ADVERTISEMENT

ಅನುದಾನ ಬಳಕೆ ಮಾಡದಿದ್ದರೆ ಶಿಸ್ತುಕ್ರಮ: ಸಚಿವ ಬೈರತಿ ಬಸವರಾಜ ಎಚ್ಚರಿಕೆ

ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಬೈರತಿ ಬಸವರಾಜ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 14:20 IST
Last Updated 25 ನವೆಂಬರ್ 2020, 14:20 IST
ದಾವಣಗೆರೆ ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಮಾತನಾಡಿದರು.
ದಾವಣಗೆರೆ ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಮಾತನಾಡಿದರು.   

ದಾವಣಗೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಬಳಕೆ ಮಾಡದೇ ವಾಪಸ್‌ ಹೋದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ನಡೆದ 2ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ‘ಸರ್ಕಾರದ ಸೌಲಭ್ಯಗಳು ಜನರಿಗೆ ಸಮರ್ಪಕವಾಗಿ ತಲುಪಬೇಕು. ನಿಗದಿತ ಅವಧಿಯಲ್ಲಿ ಅನುದಾನಗಳನ್ನು ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎಲ್ಲಾ ಇಲಾಖೆಗಳಿಗೂ ಸುತ್ತೋಲೆ ಕಳುಹಿಸಬೇಕು’ ಎಂದು ಸೂಚಿಸಿದರು.

‘ಅಧಿಕಾರಿಗಳು ಮೈಮರೆತು ಕುಳಿತರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ವಸತಿ ನಿರ್ಮಾಣ, ರಸ್ತೆ, ಕುಡಿಯುವ ನೀರು, ಬೀದಿ ದೀಪ, ಕಸ ವಿಲೇವಾರಿ ಕೆಲಸಗಳಿಗೆ ಹೆಚ್ಚು ಒತ್ತು ನೀಡಬೇಕು. ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಶೀಘ್ರದ್ಲಲೇ ಚುನಾವಣೆ ಬರಲಿದೆ. ಆ ವೇಳೆ ನಾವು ಹಳ್ಳಿಗಳಿಗೆ ಹೋದರೆ ಜನ ನಮ್ಮನ್ನು ಪ್ರಶ್ನಿಸುತ್ತಾರೆ. ಹೀಗಾಗಿ ಅಧಿಕಾರಿಗಳು ಜವಾಬ್ದಾರಿ ಕೆಲಸ ಮಾಡಬೇಕು’ ಎಂದು ತಾಕೀತು ಮಾಡಿದರು.

ADVERTISEMENT

ಜಿಲ್ಲಾ ಆಸ್ಪತ್ರೆ ನವೀಕರಣ: ‘ಜಿಲ್ಲಾ ಆಸ್ಪತ್ರೆಯ ನವೀಕರಣಕ್ಕೆ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಈಗಿರುವ ಕಟ್ಟಡವನ್ನೇ ನವೀಕರಿಸಬೇಕಾ ಅಥವಾ ಹೊಸ ಕಟ್ಟಡ ನಿರ್ಮಿಸಬೇಕಾ ಎಂಬ ಬಗ್ಗೆ ಪರಿಶೀಲಿಸಿ ಡಿಪಿಆರ್‌ ಸಲ್ಲಿಸಬೇಕು’ ಎಂದು ಸಚಿವರು ಜಿಲ್ಲಾ ಸರ್ಜನ್‌ಗೆ ಸೂಚಿಸಿದರು.

