ADVERTISEMENT

ವಸತಿ ಯೋಜನೆ ಅನುದಾನ ಹಿಂದಿರುಗಬಾರದು: ಡಾ.ಪ್ರಭಾ ಮಲ್ಲಿಕಾರ್ಜುನ್‌ ಸೂಚನೆ

‘ದಿಶಾ’ ಸಭೆಯಲ್ಲಿ ಅಧಿಕಾರಿಗಳಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಮೇ 2025, 16:05 IST
Last Updated 17 ಮೇ 2025, 16:05 IST
ಪ್ರಭಾ ಮಲ್ಲಿಕಾರ್ಜುನ್‌
ಪ್ರಭಾ ಮಲ್ಲಿಕಾರ್ಜುನ್‌   

ದಾವಣಗೆರೆ: ಜನರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ರೂಪಿಸಿದ ವಸತಿ ಯೋಜನೆಯ ಅನುದಾನ ಸದ್ಬಳಕೆಯಾಗಬೇಕು. ಆರ್ಥಿಕ ಸಾಮರ್ಥ್ಯ ಹೊಂದಿದ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ವಸತಿ ಸೌಲಭ್ಯಕ್ಕೆ ಸರ್ಕಾರ ಬಿಡುಗಡೆಗೊಳಿಸಿದ ಅನುದಾನ ಮರಳಿ ಹೋಗದಂತೆ ಎಚ್ಚರವಹಿಸಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಸೂಚನೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ (ದಿಶಾ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಸೂರು ನಿರ್ಮಿಸಿಕೊಳ್ಳುವ ತವಕದಲ್ಲಿ ಜನರಿದ್ದಾರೆ. ವಸತಿ ಸೌಲಭ್ಯಕ್ಕೆ ಸಾಕಷ್ಟು ಬೇಡಿಕೆ ಇದೆ. ಆದರೆ, ಕೇಂದ್ರ ಸರ್ಕಾರ ಒದಗಿಸುತ್ತಿರುವ ಅನುದಾನದಲ್ಲಿ ಮನೆ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಿವೇಶನ ಹೊಂದಿದ, ಆರ್ಥಿಕ ಸಾಮರ್ಥ್ಯ ಇರುವ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಈ ಪ್ರಕ್ರಿಯೆ ಪಾರದರ್ಶಕವಾಗಿರಬೇಕು’ ಎಂದು ತಾಕೀತು ಮಾಡಿದರು.

ADVERTISEMENT

‘ವಸತಿ ಬೇಡಿಕೆ ಸಮೀಕ್ಷೆಯ ಪಟ್ಟಿ ಇಟ್ಟುಕೊಂಡು ಮನಬಂದಂತೆ ಫಲಾನುಭವಿಗಳನ್ನು ಆಯ್ಕೆ ಮಾಡಿದ ಪರಿಣಾಮವಾಗಿ ಯೋಜನೆ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ಯಾವ ನಿಗಮದ ವಸತಿ ಯೋಜನೆಗೆ ಫಲಾನುಭವಿ ಅರ್ಹ ಎಂಬುದನ್ನು ಮೊದಲು ಗುರುತಿಸಿ. ಮಂಜೂರಾಗಿರುವ ಮನೆಗಳನ್ನು ಕಟ್ಟಿಕೊಳ್ಳುವಂತೆ ಫಲಾನುಭವಿಗಳ ಮನವೊಲಿಸಿ’ ಎಂದು ಹೇಳಿದರು.

‘ಶಾಲೆ ಮೇಲೆ ನಿಗಾ ಅಗತ್ಯ’:

‘ಹೊನ್ನಾಳಿ ತಾಲ್ಲೂಕಿನ ಬನ್ನಿಕೋಡ ಗ್ರಾಮದ ಅನುದಾನಿತ ಶಾಲೆಗೆ ಈಚೆಗೆ ಭೇಟಿ ನೀಡಿದ್ದೆ. ಶಿಕ್ಷಣ ಸಂಸ್ಥೆಯೊಂದು ಹೊಂದಿರಬೇಕಾದ ಕನಿಷ್ಠ ಸೌಲಭ್ಯಗಳು ಇಲ್ಲಿಲ್ಲ. ಈ ಶಾಲೆಯ ಶಿಕ್ಷಣದ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿವೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಳಪೆ ಸಾಧನೆ ತೋರಿದ ಅನುದಾನಿತ ಶಿಕ್ಷಣ ಸಂಸ್ಥೆ ಹಾಗೂ ‘ಶೂನ್ಯ’ ಫಲಿತಾಂಶ ಪಡೆದ ಶಾಲೆಗಳ ಮೇಲೆ ನಿಗಾ ಇಡಬೇಕು’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಸೂಚಿಸಿದರು.

‘ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಸಾಕಷ್ಟು ಶ್ರಮಿಸಲಾಗಿದೆ. ತರಗತಿಗೆ ಗೈರು ಹಾಜರಾಗುವ ವಿದ್ಯಾರ್ಥಿಗಳ ಮೇಲೆ ಇನ್ನಷ್ಟು ನಿಗಾ ಇಡುವ ಅಗತ್ಯವಿತ್ತು. ಅನುತ್ತೀರ್ಣ ಆಗುವ ಸಾಧ್ಯತೆ ಇರುವ ವಿದ್ಯಾರ್ಥಿಗಳ ಮೇಲೆ ಗಮನ ಕೇಂದ್ರೀಕರಿಸಬೇಕಿತ್ತು. ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ 8ನೇ ತರಗತಿಯಿಂದಲೇ ಪ್ರಯತ್ನಿಸಬೇಕಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್‌ ಇಟ್ನಾಳ್‌ ಸಭೆಗೆ ಮಾಹಿತಿ ನೀಡಿದರು.

