ದಾವಣಗೆರೆ: ಗುಂಡಿಬಿದ್ದ ರಸ್ತೆ, ಹೂಳು ತುಂಬಿದ ಚರಂಡಿ, ಬೆಳಕು ಸೂಸದ ಬೀದಿ ದೀಪ, ಆಳೆತ್ತರ ಬೆಳೆದಿರುವ ಕಳೆ ಗಿಡಗಳ ನಡುವೆ ಸಣ್ಣ ಕೈಗಾರಿಕೆಗಳು ಅಕ್ಷರಶಃ ನಲುಗುತ್ತಿವೆ. ಕನಿಷ್ಠ ಮೂಲಸೌಲಭ್ಯವೂ ಇಲ್ಲದೇ ಕೈಗಾರಿಕೋದ್ಯಮಿಗಳು ತೀವ್ರ ಸಂಕಷ್ಟ ಎದುರಿಸುವ ಸ್ಥಿತಿ ಲೋಕಿಕೆರೆಯ ಕೈಗಾರಿಕಾ ವಸಾಹತುವಿನಲ್ಲಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಲೋಕಿಕೆರೆಯಲ್ಲಿ 100 ಎಕರೆಗೂ ಹೆಚ್ಚು ಭೂಮಿಯನ್ನು ಕೈಗಾರಿಕೆಗಳಿಗೆ ಸ್ವಾಧೀನಪಡಿಸಿಕೊಂಡಿತ್ತು. ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲು 1980ರಲ್ಲಿ 19 ಎಕರೆಯಲ್ಲಿ ಕೈಗಾರಿಕಾ ವಸಾಹತು ನಿರ್ಮಿಸಿದೆ. ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (ಕೆಎಸ್‍ಎಸ್‍ಐಡಿಸಿ) ಅಭಿವೃದ್ಧಿಪಡಿಸಿದ ಈ ವಸಾಹತು 2003ರಲ್ಲಿ ಅಂದಿನ ನಗರಸಭೆಗೆ ಹಸ್ತಾಂತರವಾಗಿದೆ.
ವಸಾಹತಿನಲ್ಲಿ ಪೈಪ್, ಪೀಠೋಪಕರಣ, ಎಲೆಕ್ಟ್ರಾನಿಕ್ ಉಪಕರಣ ಸೇರಿ 48 ಕೈಗಾರಿಕೆಗಳಿವೆ. ಸಾವಿರಾರು ಜನರು ಕೆಲಸ ಮಾಡುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆ, ಕಂದಾಯ ಪಾವತಿಯಾಗುತ್ತಿದೆ. ಇದಕ್ಕೆ ಅನುಗುಣವಾಗಿ ಮಹಾನಗರ ಪಾಲಿಕೆ ಮೂಲಸೌಲಭ್ಯ ಒದಗಿಸಿಲ್ಲ ಎಂಬ ಕೊರಗು ಕೈಗಾರಿಕೋದ್ಯಮಿಗಳಲ್ಲಿದೆ.
ವಸಾಹತು ನಿರ್ಮಾಣವಾದ ಸಂದರ್ಭದಲ್ಲಿ ಅಭಿವೃದ್ಧಿಪಡಿಸಿದ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಒಳಚರಂಡಿ ಮರು ನಿರ್ಮಾಣಕ್ಕೆ ಉದ್ಯಮಿಗಳು ಬೇಡಿಕೆ ಇಡುತ್ತಿದ್ದಾರೆ. ಇದಕ್ಕೆ ಮಹಾನಗರ ಪಾಲಿಕೆ ಈವರೆಗೆ ಸ್ಪಂದಿಸಿಲ್ಲ. 24X7 ನೀರು ಪೂರೈಕೆಗೆ ಪೈಪ್‌ಲೈನ್ ಅಳವಡಿಕೆ ಮಾಡಲಾಗಿದೆ. ಆದರೆ, ನೀರು ಸರಬರಾಜು ಮಾಡುತ್ತಿಲ್ಲ. ಕೈಗಾರಿಕೆಗಳು ನೀರಿಗೆ ಟ್ಯಾಂಕರ್‌ಗಳನ್ನು ಅವಲಂಬಿಸಿವೆ. ದಿನದ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಟ್ಯಾಂಕರ್ ಮೂಲಕ ತರಿಸಿಕೊಳ್ಳಲಾಗುತ್ತಿದೆ.
