ADVERTISEMENT

ಹೆತ್ತವರ ಆರೈಕೆ ಮಾಡದಿದ್ದರೆ ಕ್ರಮಕ್ಕೂ ಅವಕಾಶ

ಹಿರಿಯ ನಾಗರಿಕರ ದಿನಾಚರಣೆಯಲ್ಲಿ ನ್ಯಾಯಾಧೀಶ ಪ್ರವೀಣ್ ನಾಯಕ್

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 4:18 IST
Last Updated 26 ಸೆಪ್ಟೆಂಬರ್ 2022, 4:18 IST
ದಾವಣಗೆರೆಯಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಅವರು ಬಕೆಟ್‌ಗೆ ಬಾಲ್‌ ಹಾಕುವ ಮೂಲಕ ಉದ್ಘಾಟಿಸಿದರು (ಎಡಚಿತ್ರ). ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಮಹಿಳೆಯರು ಓಡಿದ ಪರಿ.
ದಾವಣಗೆರೆಯಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಅವರು ಬಕೆಟ್‌ಗೆ ಬಾಲ್‌ ಹಾಕುವ ಮೂಲಕ ಉದ್ಘಾಟಿಸಿದರು (ಎಡಚಿತ್ರ). ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಮಹಿಳೆಯರು ಓಡಿದ ಪರಿ.   

ದಾವಣಗೆರೆ: ಯೌವ್ವನದಲ್ಲಿ ದುಡಿದು ಮಕ್ಕಳನ್ನು ಸಾಕುವ ಹೆತ್ತವರು ವೃದ್ಧರಾದಾಗ ಅವರನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ವೃದ್ಧಾಪ್ಯದಲ್ಲಿ ಗೌರವಯುತವಾಗಿ ನೋಡಿಕೊಳ್ಳದೇ ಹೋದರೆ ಕಾನೂನು ಕ್ರಮ ಕೈಗೊಳ್ಳುವ ಅವಕಾಶ ಇದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ತಿಳಿಸಿದರು.

ನಗರದ ಬಾಪೂಜಿ ಸ್ಕೂಲ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ, ಹಿರಿಯ ನಾಗರಿಕರ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನವು ಹಿರಿಯ ನಾಗರಿಕರು, ದುರ್ಬಲ ವರ್ಗದವರು, ಶೋಷಿತರು, ಹಿಂದುಳಿದವರು ಸೇರಿದಂತೆ ಎಲ್ಲ ವರ್ಗದ ಜನರಿಗೆ ತನ್ನದೇ ಆದ ಕಾನೂನನ್ನು ರೂಪಿಸಿದೆ. ಅದರ ಅಡಿಯಲ್ಲಿ ಎಲ್ಲರೂ ಸೌಲಭ್ಯಗಳನ್ನು ಪಡೆಯಬಹುದು. ಆದರೆ ಅವುಗಳ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ಕಾನೂನು ಜಾರಿ ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಹಿರಿಯ ನಾಗರಿಕರನ್ನು ಗೌರವ, ಪ್ರೀತಿ, ವಿಶ್ವಾಸಗಳಿಂದ ಕಾಣುತ್ತಿಲ್ಲ. ಇದರಿಂದಾಗಿ ಅವರು ವೃದ್ಧಾಪ್ಯದಲ್ಲಿ ಮಾನಸಿಕವಾಗಿ ವೇದನೆ ಅನುಭವಿಸುವಂತಾಗಿದೆ. ಈಗೂ ಮನೆಯಲ್ಲಿ ಹಿರಿಯರು ಇರಲೇಬಾರದು ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ವಕೀಲ ಎಲ್.ಎಚ್. ಅರುಣಕುಮಾರ್ ಬೇಸರ ವ್ಯಕ್ತಪಡಿಸಿದರು.

ದೇಶದ ಅಭಿವೃದ್ಧಿಗೆ ಶೇ 70ಕ್ಕೆ ಹಿರಿಯರೇ ಕಾರಣ. ಹಿರಿಯ ನಾಗರಿಕರ ಆದರ್ಶ ಅಳವಡಿಸಿಕೊಂಡರೆ ಯುವ ಪೀಳಿಗೆ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿದರು.

ಜಿಲ್ಲಾ ಹಿರಿಯ ನಾಗರಿಕರ ಸಂಘ ಗೌರವ ಕಾರ್ಯದರ್ಶಿ ಎಸ್. ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಪ್ರಕಾಶ, ಹಿರಿಯ ನಾಗರಿಕ ಸಿದ್ದಪ್ಪ ಇದ್ದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಸಂಘ ಹಾಗೂ ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

60-69, 70-79 ಮತ್ತು 80 ವರ್ಷ ಮೇಲ್ಪಟ್ಟ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ನಡಿಗೆ, ಬಕೆಟ್‍ಗೆ ರಿಂಗ್‍ ಎಸೆಯುವುದು, ಮ್ಯೂಸಿಕಲ್ ಚೇರ್ ಸ್ಪರ್ಧೆ ನಡೆಯಿತು. ಏಕಪಾತ್ರಾಭಿನಯ, ಗಾಯನ, ಚಿತ್ರಕಲೆ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.