ADVERTISEMENT

ರೈತ ದಿವಾಳಿಯಾದರೆ ದೇಶ ದಿವಾಳಿ- ಡಾ.ಎಚ್.ಎನ್‌. ನಾಗಮೋಹನದಾಸ್

ಕೃಷಿ ಮಸೂದೆಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಡಾ.ಎಚ್.ಎನ್‌. ನಾಗಮೋಹನದಾಸ್

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 4:18 IST
Last Updated 22 ಫೆಬ್ರುವರಿ 2021, 4:18 IST
ದಾವಣಗೆರೆಯ ವಾಲ್ಮೀಕಿ ನಾಯಕ ಹಾಸ್ಟೆಲ್‌ನಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಆಯೋಜಿಸಿದ್ದ ಕೃಷಿ ಮಸೂದೆಗಳ ಕುರಿತ ಸಂವಾದ ಕಾರ್ಯಕ್ರಮವನ್ನು ನಿವೃತ್ತ ನ್ಯಾಯಾಧೀಶರಾದ ನಾಗಮೋಹನದಾಸ್ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು
ದಾವಣಗೆರೆಯ ವಾಲ್ಮೀಕಿ ನಾಯಕ ಹಾಸ್ಟೆಲ್‌ನಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಆಯೋಜಿಸಿದ್ದ ಕೃಷಿ ಮಸೂದೆಗಳ ಕುರಿತ ಸಂವಾದ ಕಾರ್ಯಕ್ರಮವನ್ನು ನಿವೃತ್ತ ನ್ಯಾಯಾಧೀಶರಾದ ನಾಗಮೋಹನದಾಸ್ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು   

ದಾವಣಗೆರೆ: ರೈತ ಭದ್ರವಾಗಿದ್ದರೆ, ಸುರಕ್ಷಿತನಾಗಿದ್ದರೆ ದೇಶ ಭದ್ರವಾಗಿರುತ್ತದೆ, ಸುರಕ್ಷಿತವಾಗಿರುತ್ತದೆ. ಕೆಲವೇ ಕೆಲವು ಕಂನಿಗಳ ಹಿತಾಸಕ್ತಿಗಾಗಿ ರೈತರನ್ನು ಕೃಷಿಯಿಂದಲೇ ಹೊರಹಾಕುವ ಪ್ರಯತ್ನಗಳು ಕಾಯ್ದೆಗಳ ಮೂಲಕ ಆಗುತ್ತಿದೆ. ರೈತ ದಿವಾಳಿಯಾದರೆ ದೇಶವೇ ದಿವಾಳಿಯಾಗಲಿದೆ ಎಂದು ಹೈಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಎಚ್ಚರಿಸಿದರು.

ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಜಿಲ್ಲಾ ಸಮಿತಿಯು ಇಲ್ಲಿನ ನಾಯಕ ವಿದ್ಯಾರ್ಥಿ ನಿಲಯದ ವಾಲ್ಮೀಕಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೃಷಿ ಮಸೂದೆಗಳ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೆ ಹೊಲ ಗದ್ದೆ, ಬೀಜ, ಎತ್ತು, ನೇಗಿಲು, ಗೊಬ್ಬರ, ಶ್ರಮ ಎಲ್ಲವೂ ನಮ್ಮದೇ ಆಗಿತ್ತು. ಹಾಗಾಗಿ ರೈತರು ನೆಮ್ಮದಿಯಿಂದ, ಸ್ವಾಭಿಮಾನದಿಂದ, ಗೌರವದಿಂದ ಬದುಕುತ್ತಿದ್ದರು. 1965ರಲ್ಲಿ ಹಸಿರು ಕ್ರಾಂತಿ ನಡೆದಾಗ ತಲೆತಲಾಂತರದಿಂದ ಸಂರಕ್ಷಿಸಿಕೊಂಡಿದ್ದ ಬೀಜ ಹೋಯಿತು. ಹೈಬ್ರೀಡ್‌ ಬೀಜಗಳು ಬಂದವು. ರಾಸಾಯನಿಕ ಗೊಬ್ಬರ ಬಂತು. ಇದರಿಂದ ಆಹಾರ ಸಾಮಗ್ರಿ ಉತ್ಪಾದನೆ ಹೆಚ್ಚಾಗಿರುವುದು ನಿಜ. ಅದೇ ಹೊತ್ತಿಗೆ ಅಂತರ್ಜಲ ಭೂಮಿಯಾಳಕ್ಕೆ ಹೋಗಿದೆ. ಭೂಮಿ ಫಲವತ್ತತೆ ಕಳೆದುಕೊಂಡಿದೆ. ತಿನ್ನುವ ಆಹಾರ, ಕುಡಿಯುವ ನೀರು ವಿಷವಾಗಿದೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಒಂದಲ್ಲ ಒಂದು ಕಡೆ ಫಸಲುಗಳನ್ನು ರಸ್ತೆಯಲ್ಲಿ ಸುರಿಯುವ ಕೆಲಸವಾಗುತ್ತಿದೆ. ಸರಿ ದಾರಿ ಯಾವುದು ಎಂಬುದು ತೋರದೇ ಆತ್ಮಹತ್ಯೆ ಕಡೆ ರೈತ ನಡೆಯುವಂತಾಗಿದೆ ಎಂದು ವಿವರಿಸಿದರು.