ಶಾಸಕರಾದ ಮಾಡಾಳ್‌ ವಿರೂಪಾಕ್ಷಪ್ಪ ಹಾಗೂ ಪ್ರೊ. ಎನ್‌.ಲಿಂಗಣ್ಣ ಅವರು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ನರ್ಸ್‌ಗಳ ಕೊರತೆ ಇರುವ ಬಗ್ಗೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ನಾಗರಾಜ್‌, ‘ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 10 ವೈದ್ಯರ ಕೊರತೆ ಇತ್ತು. ಈಗಾಗಲೇ ಆರು ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಒಂದೆರಡು ದಿನಗಳಲ್ಲಿ ಕೆಲಸಕ್ಕೆ ಹಾಜರಾಗಲಿದ್ದಾರೆ’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಟು ತಿಂಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿರಲಿಲ್ಲ. ಈಗ ಶಸ್ತ್ರಚಿಕಿತ್ಸೆ ಆರಂಭಿಸಲು ಸಣ್ಣ–ಪುಟ್ಟ ದುರಸ್ತಿ ಕೆಲಸ ಕೈಗೊಳ್ಳಬೇಕಾಗಿದೆ. ಇದಕ್ಕಾಗಿ ₹ 42 ಲಕ್ಷ ಅನುದಾನ ಅಗತ್ಯವಿದ್ದು, ಆರೋಗ್ಯ ಇಲಾಖೆಯಿಂದ ಮಂಜೂರು ಮಾಡಿಸಬೇಕು’ ಎಂದು ಸಚಿವರಿಗೆ ಮನವಿ ಮಾಡಿದರು.

ಸಂಸದರ ಅಸಮಾಧಾನ: ಜಗಳೂರು ತಾಲ್ಲೂಕಿನ 174 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಎಂಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವುದಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಮಟ್ಟದಲ್ಲಿದೆ ಎಂದು ಉತ್ತರ ನೀಡಿದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ‘ಯೋಜನೆಯ ಬಗ್ಗೆ ಸಂಸದರಿಗೆ ವರದಿ ನೀಡಿ. ಸಂಬಂಧಪಟ್ಟ ಕೇಂದ್ರ ಸಚಿವರಿಂದ ಅವರು ಮಂಜೂರಾತಿ ಮಾಡಿಸಿಕೊಂಡು ಬರುತ್ತಾರೆ’ ಎಂದು ಹೇಳಿದರು.

ಮನೆ ಮನೆಗೆ ಗಂಗೆ: ‘ಜಲ ಜೀವನ್‌ ಮಿಷನ್‌’ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ಮನೆಗೂ ನಲ್ಲಿ ಸಂಪರ್ಕ ನೀಡಲು ಉದ್ದೇಶಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 370 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ 49 ಗ್ರಾಮಗಳಲ್ಲಿ ನಲ್ಲಿ ಸಂಪರ್ಕ ಕಲ್ಪಿಸಲು ಟೆಂಡರ್‌ ಕರೆಯಲಾಗಿದ್ದು, ಡಿಸೆಂಬರ್‌ ಅಂತ್ಯಕ್ಕೆ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಮಾಹಿತಿ ನೀಡಿದರು.

ಪಿಂಚಣಿ ಸಮಸ್ಯೆ ನಿವಾರಿಸಿ: ‘ಸಾಮಾಜಿಕ ಭದ್ರತಾ ಯೋಜನೆಯಡಿ ಎಲ್ಲಾ ಫಲಾನುಭವಿಗಳಿಗೂ ಸಕಾಲಕ್ಕೆ ಪಿಂಚಣಿ ಸಿಗಬೇಕು. ಹೀಗಾಗಿ ಪ್ರತಿ ತಾಲ್ಲೂಕು ಕಚೇರಿಯಲ್ಲೂ ಪಿಂಚಣಿ ಸಮಸ್ಯೆ ನಿವಾರಣೆಗೆ ಪ್ರತ್ಯೇಕ ಕೌಂಟರ್‌ ತೆರೆಯಬೇಕು. ಪ್ರತಿ ತಾಲ್ಲೂಕಿಗೂ ಜಿಲ್ಲಾಧಿಕಾರಿ ಒಂದು ದಿನ ತೆರಳಿ ಪಿಂಚಣಿ ಸಮಸ್ಯೆಗಳನ್ನು ಸ್ಥಳದಲ್ಲೇ ನಿವಾರಿಸಬೇಕು’ ಎಂದು ಬೈರತಿ ಬಸವರಾಜ ಸೂಚಿಸಿದರು.

