ADVERTISEMENT

ದಾವಣಗೆರೆ: ಶಾಲೆಗಳಲ್ಲಿ ಮಕ್ಕಳ ಕಲರವ ಆರಂಭ

ಪ್ರಾರಂಭೋತ್ಸವದಲ್ಲಿ ಹೂವು ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 17 ಮೇ 2022, 3:48 IST
Last Updated 17 ಮೇ 2022, 3:48 IST
1) ದಾವಣಗೆರೆಯ ನಿಟುವಳ್ಳಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಪ್ರವೇಶಾತಿಗಾಗಿ ಆಗಮಿಸಿದ ಮಕ್ಕಳಿಗೆ ಶಾಲಾ ಸಿಬ್ಬಂದಿ ಸಿಹಿ ತಿನ್ನಿಸಿ ಸ್ವಾಗತಿಸಿದರು.2) ಮೊದಲ ದಿನದ ತರಗತಿ ಮುಗಿಸಿ ಹೊರಬರುತ್ತಿರುವ ವಿದ್ಯಾರ್ಥಿಗಳ ಸಂಭ್ರಮ. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
1) ದಾವಣಗೆರೆಯ ನಿಟುವಳ್ಳಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಪ್ರವೇಶಾತಿಗಾಗಿ ಆಗಮಿಸಿದ ಮಕ್ಕಳಿಗೆ ಶಾಲಾ ಸಿಬ್ಬಂದಿ ಸಿಹಿ ತಿನ್ನಿಸಿ ಸ್ವಾಗತಿಸಿದರು.2) ಮೊದಲ ದಿನದ ತರಗತಿ ಮುಗಿಸಿ ಹೊರಬರುತ್ತಿರುವ ವಿದ್ಯಾರ್ಥಿಗಳ ಸಂಭ್ರಮ. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ ಕೇಳಿಸತೊಡಗಿತು. ಸೋಮವಾರ ವಿದ್ಯಾರ್ಥಿಗಳು ಶಾಲೆಗೆ ಬಂದಾಗ ಶಿಕ್ಷಕರು ಮತ್ತು ಸಿಬ್ಬಂದಿ ಹೂವು ನೀಡಿ ಸ್ವಾಗತಿಸಿದರು. ಸಿಹಿ ನೀಡಿ ಖುಷಿಪಟ್ಟರು. ಮಕ್ಕಳು ಆಡಿ ನಲಿದರು. ಶಾಲೆಗಳಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿತು.

ನಿಟುವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಕೆಟಿಜೆ ನಗರ ಉರ್ದುಶಾಲೆ, ಸರಸ್ವತಿನಗರ ದುರ್ಗಾಂಬಿಕಾ ಶಾಲೆ ಸಹಿತ ನಗರದ ಎಲ್ಲ ಶಾಲೆಗಳಲ್ಲಿ ತಳಿರು ತೋರಣಗಳಿಂದ, ಹೂವುಗಳಿಂದ ಅಲಂಕಾರ ಮಾಡಿ ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು. ಶಾಲೆಯ ಮುಂದೆ ರಂಗೋಲಿ ಬಿಡಿಸಿ, ಮಕ್ಕಳಿಗೆ ಸ್ವಾಗತ ಶಿಕ್ಷಕರು, ಶಾಲಾ ಸಿಬ್ಬಂದಿಯ ಜತೆಗೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಕೂಡ ಪಾಲ್ಗೊಂಡು ಮಕ್ಕಳನ್ನು ಬರಮಾಡಿಕೊಂಡರು.