ADVERTISEMENT

ಗುಜರಾತ್‌ನಲ್ಲಿ ಪಟ್ಟೇದಾರರು, ರಾಜಸ್ಥಾನದಲ್ಲಿ ಗುಜ್ಜಾರರು, ಜಾರ್ಖಂಡ್‌ನಲ್ಲಿ ಜಾಟರು, ಮಹಾರಾಷ್ಟ್ರದಲ್ಲಿ ಮರಾಠರು ಹೀಗೆ ವಿವಿಧ ರಾಜ್ಯಗಳಲ್ಲಿ ವಿವಿಧ ಸಮುದಾಯಗಳು ಮೀಸಲಾತಿ ಕೇಳುತ್ತಾ ಬೀದಿಗಳಿದಿವೆ. ಕರ್ನಾಟಕದಲ್ಲಿಯೂ ಕುರುಬರು ಎಸ್ಟಿ ಮೀಸಲಾತಿ, ಪಂಚಮಸಾಲಿಗಳು 2ಎ ಮೀಸಲಾತಿ, ವಿವಿಧ ಸಮುದಾಯಗಳು ಬೇರೆ ಬೇರೆ ಮೀಸಲಾತಿ ಕೇಳುತ್ತಿವೆ. ಇವರೆಲ್ಲ ಬೀದಿಗೆ ಬರಲು ರೈತರ ಸಂಕಷ್ಟ ಅದರ ಹಿಂದಿದೆ ಎಂದು ವಿಶ್ಲೇಷಿಸಿದರು.

2013ರಲ್ಲಿ ಕೇಂದ್ರ ಸರ್ಕಾರ ತಂದ ಭೂಸ್ವಾಧೀನ ಕಾಯ್ದೆ ರೈತರಿಗೆ ಸುರಕ್ಷತೆಯನ್ನು ಒದಗಿಸಿತ್ತು. ಭೂಸ್ವಾಧೀನ ಮಾಡಬೇಕಿದ್ದರೆ ಮಾರುಕಟ್ಟೆ ಬೆಲೆಗಿಂತ ಮೂರು ಪಟ್ಟು ಅಧಿಕ ದರ ನೀಡಬೇಕು. ಪುನರ್ವಸತಿ ಕಲ್ಪಿಸಬೇಕು. ಯಾವ ಉದ್ದೇಶಕ್ಕೆ ಭೂಸ್ವಾಧೀನ ಮಾಡಲಾಗಿದೆಯೋ ಅದಕ್ಕೆ 5 ವರ್ಷಗಳ ಒಳಗೆ ಬಳಸದೇ ಇದ್ದರೆ ರೈತನಿಗೆ ವಾಪಸ್‌ ಮಾಡಬೇಕು ಎಂಬ ನಿರ್ಬಂಧಗಳಿದ್ದವು. 2019ರಲ್ಲಿ ತಿದ್ದುಪಡಿ ಮಾಡಲಾದ ಭೂಸ್ವಾಧೀನ ಕಾಯ್ದೆಯಲ್ಲಿ ಹಲವು ಕಾರ್ಯಗಳಿಗೆ ಈ ನಿರ್ಬಂಧಗಳು ಅನ್ವಯವಾಗುವುದಿಲ್ಲ ಎಂದು ಮಾಡಿ, ರೈತರಿಗಿದ್ದ ಸುರಕ್ಷತೆ ತೆಗೆಯಲಾಯಿತು. ರಸ್ತೆ ಅಭಿವೃದ್ಧಿಗೆ, ನಗರಾಭಿವೃದ್ಧಿ ಪ್ರಾಧಿಕಾರಕ್ಕೆ, ಕೈಗಾರಿಕಾ ವಸಾಹತಿಗೆ, ಮೂಲ ಸೌಕರ್ಯ ಒದಗಿಸುವ ಕಾರ್ಯಕ್ಕೆ ಹೀಗೆ ಅನೇಕ ವಿಷಯಗಳಿಗೆ ಭೂಸ್ವಾಧೀನ ಮಾಡಿದರೆ ನಿರ್ಬಂಧಗಳು ಲಗಾವು ಆಗುವುದಿಲ್ಲ. ಇದು ರೈತ ವಿರೋಧಿ ನೀತಿ ಎಂದರು.