ಭದ್ರಾ ಕಾಲುವೆಯ ಕೆಳಭಾಗಗಳಿಗೆ ನೀರು ತಲುಪಿಸಲು ಅಕ್ರಮ ಪಂಪ್‌ಸೆಟ್‌ ತೆರವುಗೊಳಿಸುವಂತೆ ಹೈಕೋರ್ಟ್‌ ನೀಡಿರುವ ಆದೇಶವನ್ನು ಪಾಲಿಸದೇ ಇರುವುದರಿಂದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ಎಚ್ಚರಿಕೆ ನೀಡಿರುವ ಬಗ್ಗೆ ಜಿಲ್ಲಾಧಿಕಾರಿ ಸಭೆಯ ಗಮನಕ್ಕೆ ತಂದರು. ‘ನೀರಾವರಿ, ಲೋಕೋಪಯೋಗಿ ಹಾಗೂ ಪೊಲೀಸ್‌ ಇಲಾಖೆ ಒಳಗೊಂಡ ತಂಡದೊಂದಿಗೆ ನಾವು ಕಾರ್ಯಾಚರಣೆ ಆರಂಭಿಸಿ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸುತ್ತಿದ್ದೇವೆ’ ಎಂದು ಬೆಸ್ಕಾಂ ಅಧಿಕಾರಿ ಮಾಹಿತಿ ನೀಡಿದರು.

‘392 ಕೊಠಡಿಗಳು ಮಳೆಯಿಂದ ಹಾಳಾಗಿವೆ. ಶಾಲೆಗಳಲ್ಲಿ 419 ಶೌಚಾಲಯಗಳನ್ನು ಮರು ನಿರ್ಮಾಣ ಮಾಡಬೇಕಾಗಿದೆ. ಇದಕ್ಕೆ ₹ 29 ಲಕ್ಷ ಅನುದಾನ ಅಗತ್ಯವಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ಹೇಳಿದರು. ‘ಸರ್ಕಾರದಿಂದ ಅನುದಾನಕ್ಕಾಗಿ ಕಾಯುವ ಬದಲು ಶಾಸಕರ ನಿಧಿಯಿಂದ ಅನುದಾನ ಪಡೆದು ಶಾಲೆ ಆರಂಭಗೊಳ್ಳುವ ಮೊದಲು ದುರಸ್ತಿ ಕೆಲಸ ಪೂರ್ಣಗೊಳಿಸಿ’ ಎಂದು ಸಚಿವರು ಸೂಚಿಸಿದರು.

ವಿವಿಧ ಇಲಾಖೆಗಳ ಪ್ರಗತಿಯ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಶಾಸಕ ಎಸ್‌.ಎ. ರವೀಂದ್ರನಾಥ, ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದೀಪಾ ಜಗದೀಶ್‌, ಉಪಾಧ್ಯಕ್ಷೆ ಸಾಕಮ್ಮ, ಪ್ರಭಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೀವ್‌, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಶೀಘ್ರವೇ ಮನೆ ಹಂಚಲು ಸೂಚನೆ

ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ಕೊಡಲು ವಿಳಂಬವಾಗುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾದರೆ ನೀತಿ ಸಂಹಿತೆ ಕಾರಣಕ್ಕೆ ಹಂಚಿಕೆ ಮಾಡಲು ಸಾಧ್ಯವಾಗುವುದಿಲ್ಲ. ಪಂಚಾಯಿತಿಗಳಿಗೆ ಆಯ್ಕೆಯಾಗಿರುವ ಬರುವ ನೂತನ ಸದಸ್ಯರು ಹಳೆಯ ಪಟ್ಟಿಯನ್ನು ಕೈಬಿಟ್ಟು ಹೊಸಬರಿಗೆ ಹಂಚಿಕೆ ಮಾಡುವಂತೆ ಬೇಡಿಕೆ ಇಡುತ್ತಾರೆ ಎಂದು ಮಾಡಾಳ್‌ ವಿರೂಪಾಕ್ಷಪ್ಪ ಹೇಳಿದರು.

