ADVERTISEMENT

ದಾವಣಗೆರೆ ಪಾಲಿಕೆ | ಗದ್ದುಗೆ ಏರಲು ಕಾಂಗ್ರೆಸ್‌ಗೆ ಒಂದೇ ಮೆಟ್ಟಿಲು ಬಾಕಿ

ದಾವಣಗೆರೆ ಪಾಲಿಕೆ ಫಲಿತಾಂಶ ಅತಂತ್ರ: ಪಕ್ಷೇತರರೇ ನಿರ್ಣಾಯಕರು

ವಿನಾಯಕ ಭಟ್ಟ‌
Published 15 ನವೆಂಬರ್ 2019, 6:25 IST
Last Updated 15 ನವೆಂಬರ್ 2019, 6:25 IST
ದಾವಣಗೆರೆಯ ಮಹಾನಗರ ಪಾಲಿಕೆ ಕಚೇರಿಯ ಹೊರ ನೋಟ.
ದಾವಣಗೆರೆಯ ಮಹಾನಗರ ಪಾಲಿಕೆ ಕಚೇರಿಯ ಹೊರ ನೋಟ.   

ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಮತದಾರರು ಯಾವುದೇ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿಲ್ಲ. ಒಟ್ಟು 45 ವಾರ್ಡ್‌ಗಳ ಪೈಕಿ 22 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಬಿಜೆಪಿ17 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್‌ ಆಯ್ಕೆಯಲ್ಲಿ ಜೆಡಿಎಸ್‌ನ ಒಬ್ಬ ಅಭ್ಯರ್ಥಿ ಹಾಗೂ ಐವರು ಪಕ್ಷೇತರರೇ ಈಗ ‘ಕಿಂಗ್‌ ಮೇಕರ್‌’ ಆಗಲಿದ್ದಾರೆ.

ಕಳೆದ ಚುನಾವಣೆಯಲ್ಲಿ 41 ಸ್ಥಾನಗಳ ಪೈಕಿ 36 ಅನ್ನು ಗೆದ್ದುಕೊಂಡು ಅಧಿಕಾರ ನಡೆಸಿದ್ದ ಕಾಂಗ್ರೆಸ್‌, ಪಕ್ಷದ ನಾಯಕರ ಅಸಹಕಾರ, ಆಡಳಿತ ವಿರೋಧಿ ಅಲೆಗಳ ವಿರುದ್ಧ ಈಜಿ ದಡದ ಸಮೀಪ ಬಂದಿದೆ. ಇನ್ನೊಂದೆಡೆ ಕೇವಲ ಒಂದು ಸ್ಥಾನ ಪಡೆದಿದ್ದ ಬಿಜೆಪಿ, ‘ಫೀನಿಕ್ಸ್‌’ ಹಕ್ಕಿಂತೆ ಪುಟಿದೆದ್ದು 17 ಸ್ಥಾನಗಳನ್ನು ಗೆಲ್ಲುವ ಮೂಲಕ ಪಾಲಿಕೆಯ ಅಧಿಕಾರ ಹಿಡಿಯಲು ‘ಕಸರತ್ತು’ ಮಾಡುತ್ತಿದೆ.

ADVERTISEMENT

ಶಾಸಕ ಎಸ್.ಎ. ರವೀಂದ್ರನಾಥ ಅವರ ಪುತ್ರಿ ವೀಣಾ ನಂಜಣ್ಣ (ವಾರ್ಡ್‌ 40), ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಅವರ ಪುತ್ರ ರಾಕೇಶ್‌ ಜಾಧವ್‌ (ವಾರ್ಡ್‌ 10) ಅವರನ್ನು ಗೆಲ್ಲಿಸಿಕೊಂಡು ಬಂದ ಪಕ್ಷದ ನಾಯಕರು, ಬಿಜೆಪಿಯನ್ನು ಅಧಿಕಾರಕ್ಕೆ ತರುವಷ್ಟು ಅಭ್ಯರ್ಥಿಗಳನ್ನು ಗೆಲ್ಲಿಸುಕೊಂಡು ಬರುವಲ್ಲಿ ಯಶಸ್ವಿಯಾಗಲಿಲ್ಲ.

