ADVERTISEMENT

ಏಪ್ರಿಲ್ ವೇಳೆಗೆ 7ನೇ ವೇತನ ಆಯೋಗ ಅನುಷ್ಠಾನ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 4:48 IST
Last Updated 10 ನವೆಂಬರ್ 2022, 4:48 IST
ದಾವಣಗೆರೆಯಲ್ಲಿ ಬುಧವಾರ ನಡೆದ ಶೈಕ್ಷಣಿಕ ಸಮಾವೇಶ, ಪ್ರತಿಭಾ ಪುರಸ್ಕಾರ, ನಿವೃತ್ತ ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಸನ್ಮಾನ ಸಮಾರಂಭವನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಿದರು.
ದಾವಣಗೆರೆಯಲ್ಲಿ ಬುಧವಾರ ನಡೆದ ಶೈಕ್ಷಣಿಕ ಸಮಾವೇಶ, ಪ್ರತಿಭಾ ಪುರಸ್ಕಾರ, ನಿವೃತ್ತ ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಸನ್ಮಾನ ಸಮಾರಂಭವನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಿದರು.   

ದಾವಣಗೆರೆ: ‘ಮುಂದಿನ ವರ್ಷದ ಮಾರ್ಚ್ ವೇಳೆಗೆ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಅನುಷ್ಠಾನಗೊಂಡು ಆರ್ಥಿಕ ಸೌಲಭ್ಯ ದೊರೆಯಲಿದೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದಿಂದ ಬುಧವಾರ ನಡೆದ ಶೈಕ್ಷಣಿಕ ಸಮಾವೇಶ, ಪ್ರತಿಭಾ ಪುರಸ್ಕಾರ, ನಿವೃತ್ತ ಪ್ರಾಚಾರ್ಯರು ಹಾಗೂ ಉಪನ್ಯಾಸಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈ ಹಿಂದಿನ ವೇತನ ಆಯೋಗಗಳು ರಚನೆಯಾಗಲು 6 ರಿಂದ 7 ವರ್ಷಗಳು ತೆಗೆದುಕೊಂಡಿದ್ದವು. ಸಂಘದ ಹೋರಾಟದ ಫಲವಾಗಿ ಇದೇ ಮೊದಲ ಬಾರಿಗೆ 5 ವರ್ಷಕ್ಕೆ 7ನೇ ವೇತನ ಆಯೋಗ ರಚನೆಯಾಗಿದೆ. ಚುನಾವಣೆ ಸಮೀಪಿಸುತ್ತಿದೆ, ನೀತಿ ಸಂಹಿತೆ ಜಾರಿಯಾದರೆ 7ನೇ ವೇತನ ಆಯೋಗದ ಸೌಲಭ್ಯ ಸಿಗುತ್ತದೆಯೊ ಇಲ್ಲವೋ ಎಂದು ನೌಕರರು ಆತಂಕ ಪಡಬಾರದು. ಇನ್ನು ಎರಡು ತಿಂಗಳಲ್ಲಿ ಆಯೋಗ ವರದಿವನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ವಿಶ್ವಾಸವಿದ್ದು, ಏ.1, 2023ರಿಂದ ನೌಕರರಿಗೆ ಆರ್ಥಿಕ ಸೌಲಭ್ಯ ದೊರೆಯಲಿದೆ. ಪ್ರತಿ ನೌಕರರ ವೇತನದಲ್ಲಿ ₹12,000ದಿಂದ ₹15,000 ಹೆಚ್ಚಳವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಇದಾದ ಬಳಿಕ 2026ರಿಂದ ಕೇಂದ್ರ ವೇತನ ಆಯೋಗ ರಚನೆಯಾಗಲಿದ್ದು, ಇದನ್ನು ಪಡೆಯಲು ಹೋರಾಟಕ್ಕೆ ಸಜ್ಜಾಗಬೇಕು. ಇದು ಜಾರಿಯಾದರೆ ಕೇಂದ್ರ ಸರ್ಕಾರಿ ನೌಕರರಂತೆ ರಾಜ್ಯ ಸರ್ಕಾರಿ ನೌಕರರಿಗೂ ಸಮಾನ ವೇತನ ಕೊಡಿಸಲಾಗುವುದು’ ಎಂದು ಹೇಳಿದರು.

‘ಜನವರಿ 1ರಿಂದ ಸರ್ಕಾರಿ ನಗದುರಹಿತ ಚಿಕಿತ್ಸೆ ಜಾರಿಗೆ ಬರಲಿದ್ದು. ಇದು ಹೊರರೋಗಿ ಮತ್ತು ಒಳರೋಗಿ ಸೇವೆಗಳಿಗೆ ಅನ್ವಯಿಸಲಿದೆ’ ಎಂದರು.