‌ದೇಶದಲ್ಲಿ ಶೇ 75ರಷ್ಟು ಸಣ್ಣ, ಅತಿ ಸಣ್ಣ ಹಿಡುವಳಿದಾರರು ಇದ್ದಾರೆ. ಅವರೆಲ್ಲರಿಗೂ ಕಾಯ್ದೆಯಿಂದ ಸಂಕಟ ಎದುರಾಗಲಿದೆ. ರೈತರು ಭೂಮಿ ಕಳೆದುಕೊಂಡು ನಗರಕ್ಕೆ ಹೋದರೂ ಅಲ್ಲಿ ಸರಿಯಾಗಿ ಉದ್ಯೋಗವಿಲ್ಲ. ಸ್ವಾಭಿಮಾನದಿಂದ ಬದುಕುತ್ತಿದ್ದ ರೈತರು ಸ್ಲಂಗಳಲ್ಲಿ ಗುಲಾಮರಾಗಿ ಬದುಕುವ ‍ಪರಿಸ್ಥಿತಿ ಬರಲಿದೆ. ಬೆಲೆ, ತೂಕ, ಹಣ ಪಾವತಿ ಮುಂತಾದವುಗಳಲ್ಲಿ ಮೋಸ, ಭ್ರಷ್ಟಾಚಾರಗಳು ಎಪಿಎಂಸಿಯಲ್ಲಿ ನಡೆದಿವೆ. ನ್ಯೂನತೆಗಳನ್ನು ಸರಿಪಡಿಸಬೇಕೇ ಹೊರತು ಎಪಿಎಂಸಿಯೇ ಇಲ್ಲದಂತೆ ಮಾಡಲು ಹೊರಡಬಾರದು ಎಂದು ಸಲಹೆ ನೀಡಿದರು.

ಕೃಷಿ ಬಗ್ಗೆ ಕಾಯ್ದೆ ಮಾಡುವ ಅಧಿಕಾರ ರಾಜ್ಯ ಸರ್ಕಾರದ್ದೇ ಹೊರತು ಕೇಂದ್ರದ್ದಲ್ಲ. ಅದನ್ನು ಮೀರಿ ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವುದು ಸಂವಿಧಾನ ವಿರೋಧಿ ಕೃತ್ಯ. ರಾಜ್ಯಸಭೆಯಲ್ಲಿ ಬಹುಮತ ಇಲ್ಲದೇ ಇದ್ದರೂ ಗದ್ದಲದ ಮೂಲಕ ಅಂಗೀಕಾರ ಮಾಡಿದ್ದು ಅಪ್ರಜಾಪ್ರಭುತ್ವವಾದುದು. ಕೇಂದ್ರ ಸರ್ಕಾರ ಹಠಮಾರಿತನ ಬಿಟ್ಟು ಈ ಕಾಯ್ದೆಗಳನ್ನು ಹಿಂಪಡೆಯಬೇಕು. ರೈತರ ನೆರವಿಗೆ ಬೇಕಾದ ಕಾಯ್ದೆಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಹೊನ್ನೂರು ಮುನಿಯಪ್ಪ, ಹುಚ್ಚವ್ವನಹಳ್ಳಿ ಮಂಜುನಾಥ, ಎಚ್‌.ಕೆ. ರಾಮಚಂದ್ರಪ್ಪ, ತೇಜಸ್ವಿ ಪಟೇಲ್‌, ಆವರಗೆರೆ ಎಚ್.ಜಿ. ಉಮೇಶ, ಎಲ್.ಎಚ್. ಅರುಣಕುಮಾರ್‌, ಅನೀಸ್ ಪಾಷಾ, ಎನ್.ಎಂ. ಆಂಜನೇಯ ಗುರೂಜಿ, ಮಂಜುಳಾ, ತಿಪ್ಪೇಸ್ವಾಮಿ ಅಣಬೇರು, ಆವರಗೆರೆ ಬಾನಪ್ಪ, ಸುನೀತ್‌ಕುಮಾರ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.