ADVERTISEMENT

ಮನೆ ಕಳವು: ಇಬ್ಬರು ಆರೋಪಿಗಳ ಸೆರೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 14:41 IST
Last Updated 22 ಜನವರಿ 2020, 14:41 IST
ಸತೀಶಗೌಡ
ಸತೀಶಗೌಡ   

ಹರಪನಹಳ್ಳಿ: ರಾಜ್ಯದ ವಿವಿಧೆಡೆ ಮತ್ತು ಆಂಧ್ರಪ್ರದೇಶದಲ್ಲಿ ಬೀಗ ಹಾಕಿರುವ ಮನೆಗಳನ್ನು ಹುಡುಕಿ ರಾತ್ರಿ ಹೊತ್ತಿಗೆ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಹರಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಒಟ್ಟು ₹ 7 ಲಕ್ಷ ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕು ಮರಿಯಮ್ಮನಹಳ್ಳಿ ಗ್ರಾಮದ ಸಂತೇಮಾರುಕಟ್ಟೆ ಸತೀಶಗೌಡ ಅಲಿಯಾಸ್‌ ಸತೀಶ (25) ಹಾಗೂ ಬಳ್ಳಾರಿ ನಗರದ ಗುಗ್ಗರಹಟ್ಟಿ ನಿವಾಸಿ ಲೋಕೇಶ ಅಲಿಯಾಸ್‌ ಲೋಕಿ (23) ಬಂಧಿತರು. ಬಳ್ಳಾರಿ ನಗರದ ಕೋಟೆ ನಿವಾಸಿ ರಾಕೇಸ್‌ ಅಲಿಯಾಸ್‌ ರಾಖಿ (23) ತಪ್ಪಿಸಿಕೊಂಡಿದ್ದಾನೆ.

ಪೂಜಾರಿ ಕೆಲಸ ಮಾಡುವ ಸತೀಶ, ಲಾರಿ ಚಾಲಕ ಲೋಕೇಶ ಕೊಟ್ಟೂರು ಕಡೆಯಿಂದ ಹರಪನಹಳ್ಳಿ ಕಡೆಗೆ ಮಂಗಳವಾರ ಬರುತ್ತಿದ್ದಾಗ ಸ್ಥಳೀಯರ ಸಹಕಾರದಿಂದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅವರನ್ನು ವಿಚಾರಿಸಿದಾಗ ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ವಿಡುಪನಕಲ್ ಠಾಣೆ ವ್ಯಾಪ್ತಿಯಲ್ಲಿ 1, ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 1, ದಾವಣಗೆರೆ ಜಿಲ್ಲೆಯ ಹರಿಹರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಪ್ರಕರಣಗಳು, ಆಜಾದ್ ನಗರ ಠಾಣೆ ವ್ಯಾಪ್ತಿಯಲ್ಲಿ 1 ಹಾಗೂ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು. ಹೀಗೆ ಒಟ್ಟು ಎಂಟು ಕಡೆ ಕಳವು ಮಾಡಿರುವುದನ್ನು ಬಾಯಿ ಬಿಟ್ಟಿದ್ದಾರೆ.

ADVERTISEMENT

ಆರೋಪಿಗಳಿಂದ ಬಂಗಾರ, ಬೆಳ್ಳಿ, ಒಂದು ವಾಹನ, ಇತರೆ ವಸ್ತುಗಳ‌ನ್ನು ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ‍ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಎಎಸ್‌ಪಿ ರಾಜೀವ್‌ ಎಂ. ನಿರ್ದೇಶನದಂತೆ ಹರಪನಹಳ್ಳಿ ಡಿವೈಎಸ್‌ಪಿ ಮಲ್ಲೇಶ್‌ ದೊಡ್ಡಮನಿ, ಸರ್ಕಲ್‌ ಇನ್‌ಸ್ಪೆಕ್ಟರ್‌ ಕುಮಾರ್ ಕೆ, ಎಸ್‌ಐಗಳಾದ ಶ್ರೀಧರ್ ಕೆ, ಲತಾ ವಿ.ತಾಳೇಕರ ಮತ್ತು ಸಿಬ್ಬಂದಿಯ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ತಂಡಕ್ಕೆ ಎಸ್‌ಪಿ ನಗದು ಬಹುಮಾನ ಘೋಷಿಸಿದ್ದಾರೆ.

ಅಲ್ಲದೇ ಪೊಲೀಸರಿಗೆ ಸಹಕಾರ ನೀಡಿದ ಹರಪನಹಳ್ಳೀಯ ಟ್ರ್ಯಾಕ್ಟರ್‌ ಮೆಕ್ಯಾನಿಕ್‌ ಕೆ. ಚಾಂದಬಾಷ, ವ್ಯಾಪಾರಿ ರಫೀಕ್‌ ಅವರಿಗೆ ಪ್ರಶಂಸನಾ ಪತ್ರ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.