‘ಸರ್ಕಾರಿ ನೌಕರರಿಗೆ ವರ್ಷಕ್ಕೆ 10 ಇದ್ದ ಸಿಎಲ್ ಅನ್ನು 15ಕ್ಕೆ ಹೆಚ್ಚಿಸುವಲ್ಲಿ, ಮಹಿಳಾ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕೆಜಿಐಡಿ ಸಾಲ ಪಡೆಯಲು, ವೇತನ ಚೀಟಿ ಮೊಬೈಲ್‍ಗೆ ಬರುವಂತೆ ಆನ್‍ಲೈನ್ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ’ ಎಂದು ಹೇಳಿದರು.

ನೌಕರರಿಗೆ ಮಾರಕವಾಗಿರುವ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದು ಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ಇದಕ್ಕೆ ಸ್ಪಂದನೆ ಸಿಗದಿದ್ದರೆ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ವಿಧಾನಸೌಧ ಕಚೇರಿಗಳನ್ನು ಬಂದ್ ಮಾಡಿಸಿ ಎಲ್ಲಾ ನೌಕರರು ಬೀದಿಗೆ ಇಳಿದು ಹೋರಾಟ ಮಾಡಿ, ಬೇಡಿಕೆ ಈಡೇರಿಸಿಕೊಳ್ಳುತ್ತೇವೆ’ ಎಂದು ಸವಾಲು ಹಾಕಿದರು.

‘ಉಪನ್ಯಾಸಕ ವೃತ್ತಿಗೆ ಬೆಲೆ ಕಟ್ಟಲು ಆಗುವುದಿಲ್ಲ. ಉಪನ್ಯಾಸಕರಾಗಿದ್ದ ಸರ್ವೆಪಲ್ಲಿ ರಾಧಾಕೃಷ್ಣನ್ ಈ ದೇಶದ ರಾಷ್ಟ್ರಪತಿಯಾದರು. ವೃತ್ತಿಯ ಹೆಸರು ಕೆಡದಂತೆ ನೋಡಿಕೊಂಡು ಉತ್ತುಂಗಕ್ಕೆ ಏರಬೇಕು’ ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಜಿ.ಎಂ. ಸಿದ್ದೇಶ್ವರ ಸಲಹೆ ನೀಡಿದರು.

ಡಾ.ಶಂಭು ಬಳಿಗಾರ್ ವಿಶೇಷ ಉಪನ್ಯಾಸ ನೀಡಿದರು. ಉಪನ್ಯಾಸಕಿ ಡಾ.ಅತಿಯಾ ಕೌಸರ್ ‘ರಾಷ್ಟ್ರೀಯ ಶಿಕ್ಷಣ ನೀತಿ’ ಕುರಿತು ಉಪನ್ಯಾಸ ನೀಡಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಪಾಲಾಕ್ಷಿ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಬಿ. ರವಿ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್. ನಿಂಗೇಗೌಡ, ಡಿಡಿಪಿಯು ಎಂ. ಶಿವರಾಜು, ರಾಜ್ಯ ವಿಶ್ವವಿದ್ಯಾಲಯ ಹಾಗೂ ಕಾಲೇಜು ಅಧ್ಯಾಪಕರ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ.ಸಿ.ಎಚ್. ಮುರುಗೇಂದ್ರಪ್ಪ, ಶಿವರಾಜ್ ಬಿ. ಮಾಲಿಪಾಟೀಲ್, ಗುರುಮೂರ್ತಿ, ಮುಬಾರಕ್ ಅಲಿ ಇದ್ದರು.

==

ಪಠ್ಯ ತಯಾರಿ: ರಾಜಕೀಯ ಹಸ್ತಕ್ಷೇಪ ಸಲ್ಲದು

‘ಪಠ್ಯ ಪುಸ್ತಕ ತಯಾರು ಮಾಡುವುದರಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಹಸ್ತಕ್ಷೇಪ ಇರಬಾರದು.ರಾಜಕಾರಣ ನುಸುಳಿರುವುದರಿಂದ ಗುಣಮಟ್ಟದ ಶಿಕ್ಷಣ ದೂರವಾಗುತ್ತಿದೆ. ಪ್ರಸ್ತುತ ಜೀವನ ಶಿಕ್ಷಣ ಬೇಕಾಗಿದೆ. ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಹೇಗೆ ಎದುರಸಬೇಕೆಂಬ ಕೊಡದಿದ್ದರೆ ಶಿಕ್ಷಣ ಪಡೆದು ಏನು ಪ್ರಯೋಜನ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಪ್ರಶ್ನಿಸಿದರು.

‘ಹೊಸ ಪಿಂಚಣಿ ವ್ಯವಸ್ಥೆ ಜಾರಿಗೆ ತರುವಾಗ ಸಾರ್ವಜನಿಕರೊಂದಿಗೆ ಚರ್ಚಿಸಿ ಕಾಯ್ದೆ ತಂದಿದ್ದರೆ, ಇಂದು ನೌಕರರು ಬೀದಿಯಲ್ಲಿ ನಿಂತು ಪ್ರತಿಭಟಿಸಬೇಕಾದ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಸುತ್ತೋಲೆಗಳನ್ನು ಕಾಯ್ದೆಯಂತೆ ಜಾರಿ ಮಾಡಿದರೆ, ಇಂತಹ ದುಷ್ಟರಿಣಾಮ ಎದುರಾಗುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.