‘ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಉತ್ಸುಕತೆ ತೋರುತ್ತಿಲ್ಲ. ತ್ಯಾಜ್ಯ ಸಂಗ್ರಹ, ಚರಂಡಿ ಶುಚಿತ್ವಕ್ಕೂ ಗಮನ ಹರಿಸುತ್ತಿಲ್ಲ. ಮಳೆನೀರು ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ರಾತ್ರಿ ಪಾಳಿಗೆ ತೆರಳುವವರು ಕತ್ತಲಲ್ಲಿ ಸಂಚರಿಸುವ ಸ್ಥಿತಿ ಇದೆ. ಈ ಕುರಿತು ಮಹಾನಗರ ಪಾಲಿಕೆಯ ಅಧಿಕಾರಿಗಳ ಗಮನ ಸೆಳೆದರೂ ಕ್ರಮ ಕೈಗೊಂಡಿಲ್ಲ’ ಎಂದು ಜಿಲ್ಲಾ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಬಿ. ಶಂಭುಲಿಂಗಪ್ಪ ಬೇಸರ ವ್ಯಕ್ತಪಡಿಸಿದರು.
‘ಕೆಐಎಡಿಬಿ’ ಅಭಿವೃದ್ಧಿಪಡಿಸಿದ ಲೋಕಿಕೆರೆ ಕೈಗಾರಿಕಾ ಪ್ರದೇಶದ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲಿನ ಒಳ ರಸ್ತೆಗಳು ಬಹುತೇಕ ಹಾಳಾಗಿವೆ. ಸಣ್ಣ ಮಳೆಗೂ ಗುಂಡಿ ಬೀಳುತ್ತಿದ್ದು, ವಾಹನ ಸಂಚಾರಕ್ಕೆ ತಾಪತ್ರಯ ಉಂಟಾಗುತ್ತಿದೆ. ರಸ್ತೆ ಬದಿ ಎಲ್ಲೆಂದರಲ್ಲಿ ಬಿಸಾಡಿರುವ ಕಟ್ಟಡ ತ್ಯಾಜ್ಯ ಕಣ್ಣಿಗೆ ರಾಚುತ್ತಿದೆ. ಕೈಗಾರಿಕೆಗಳಿಗೆ ಅಗತ್ಯವಿರುವ ಕಚ್ಚಾವಸ್ತು ಸಾಗಣೆ ಹಾಗೂ ಮಾರುಕಟ್ಟೆಗೆ ಉತ್ಪನ್ನಗಳನ್ನು ಕೊಂಡೊಯ್ಯುವುದು ಕಷ್ಟವಾಗಿದೆ.
102 ಎಕರೆಯಲ್ಲಿರುವ ಕರೂರು ಕೈಗಾರಿಕಾ ಪ್ರದೇಶದಲ್ಲಿ 207 ಕೈಗಾರಿಕೆಗಳಿವೆ. ಎಲೆಕ್ಟ್ರಿಕ್ ಉಪಕರಣ, ಎಂಜಿನಿಯರಿಂಗ್ ವರ್ಕ್ಸ್, ಗಾರ್ಮೆಂಟ್ಸ್ ಸೇರಿ ಹಲವು ಉದ್ಯಮಗಳು ಇಲ್ಲಿ ನೆಲೆ ಕಂಡುಕೊಂಡಿವೆ. ರಸ್ತೆ, ನೀರು, ವಿದ್ಯುತ್ ಸೌಲಭ್ಯದ ಬಗ್ಗೆ ಉದ್ಯಮಿಗಳಲ್ಲಿ ಸಮಾಧಾನವಿದೆ. ಗ್ಲೋಬಲ್ ಪಬ್ಲಿಕ್ ಶಾಲೆಯ ಸಮೀಪದಲ್ಲಿ ರಸ್ತೆ ಹಾಳಾಗಿದೆ. ಅಡ್ಡ ರಸ್ತೆಗಳಲ್ಲಿ ವಾಹನ ಸಂಚಾರ ಕಷ್ಟಕರವಾಗಿದೆ. ಅಲ್ಲಲ್ಲಿ ಜಾಲಿ ಗಿಡಗಳು ಬೆಳೆದುಕೊಂಡಿವೆ.
ದೇಶಕ್ಕೆ ರೈತರು ಬೆನ್ನೆಲುಬಾದರೆ ಸಣ್ಣ ಕೈಗಾರಿಕೋದ್ಯಮಿಗಳು ಪಕ್ಕೆಲುಬು. ಕೃಷಿ ಹೊರತುಪಡಿಸಿದರೆ ಅತಿ ಹೆಚ್ಚು ಉದ್ಯೋಗ ನೀಡಿದ್ದು ಕೈಗಾರಿಕೆ. ಕೃಷಿಯಷ್ಟೇ ಮಹತ್ವ ಇದಕ್ಕೂ ಸಿಗಬೇಕುಬಿ. ಶಂಭುಲಿಂಗಪ್ಪ ಅಧ್ಯಕ್ಷರು ಜಿಲ್ಲಾ ಕೈಗಾರಿಕೋದ್ಯಮಿಗಳ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.