ಶಾಲೆಗೆ ಬಂದ ಮಕ್ಕಳಿಗೆ ಬಾದಾಮ್‌ಪೂರಿ ನೀಡಲಾಯಿತು.ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಚಾಕೊಲೆಟ್‌ ನೀಡಿ ಬರಮಾಡಿಕೊಳ್ಳಲಾಯಿತು. ಮಧ್ಯಾಹ್ನ ಗೋದಿ ಹುಗ್ಗಿ, ಅನ್ನ-ಸಾರು ಬಿಸಿಯೂಟ ನೀಡಲಾಯಿತು. ಮಕ್ಕಳು ಶಾಲಾ ಮೈದಾನದಲ್ಲಿ ಕುಣಿದು ಖುಷಿಪಟ್ಟರು. ಒಂದು ತಿಂಗಳ ರಜೆ ಮುಗಿಸಿ ಬಂದ ಮಕ್ಕಳಿಗೆ ಶಾಲೆ ನೀರಸವಾಗದಂತೆ ವಾತಾವರಣ ನಿರ್ಮಿಸಲಾಯಿತು.

ADVERTISEMENT

ಶಾಲಾ ದಾಖಲಾತಿ ಕೂಡ ಸೋಮವಾರ ಆರಂಭಗೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ಇರುವ ಆಂಗ್ಲ ಮಾಧ್ಯಮ ಶಾಲೆಗಳಿಗೆ ಬೇಡಿಕೆ ಹೆಚ್ಚಿತ್ತು. ಆಂಗ್ಲ ಮಾಧ್ಯಮಕ್ಕೆ ಒಂದು ತರಗತಿ ಅಂದರೆ 30 ಮಕ್ಕಳಿಗೆ ಅವಕಾಶ ನೀಡಲಾಗಿದೆ. ಇನ್ನೂ 30 ಮಕ್ಕಳಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ಪೋಷಕರಿಂದ ಬಂತು.

ಕೊರೊನಾ ಕಾರಣದಿಂದ ಎರಡು ವರ್ಷಗಳ ಕಾಲ ತರಗತಿಗಳು ಸರಿಯಾಗಿ ನಡೆದಿರಲಿಲ್ಲ. ಕಳೆದ ಶೈಕ್ಷಣಿಕ ವರ್ಷದ ಕೊನೆಗೆ ತರಗತಿಗಳು ನಡೆದಿದ್ದವಾದರೂ ಆರಂಭದಲ್ಲಿ ಆನ್‌ಲೈನ್‌ನಲ್ಲೇ ಪಾಠ ಕೇಳುವಂತಾಗಿತ್ತು. ಈ ಬಾರಿ ಬೇಗನೇ ಶಾಲೆ ಆರಂಭಗೊಳ್ಳುವ ಮೂಲಕ ಕೊರೊನಾ ಭೀತಿ ಇಲ್ಲ ಎಂಬುದನ್ನು ಸಾರಲಾಗಿದೆ. ಶಾಲೆಗಳಿಗೆ ಶೇ 70ರಷ್ಟು ಪಠ್ಯ ಪುಸ್ತಕ ಬಂದಿದ್ದು, ಮೊದಲ ದಿನವೇ ಈ ಪುಸ್ತಕಗಳನ್ನು ವಿತರಿಸುವ ಕಾರ್ಯವೂ ಹಲವಡೆ ನಡೆದವು. ಸಮವಸ್ತ್ರ ಮಾತ್ರ ಇನ್ನೂ ಪೂರೈಕೆಯಾಗಿಲ್ಲ. ಶಾಲೆಗಳ ಸಹಶಿಕ್ಷಕರು ದಾಖಲಾತಿ ಆಂದೋಲನಕ್ಕೆ ತೆರಳಿದ್ದರು.

ಶ್ರೀರಾಮ ಬಡಾವಣೆ: ಶ್ರೀರಾಮ ಬಡಾವಣೆಯ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು, ಹಾಗೂ ಮುಖ್ಯೋಪಾಧ್ಯಾಯರು, ಶಿಕ್ಷಕರು ಚಾಲನೆ ನೀಡಿದರು. ನೋಟ್ಸ್‌ ಬುಕ್‌ ವಿತರಿಸಲಾಯಿತು. ಕಲಿಕಾ ಚೇತರಿಕೆ ಮತ್ತು ಮಳೆ ಬಿಲ್ಲು ಕಾರ್ಯಕ್ರಮಗಳಿಗೂ ಚಾಲನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.