ADVERTISEMENT

ಮೇಯರ್‌ ಸ್ಥಾನ ನೀಡಿದ್ದರೆ ಬರುತ್ತಿದ್ದೆ: ಶ್ರೀನಿವಾಸ

ಪಾಲಿಕೆಗೆ ಮೇಯರ್‌, ಉಪಮೇಯರ್‌ ಚುನಾವಣೆ ಸಂದರ್ಭ ನಾಪತ್ತೆಯಾಗಿದ್ದ ಮೂವರು ಸದಸ್ಯರು ಗುರುವಾರ ಹಾಜರು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 20:15 IST
Last Updated 20 ಫೆಬ್ರುವರಿ 2020, 20:15 IST
ಜೆ.ಎನ್‌. ಶ್ರೀನಿವಾಸ್‌
ಜೆ.ಎನ್‌. ಶ್ರೀನಿವಾಸ್‌   

ದಾವಣಗೆರೆ: ಮೇಯರ್‌, ಉಪ ಮೇಯರ್‌ ಚುನಾವಣೆಯ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಕಾಂಗ್ರೆಸ್‌ನ ಮೂವರು ಸದಸ್ಯರು ಗುರುವಾರ ಮಾಧ್ಯಮಗಳ ಮುಂದೆ ಹಾಜರಾದರು. ಮೇಯರ್‌ ಹುದ್ದೆ ನೀಡದ ಕಾರಣ ಗೈರಾಗಿರುವುದಾಗಿ ಕಾರಣ ನೀಡಿದ್ದಾರೆ.

‘ನಾನು ಎರಡು ಬಾರಿ ಗೆದ್ದಿದ್ದೇನೆ. ಅಲ್ಲದೇ ನನ್ನ ಪತ್ನಿ ಶ್ವೇತಾ ಕೂಡ ಪಾಲಿಕೆ ಸದಸ್ಯೆ. ನನಗೆ ಮೇಯರ್‌ ಸ್ಥಾನ ನೀಡಬೇಕು. ಇಲ್ಲದಿದ್ದರೆ ಪತ್ನಿಗಾದರೂ ನೀಡಬೇಕು ಎಂದು ಬೇಡಿಕೆ ಸಲ್ಲಿಸಿದ್ದೆ. ಆದರೆ ಕನಿಷ್ಠ ಸೌಜನ್ಯದಿಂದ ಕುಳಿತು ಮಾತುಕತೆ ಮಾಡಲು ಕೂಡ ಪಕ್ಷದ ನಾಯಕರು ಸಿದ್ಧರಾಗಲಿಲ್ಲ. ಇದರಿಂದ ಬಹಳ ನೋವಾಗಿದ್ದರಿಂದ ಗೈರು ಹಾಜರಾಗಬೇಕಾಯಿತು’ ಎಂದು ಜೆ.ಎನ್‌. ಶ್ರೀನಿವಾಸ್‌ ತಿಳಿಸಿದ್ದಾರೆ.

‘ನಾನು ರಾಜಕೀಯ ಸನ್ಯಾಸ ಅಲ್ಲ. ನನಗೂ ಆಕಾಂಕ್ಷೆಗಳಿವೆ. ನನ್ನ ಹೆಸರು ಘೋಷಣೆ ಮಾಡಿದ್ದರೆ ಬಂದು ಬಿಡುತ್ತಿದ್ದೆ. ಬುಧವಾರ ಬೆಳಿಗ್ಗೆ 7.30ರವರೆಗೂ ನಾನು ಇದೇ ಮಾತನ್ನು ಹೇಳಿದ್ದೆ. ಆನಂತರವೂ ಮೊಬೈಲ್‌ ಸ್ವಿಚ್‌ಡ್‌ ಆಫ್‌ ಮಾಡಿಕೊಂಡಿಲ್ಲ. ನಾನೇನು ಬೆಂಗಳೂರಿಗೆ ಹೋಗಿರಲಿಲ್ಲ. ದಾವಣಗೆರೆ ಆಸುಪಾಸಲ್ಲೇ ಇದ್ದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಹೈಕೋರ್ಟ್‌ ತೀರ್ಪು 24ಕ್ಕೆ ಇದೆ. ಏನು ಆದೇಶ ಬರುತ್ತದೆ ಎಂದು ಕಾದು ನೋಡಬೇಕು. ಬಿಜೆಪಿ ಒಂದು ವರ್ಷವಷ್ಟೇ ಆಡಳಿತ ಮಾಡುತ್ತದೆ. ಆಮೇಲೆ ನಾವೇ ಆಡಳಿತಕ್ಕೆ ಬರುತ್ತೇವೆ. ನಾನು ಕಾಂಗ್ರೆಸ್‌ ಬಿಟ್ಟಿಲ್ಲ. ಪಕ್ಷದಿಂದ ಉಚ್ಛಾಟನೆ ಮಾಡಿದರೆ ಕಾನೂನು ಹೋರಾಟ ಮಾಡಲಾಗುವುದು’ ಎಂದು ಹೇಳಿದರು.

ಪತಿ, ಪತ್ನಿಗೆ ಒಂದು ಕೋಟಿ ರೂಪಾಯಿ ನೀಡಲಾಗಿದೆ ಎಂಬ ಆರೋಪ ಇದೆಯಲ್ಲ ಎಂಬ ಪ್ರಶ್ನೆಗೆ, ‘₹ 1 ಕೋಟಿ ನೀಡಿದರೆ ಈ ರಾಜಕೀಯ ಜಂಜಾಟವೇ ಬೇಡ ಎಂದು ಮನೆಯಲ್ಲಿ ಆರಾಮವಾಗಿ ಕುಳಿತುಕೊಳ್ಳುವೆ. ಅದೆಲ್ಲ ಸುಳ್ಳು ಆರೋಪಗಳು’ ಎಂದು ಉತ್ತರ ನೀಡಿದರು.

‘ನಮ್ಮ ಗುರು ಶ್ರೀನಿವಾಸ್‌ ಅವರು ಮೇಯರ್‌ ಆಗದೇ ಇರುವುದರಿಂದ ಅವರು ಬೇಜಾರು ಮಾಡಿಕೊಂಡರು. ಇದರಿಂದ ನಮಗೂ ಬೇಜಾರಾಯಿತು. ಹಾಗಾಗಿ ಅವರು ಹೋಗದ ಕಾರಣ ನಾವೂ ಹೋಗಿಲ್ಲ’ ಎಂದು ಯಶೋದಾ ಅವರ ಪರವಾಗಿ ಅವರ ಪತಿ ಉಮೇಶ್‌ ತಿಳಿಸಿದ್ದಾರೆ.

ಹಣ ಪಡೆದು ದೂರ ಉಳಿದಿದ್ದೀರಿ ಎಂಬ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಮ್ಮನ್ನು ಯಾರೂ ಸಂಪರ್ಕಿಸಿಲ್ಲ. ದುಡ್ಡೂ ಕೊಟ್ಟಿಲ್ಲ. ಸುಮ್ಮನೆ ಯಾರೋ ಸುದ್ದಿ ಹಬ್ಬಿಸಿದ್ದಾರೆ’ ಎಂದು ಸ್ಪಷ್ಟನೆ ನೀಡಿದರು. ‘ರಾಜಕೀಯ ಕ್ಷೇತ್ರ ನಮಗೆ ಹೊಸತು. ಹಾಗಾಗಿ ಮುಂದೆ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಶ್ರೀನಿವಾಸ್‌ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.