ದಾವಣಗೆರೆ: ಇಂದಿನ ಮಕ್ಕಳು ಪಾಶ್ಚತ್ಯ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ಭಾರತೀಯ ಸಂಸ್ಕೃತಿ ಮರೆಯಾಗುತ್ತಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಬೇಸರ ವ್ಯಕ್ತಪಡಿಸಿದರು.
ಡಾ. ಮಹಾಂತ ಸ್ವಾಮೀಜಿ ಭಕ್ತವೃಂದ, ದಾವಣಗೆರೆ ಜಿಲ್ಲಾ 3 ಮತ್ತು 4 ಚಕ್ರ ಗೂಡ್ಸ್ ವಾಹನ ಮಾಲೀಕರ ಸಂಘ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ಲಿಂಗೈಕ್ಯ ಮಹಾಂತ ಶಿವಾಚಾರ್ಯ ಜಯಂತ್ಯುತ್ಸವ ಪ್ರಯುಕ್ತ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಹಾಕುವ ಉಡುಗೆ-ತೊಡುಗೆಯೂ ಪಶ್ಚಿಮದ್ದಾಗಿದೆ. ದಿನ ಪೂರ್ತಿ ಮೊಬೈಲಲ್ಲಿ ಮುಳಿಗಿರುತ್ತಾರೆ. ತರಗತಿಯಲ್ಲಿ ಪಾಠ ಮಾಡುತ್ತಿದ್ದರೆ ವಿದ್ಯಾರ್ಥಿಗಳು ಮೊಬೈಲ್ ನೋಡುತ್ತಿರುತ್ತಾರೆ. ಹಿರಿಯರಿಗೆ ಗೌರವ ಕೊಡುತ್ತಿಲ್ಲ ಎಂದು ಹೇಳಿದರು.
ತರಗತಿಗಳಲ್ಲಿ ಹೇಳಿಕೊಡುವ ಶಿಕ್ಷಣ ವ್ಯಕ್ತಿತ್ವವನ್ನು ರೂಪಿಸುತ್ತಿಲ್ಲ. ಪಠ್ಯಗಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಕಾಣುತ್ತಿಲ್ಲ. ಹಾಗಾಗಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಿಗಿಂತ, ತಾಯಿಯ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ತಾಯಿಯೇ ನೈತಿಕ ಶಿಕ್ಷಣ ನೀಡಿ, ಉತ್ತಮ ಪ್ರಜೆಯಾಗಿ ರೂಪಿಸುವಲ್ಲಿ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.
ಸರ್ಕಾರ ಹೆಚ್ಚಿನ ಹಣ ವ್ಯಯಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಸಮಾಜ ತೆರಿಗೆ ಹಣ ಇದು ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಂಡು ಕಲಿಯಬೇಕು. ಕಲಿತು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.
ಶಿಕ್ಷಕರ ದಿನವನ್ನು ಒಂದು ದಿನಕ್ಕೆ ಸೀಮಿತಗೊಳಿಸಿ ಆಚರಿಸುವುದು ವಾಡಿಕೆ. ಆದರೆ, ಈ ಸಂಘಟನೆಗಳು ವರ್ಷದಲ್ಲಿ ಎರಡು ಬಾರಿ ಶಿಕ್ಷಕರಿಗೆ ಸನ್ಮಾನಿಸುತ್ತಿರುವುದು ಶ್ಲಾಘನೀಯ ಕಾರ್ಯ. ಇದು ಶಿಕ್ಷಕರ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕಿ ನಾಗರತ್ನಮ್ನ ಅಧ್ಯಕ್ಷತೆ ವಹಿಸಿದ್ದರು. ಡಯಟ್ ಉಪನಿರ್ದೇಶಕಿ ಗೀತಾ ಎಸ್., ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಿರಂಜನಮೂರ್ತಿ, ಅಂಬಣ್ಣ, ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿಸೋಜ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಲಯನೆಸ್ ಕ್ಲಬ್ ಅಧ್ಯಕ್ಷೆ ಪ್ರಭಾ ರವೀಂದ್ರ, ಮಹಾಂತೇಶ್ ಒಣರೊಟ್ಟಿ, ಪಳನಿಸ್ವಾಮಿ, ಕಲ್ಪನಾ, ಮಂಗಳಾ, ಸೌಭಾಗ್ಯ, ಪದ್ಮ, ಶೋಭಾ ಮತ್ತಿತರರು ಇದ್ದರು. ವಿವಿಧ ಶಿಕ್ಷಕ–ಶಿಕ್ಷಕಿಯರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.