತಾದ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದು, ಮಾರ್ಚ್‌ನಿಂದ ಈವರೆಗೆ ಸ್ಟಾಕ್‌ಬುಕ್ ನಿರ್ವಹಣೆ ಮಾಡದಿರುವುದು, ಫುಡ್‌ಚಾರ್ಟ್‌ಗೆ ಆನ್‌ಲೈನ್ ಫೋಟೊ ಅಪ್‌ಲೋಡ್ ಮಾಡಿರುವುದು, ವಿದ್ಯಾರ್ಥಿಗಳಿಗೆ ಯಾವುದೇ ಕ್ರೀಡಾ ಸಾಮಗ್ರಿ ನೀಡದಿರುವುದು ಸೇರಿದಂತೆ ಹಲವಾರು ಲೋಪಗಳು ಪರಿಶೀಲನೆ ವೇಳೆ ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ವಾರ್ಡನ್ ಉಮೇಶ್ ಹಾಗೂ ರುಬಿಯಾ ಬಾನು ಅವರನ್ನು ಪ್ರಶ್ನಿಸಲಾಯಿತು. ಎಲ್ಲ ದಾಖಲೆಗಳೊಂದಿಗೆ ದಾವಣಗೆರೆಯ ಕಚೇರಿಗೆ ಆಗಮಿಸುವಂತೆ ಸೂಚಿಸಿ ಅಧಿಕಾರಿಗಳು ತೆರಳಿದರು.

ADVERTISEMENT

ಚಿತ್ರಾನ್ನ ಪುಳಿಯೋಗರೆಗೆ ‘ಮೆನು’ ಸೀಮಿತ

‘ಮೆನು ಪ್ರಕಾರ ಯಾವುದೇ ಅಡುಗೆ ಮಾಡುವುದಿಲ್ಲ. ಪ್ರತಿನಿತ್ಯ ಚಿತ್ರಾನ್ನ ಪುಳಿಯೋಗರೆ ಮಾಡುತ್ತಾರೆ. ಸರಿಯಾಗಿ ತರಕಾರಿ ಮೊಟ್ಟೆ ಮಾಂಸಹಾರ ಕೊಡುವುದಿಲ್ಲ. ನಾಲ್ಕು ತಿಂಗಳಿನಿಂದ ಯಾವುದೇ ಕಿಟ್ ನೀಡಿಲ್ಲ. ಸೌಲಭ್ಯ ಕೇಳಿದರೆ ಹಸ್ಟೆಲ್‌ನಿಂದ ಹೊರಹಾಕುವುದಾಗಿ ಬೆದರಿಕೆ ಹಾಕುತ್ತಾರೆ. ಸಮಾಜಕಲ್ಯಾಣ ಇಲಾಖೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ನಿಯಮಿತವಾಗಿ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಿಲ್ಲ’  ಎಂದು ವಿದ್ಯಾರ್ಥಿನಿಯರು ದೂರು ಸಲ್ಲಿಸಿದರು.

‘ಧೈರ್ಯವಾಗಿ ದೂರು ನೀಡಿ’

‘ಹಾಸ್ಟೆಲ್‌ನಲ್ಲಿ ಸಮಸ್ಯೆಗಳಿದ್ದರೆ ಧೈರ್ಯವಾಗಿ ಮೇಲಧಿಕಾರಿಗಳಿಗೆ ತಿಳಿಸುವ ಕೆಲಸ ಮಾಡಿ. ಸರ್ಕಾರವು ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಯಾವುದೇ ತೊಂದರೆ ಗಮನಕ್ಕೆ ಬಂದ ಕೂಡಲೇ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸ್ಥಳೀಯ ಪೊಲೀಸ್ ಠಾಣೆಗೂ ದೂರು ಸಲ್ಲಿಸಬಹುದು’ ಎಂದು ವಿದ್ಯಾರ್ಥಿನಿಯರಿಗೆ ಅಧಿಕಾರಿಗಳು ಕಿವಿಮಾತು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.