ಶೇ 80ರಷ್ಟು ವಾಹನಕ್ಕೆ ಜಿಪಿಎಸ್‌

ಸ್ವಚ್ಛ ಭಾರತ್‌ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಮನೆ–ಮನೆ ಕಸ ಸಂಗ್ರಹಿಸುವ ಶೇ 80ರಷ್ಟು ವಾಹನಗಳಿಗೆ ಜಿಪಿಎಸ್‌ ಸಾಧನ ಅಳವಡಿಸಿ ಕಣ್ಗಾವಲು ವ್ಯವಸ್ಥೆ ರೂಪಿಸಲಾಗಿದೆ. ಈ ಕುರಿತು ‘ಪ್ರಜಾವಾಣಿ’ ಪ್ರಕಟಿಸಿದ್ದ ‘ಸಾಕಾರಗೊಳ್ಳದ ಸ್ವಚ್ಛ ಭಾರತ್‌’ ವರದಿ ಸಭೆಯಲ್ಲಿ ಪ್ರಸ್ತಾಪವಾಯಿತು.

‘ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛ ಭಾರತ್‌ ಯೋಜನೆಯಡಿ ಕಸ ಸಂಗ್ರಹ ಕಾರ್ಯ ಚುರುಕುಗೊಳಿಸಲಾಗಿದೆ. ಕಸದ ವಾಹನದ ಮೇಲೆ ನಿಗಾ ಇಡಲು ಜಿಪಿಎಸ್‌ ಸಾಧನ ಅಳವಡಿಸಲಾಗಿದೆ. ಕಸ ಸಂಗ್ರಹ ಹಾಗೂ ನಿರ್ವಹಣೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್‌ ಇಟ್ನಾಳ್‌ ಸಭೆಗೆ ಮಾಹಿತಿ ನೀಡಿದರು.

ಎಂಆರ್‌ಐ ಸ್ಕ್ಯಾನಿಂಗ್‌ಗೆ ಏಕರೂಪ ದರ

ಎಂಆರ್‌ಐ ಸ್ಕ್ಯಾನಿಂಗ್‌ಗೆ ಏಕರೂಪ ದರ ನಿಗದಿಪಡಿಸಲಾಗುವುದು. ಹೆಚ್ಚುವರಿ ದರ ಪಡೆಯುವ ಆಸ್ಪತ್ರೆ, ಸ್ಕ್ಯಾನಿಂಗ್‌ ಕೇಂದ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ ಸೌಲಭ್ಯ ಇನ್ನೂ ಸಿಗದಿರುವ ಬಗ್ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಬಾಪೂಜಿ ವೈದ್ಯಕೀಯ ಕಾಲೇಜು ಅಥವಾ ಈ ಸೌಲಭ್ಯ ಇರುವ ಆಸ್ಪತ್ರೆಗಳ ನೆರವು ಪಡೆಯುವಂತೆ ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಎಂಆರ್‌ಐ ಸ್ಕ್ಯಾನಿಂಗ್‌ಗೆ ಬಡವರಿಗೆ ತೊಂದರೆ ಆಗದ ರೀತಿಯಲ್ಲಿ ದರ ನಿಗದಿಪಡಿಸಲಾಗುತ್ತದೆ’ ಎಂದರು.

ಭಣಗುಡುವ ಮಳಿಗೆ ಬಗ್ಗೆ ಅಸಮಾಧಾನ

‘ಖಾಸಗಿ ಬಸ್‌ ನಿಲ್ದಾಣದ ಮೊದಲ ಮತ್ತು ಎರಡನೇ ಮಹಡಿಯಲ್ಲಿ ನಿರ್ಮಿಸಿದ ಮಳಿಗೆಗಳಿಗೆ ಗ್ರಾಹಕರು ಬರುತ್ತಿಲ್ಲ ಎಂಬ ಆರೋಪವಿದೆ. ಕೆಲವು ಖಾಲಿ ಉಳಿದಿರುವ ಬಗ್ಗೆ ದೂರುಗಳು ಬಂದಿವೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಕಲ್ಪಿಸಿದ ಮೂಲಸೌಲಭ್ಯ ಜನರಿಗೆ ಉಪಯೋಗವಾಗದಿದ್ದರೆ ಹೇಗೆ’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಪ್ರಶ್ನಿಸಿದರು.

‘ಖಾಸಗಿ ಬಸ್‌ ನಿಲ್ದಾಣದಲ್ಲಿ 67 ಮಳಿಗೆಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. 20 ಮಳಿಗೆಗಳನ್ನು ಬಾಡಿಗೆ ಪಡೆಯಲು ಯಾರೊಬ್ಬರು ಆಸಕ್ತಿ ತೋರಿಲ್ಲ. ಮಳಿಗೆಗಳ ಬಾಡಿಗೆ ಕಡಿಮೆ ಮಾಡಿ ಮರು ಟೆಂಡರ್‌ ಕರೆಯಲಾಗುವುದು’ ಎಂದು ಅಧಿಕಾರಿಯೊಬ್ಬರು ಸಭೆಗೆ ಮಾಹಿತಿ ನೀಡಿದರು.

‘ಬೀದಿ ಬದಿ ವ್ಯಾಪಾರಸ್ಥರು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರಿಗೆ ಈ ಮಳಿಗೆಗಳನ್ನು ನೀಡುವ ವ್ಯವಸ್ಥೆ ಆಗಬೇಕು’ ಎಂದು ಡಾ.ಪ್ರಭಾ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.