ಸಂಖ್ಯಾ ಬಲ: ಮೇಯರ್‌ ಚುನಾವಣೆ ಸಂದರ್ಭದಲ್ಲಿ 45 ಸದಸ್ಯರ ಜೊತೆಗೆ ನಗರದ ಇಬ್ಬರು ಶಾಸಕರು, ಒಬ್ಬ ಸಂಸದ, ಒಬ್ಬ ವಿಧಾನ ಪರಿಷತ್‌ ಸದಸ್ಯ ಸೇರಿ ಒಟ್ಟು 49 ಮತಗಳು ಇರಲಿವೆ. ಅಧಿಕಾರ ಹಿಡಿಯಲು 25 ಮತಗಳು ಅಗತ್ಯವಿದೆ. 22 ಸದಸ್ಯರು ಹಾಗೂ ಇಬ್ಬರು ಶಾಸಕರ ಮತ ಸೇರಿದರೆ ಕಾಂಗ್ರೆಸ್‌ನ ಸಂಖ್ಯಾಬಲ 24 ಆಗಲಿದೆ. 45ನೇ ವಾರ್ಡ್‌ನಲ್ಲಿ (ಎಸ್‌.ಜೆ.ಎಂ. ನಗರ, ಯರಗುಂಟೆ, ಕರೂರು) ತಮ್ಮದೇ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಪಕ್ಷೇತರ ಅಭ್ಯರ್ಥಿ ಉದಯಕುಮಾರ್‌ ಹಾಗೂ ವಾರ್ಡ್‌ 2ರಲ್ಲಿ (ಎಸ್‌.ಎಸ್‌.ಎಂ. ನಗರ, ಮುಸ್ತಫಾ ನಗರ) ಜೆಡಿಎಸ್‌ ಸದಸ್ಯೆ ನೂರ್‌ ಜಹಾನ್‌ ಬಿ. ಅವರ ಬೆಂಬಲ ಸಿಕ್ಕರೆ ಕಾಂಗ್ರೆಸ್‌ಗೆ ಮತ್ತೆ ಅಧಿಕಾರಕ್ಕೆ ಬರುವ ಹಾದಿ ಸುಗಮವಾಗಲಿದೆ.

ಒಬ್ಬ ಶಾಸಕ, ಒಬ್ಬ ಸಂಸದರ ಜೊತೆಗೆ 17 ಸದಸ್ಯರು ಸೇರಿದರೆ ಬಿಜೆಪಿಯ ಸಂಖ್ಯಾ ಬಲ 19ಕ್ಕೆ ಏರಲಿದೆ. ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ವಾರ್ಡ್‌ 32ನೇ ವಾರ್ಡ್‌ನಲ್ಲಿ (ನಿಟುವಳ್ಳಿ, ಚಿಕ್ಕನಹಳ್ಳಿ ಬಡಾವಣೆ) ಸ್ಪರ್ಧಿಸಿ ಗೆದ್ದ ಮಾಜಿ ಮೇಯರ್‌ ಉಮಾ ಪ್ರಕಾಶ್‌ ಹಾಗೂ 19ನೇ ವಾರ್ಡ್‌ನಲ್ಲಿ (ಮಂಡಿಪೇಟೆ) ಗೆದ್ದ ಇನ್ನೊಬ್ಬ ಪಕ್ಷೇತರ ಸದಸ್ಯ ಶಿವಪ್ರಕಾಶ್‌ ಆರ್‌.ಎಲ್‌. ಅವರು ಬಿಜೆಪಿ ಜೊತೆ ಗುರುತಿಸಿಕೊಳ್ಳುವ ಸಾಧ್ಯತೆ ಇದೆ. ‘ಮ್ಯಾಜಿಕ್‌ ನಂಬರ್‌’ 25 ತಲುಪಬೇಕಾದರೆ ಇನ್ನೂ ಮೂವರು ಪಕ್ಷೇತರರು ಹಾಗೂ ಜೆಡಿಎಸ್‌ ಅಭ್ಯರ್ಥಿಗಳನ್ನು ಸೆಳೆದುಕೊಳ್ಳಬೇಕಾದ ಸವಾಲು ಬಿಜೆಪಿಗೆ ಇದೆ. ಮೇಲ್ನೋಟಕ್ಕೆ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್‌ಗೆ ಹೆಚ್ಚಿನ ಅವಕಾಶ ಇದ್ದಂತೆ ಕಂಡುಬರುತ್ತಿದೆ.

ಚುನಾವಣಾ ಫಲಿತಾಂಶ ವಿವರ

ಕಾಂಗ್ರೆಸ್–22

ಬಿಜೆಪಿ–17

ಜೆಡಿಎಸ್‌–1

ಪಕ್ಷೇತರರು–5

ಒಟ್ಟು–45

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.