ಇದೇ 30ರೊಳಗೆ ಆಶ್ರಯ ಕಮಿಟಿ ಸಭೆ ನಡೆಸಿ, ಚುನಾವಣೆ ಘೋಷಣೆಗೂ ಮೊದಲೇ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಸಚಿವರು ಸೂಚಿಸಿದರು.

ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಒಟ್ಟು 123 ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ. ಅದನ್ನು ಅಭಿವೃದ್ಧಿಗೊಳಿಸಲು ಅನುದಾನ ಕೋರಿ ಪ್ರಸ್ತಾವ ಸಲ್ಲಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆನಂದ್‌ ಮಾಹಿತಿ ನೀಡಿದರು.

ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಮನವಿ

ಜಿಲ್ಲೆಯಲ್ಲಿ ಹೆಚ್ಚು ಬೆಳೆಯುವ ಮೆಕ್ಕೆಜೋಳ ಹಾಗೂ ಭಕ್ತ ಖರೀದಿ ಕೇಂದ್ರಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಲಿಂಗಣ್ಣ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ‘ಮೆಕ್ಕೆಜೋಳ ಹಾಗೂ ಭತ್ತ ಖರೀದಿ ಕೇಂದ್ರವನ್ನು ತೆರೆಯುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಡಲಾಗಿದೆ. ಕ್ವಿಂಟಲ್‌ಗೆ ₹ 1865 ದರದಲ್ಲಿ ಭತ್ತ ಖರೀದಿ ಮಾಡಲು ಒಪ್ಪಿಗೆ ಸಿಕ್ಕಿದೆ. ನವೆಂಬರ್‌ 30ರಿಂದ ನೋಂದಣಿ ಕೆಲಸ ಆರಂಭಿಸಲಾಗುವುದು. ಮಾರ್ಚ್‌ ಅಂತ್ಯದವರೆಗೂ ಖರೀದಿಗೆ ಅವಕಾಶ ಇರಲಿದೆ’ ಎಂದು ಹೇಳಿದರು.

‘ಪಡಿತರದಲ್ಲಿ ಮೆಕ್ಕೆಜೋಳ ವಿತರಿಸದೇ ಇರುವುದರಿಂದ ಕೇಂದ್ರ ಸರ್ಕಾರವು ಖರೀದಿ ಕೇಂದ್ರ ತೆರೆಯಲು ಸಹಾಯಧನ ನೀಡುತ್ತಿಲ್ಲ. ಸರ್ಕಾರದ ಆದೇಶ ಬಂದರೆ ತೆರೆಯಲಾಗುವುದು’ ಎಂದರು.

ಅಮಾನತಿಗೆ ಸೂಚನೆ

ಅನುಮತಿ ಪಡೆಯದೇ ಪ್ರತಿ ಸಭೆಗೂ ಗೈರಾಗುತ್ತಿರುವ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ ನೋಟಿಸ್‌ ನೀಡಿ, ಸೇವೆಯಿಂದ ಅಮಾನತುಗೊಳಿಸಬೇಕು. ಸಭೆಗೆ ಗೈರಾಗಿರುವ ಉಳಿದ ಅಧಿಕಾರಿಗಳಿಗೂ ನೋಟಿಸ್‌ ನೀಡಬೇಕು ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು.

**

ಅಂಕಿ–ಅಂಶಗಳು

470 ಹೆಕ್ಟೇರ್‌ -ಅತಿವೃಷ್ಟಿಯಿಂದ ಹಾನಿಗೀಡಾದ ಕೃಷಿ ಬೆಳೆ

1974 ಹೆಕ್ಟೇರ್‌ - ಅತಿವೃಷ್ಟಿಯಿಂದ ಹಾನಿಗೀಡಾದ ತೋಟಗಾರಿಕೆ ಬೆಳೆ

847 ಮನೆಗಳು -ಮಳೆಯಿಂದಾಗಿ ಭಾಗಶಃ ಹಾನಿಯಾಗಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.