ಬಸವಾಪಟ್ಟಣ: ಇಲ್ಲಿನ ಗ್ರಾಮ ಪಂಚಾಯಿತಿ ಸಿಬ್ಬಂದಿಯು ಒಂದು ವಾರದಿಂದ ಮನೆ ಮತ್ತು ಖಾಲಿ ನಿವೇಶನಗಳ ಕಂದಾಯ ಸಂಗ್ರಹ ಆಂದೋಲನವನ್ನು ನಡೆಸುತ್ತಿದ್ದಾರೆ.
‘ಬಸವಾಪಟ್ಟಣದಲ್ಲಿ 2,485 ಮನೆಗಳು ಹಾಗೂ 100 ಕ್ಕೂ ಹೆಚ್ಚು ಖಾಲಿ ನಿವೇಶನಗಳಿದ್ದು, ಮನೆ ಮನೆಗೆ ಹೋಗಿ ಕಂದಾಯ ಸಂಗ್ರಹಿಸುತ್ತಿದ್ದೇವೆ. ವಾರದಲ್ಲಿ ₹6 ಲಕ್ಷ ಕಂದಾಯ ಸಂಗ್ರಹಿಸಿದ್ದೇವೆ. ಗ್ರಾಮಸ್ಥರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಹಮದ್ ಹಬೀಬುಲ್ಲಾ ಹೇಳಿದರು.
ಆಂದೋಲನದಲ್ಲಿ ಭಾಗವಹಿಸಿದ್ದ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಯಶವಂತಕುಮಾರ್ ಮಾತನಾಡಿ, ಚನ್ನಗಿರಿ ತಾಲ್ಲೂಕಿನಲ್ಲಿ ವಾರ್ಷಿಕ ₹12 ಕೋಟಿ ಮನೆ ಮತ್ತು ನಿವೇಶನ ಕಂದಾಯ ಸಂಗ್ರಹದ ಗುರಿ ಇದ್ದು, ಈವರೆಗೆ ₹2.5 ಕೋಟಿ ಸಂಗ್ರಹವಾಗಿದೆ.
ಸಾರ್ವಜನಿಕರು ನಿಗದಿತ ಸಮಯಕ್ಕೆ ತಮ್ಮ ಸ್ವತ್ತಿನ ಕಂದಾಯವನ್ನು ಪಾವತಿ ಮಾಡಿದರೆ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.