ADVERTISEMENT

ಮುಂದುವರಿದ ದೇಶದಲ್ಲೇ ಮಾನವ ಹಕ್ಕು ಉಲ್ಲಂಘನೆ ಅಧಿಕ

ಒರಿಸ್ಸಾ ಕೇಂದ್ರೀಯ ವಿಶ್ವವಿದ್ಯಾನಿಲಯ ಕುಲಪತಿ ಡಾ.ಪಿ.ವಿ.ಕೃಷ್ಣಭಟ್

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 14:08 IST
Last Updated 13 ಡಿಸೆಂಬರ್ 2018, 14:08 IST
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಮಾನವ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರಾಮರ್ಶೆ’ ಸಂವಾದ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು ಉದ್ಘಾಟಿಸಲಾಯಿತು
ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಮಾನವ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರಾಮರ್ಶೆ’ ಸಂವಾದ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು ಉದ್ಘಾಟಿಸಲಾಯಿತು   

ದಾವಣಗೆರೆ: ಅಭಿವೃದ್ಧಿ ಹೊಂದಿದ ದೇಶಗಳೇ ಇಂದು ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ಮುಂಚೂಣಿಯಲ್ಲಿವೆ ಎಂದು ಒರಿಸ್ಸಾ ಕೇಂದ್ರೀಯ ವಿಶ್ವವಿದ್ಯಾನಿಲಯ ಕುಲಪತಿ ಡಾ.ಪಿ.ವಿ.ಕೃಷ್ಣಭಟ್ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಮಾನವ ಹಕ್ಕುಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪರಾಮರ್ಶೆ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನಲ್ಲಿ ಮಾನವ ಹಕ್ಕುಗಳ ರಕ್ಷಣೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಆದರೆ, ಈ ರೀತಿ ಕಾಳಜಿ ವ್ಯಕ್ತಪಡಿಸುವ ಅಭಿವೃದ್ಧಿ ಹೊಂದಿದ ದೇಶಗಳೇ ಉಲ್ಲಂಘನೆಯಲ್ಲಿಯೂ ಮೊದಲ ಸ್ಥಾನದಲ್ಲಿವೆ. ಪ್ರಕೃತಿಯನ್ನು ಇನ್ನಿಲ್ಲದಂತೆ ಬರಿದಾಗಿಸುವ ಪ್ರಯತ್ನ ಆಗುತ್ತಿದೆ. ಮಾನವರ ಮೇಲೆ ಮಾತ್ರವಲ್ಲದೇ ಪರಿಸರದ ಮೇಲೆ ನಡೆಯುತ್ತಿರುವ ನಿರಂತರ ಆಕ್ರಮಣಗಳು ಪ್ರಕೃತಿಯ ಹಕ್ಕುಗಳ ಉಲ್ಲಂಘನೆಗೂ ಕಾರಣವಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ADVERTISEMENT

ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಮಾನವನ ಹಕ್ಕುಗಳ ಜೊತೆಗೆ ಪ್ರಕೃತಿಯ ಸಂರಕ್ಷಣೆಯ ಹಕ್ಕುಗಳು ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು. ಪ್ರಕೃತಿ ಆರಾಧಿಸುವ ಗುಣವನ್ನು ಪ್ರಪಂಚಕ್ಕೆ ತೋರಿಸಿಕೊಟ್ಟ ಕೀರ್ತಿ ಭಾರತದ ‌ಸಂಸ್ಕೃತಿಗೆ ಸಲ್ಲುತ್ತದೆ. ಭಾರತದಲ್ಲಿ ಮಾನವ ಹಕ್ಕುಗಳ ಜತೆಗೆ ಎಲ್ಲ ಜೀವಿಗಳ ಹಕ್ಕನ್ನು ಸಂರಕ್ಷಿಸುವಂತಹ ಸಂಸ್ಕ್ರತಿ ಬೆಳೆದು ಬಂದಿದೆ ಎಂದು ತಿಳಿಸಿದರು.

ವಿಶ್ಲೇಷಕರಾದ ಡಾ. ಸುಧಾಕರ್ ಹೊಸಳ್ಳಿ, ‘ಮಾನವ ಹಕ್ಕುಗಳ ಬಗೆಗಿನ ಪರಿಕಲ್ಪನೆ ಹಾಗೂ ಆಳವಾದ ಮಾಹಿತಿ ಕೊರತೆ ಇಂದು ಯುವಜನರಲ್ಲಿ ಕಾಡುತ್ತಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ಅಶಕ್ತರನ್ನು ಶಕ್ತರನ್ನಾಗಿ ಮಾಡಲು ರೂಪಿಸಿದ ಕಾನೂನುಗಳು ಇಂದು ದುರ್ಬಳಕೆ ಆಗುತ್ತಿವೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಪ್ರಯತ್ನವಾಗಬೇಕು. ಭಾರತದ ಸಂವಿಧಾನದಲ್ಲಿನ ಅನೇಕ ಆಶಯಗಳನ್ನು ಇಂದು ಇತರೆ ದೇಶಗಳು ಬಳಸಿಕೊಳ್ಳುತ್ತಿವೆ. ಅಂತಹ ಉತ್ತಮ ಸಂವಿಧಾನದಲ್ಲಿ ನೀಡಲಾಗಿರುವ ಮಾನವೀಯ ಮೌಲ್ಯಗಳ ಬಗ್ಗೆ ತಿಳಿದುಕೊಳ್ಳಲು ಯುವಜನರು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿ. ಹಲಸೆ, ‘ಮಾನವೀಯತೆ ಹಾಗೂ ಮಾನವೀಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು. ಮಾನವ ತನ್ನ ವರ್ತನೆ ಹೇಗಿರಬೇಕು ಎಂಬುದನ್ನು ಅರಿತು ನಡೆದರೆ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ. ಭಾರತದ ಸಂವಿಧಾನವೇ ಒಂದು ರೀತಿಯ ದಿಕ್ಸೂಚಿ ಇದ್ದಂತೆ. ಸಂವಿಧಾನವನ್ನು ಸಮರ್ಪಕವಾಗಿ ಅಧ್ಯಯನ ಮಾಡುವ ಮೂಲಕ ಯುವಜನತೆ ಸಮಾಜದಲ್ಲಿ ಮಾನವ ಹಕ್ಕುಗಳ ಮಹತ್ವವನ್ನು ಅರಿಯಲು ಪ್ರಯತ್ನಿಸಬೇಕು’ ಎಂದು ಕಿವಿಮಾತು ಹೇಳಿದರು.

ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಪಿ. ಕಣ್ಣನ್, ಪರೀಕ್ಷಾಂಗ ಕುಲಸಚಿವ ಪ್ರೊ. ಬಸವರಾಜ್ ಬಣಕಾರ್, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಂಯೋಜನಾಧಿಕಾರಿ ಪ್ರೊ.ಕೆ.ಬಿ. ರಂಗಪ್ಪ ಮತ್ತು ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಬಿ.ಎಸ್. ಪ್ರದೀಪ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.