ADVERTISEMENT

ಅಂತರ ಜಿಲ್ಲಾ ಕ್ರಿಕೆಟ್‌ | ದಾವಣಗೆರೆಗೆ ಮತ್ತೊಂದು ಗೆಲವು; ತುಮಕೂರಿಗೆ ರೋಚಕ ಜಯ

ಕೆಎಸ್‌ಸಿಎ 16 ವರ್ಷದೊಳಗಿನ ಅಂತರಜಿಲ್ಲಾ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2024, 15:39 IST
Last Updated 9 ಸೆಪ್ಟೆಂಬರ್ 2024, 15:39 IST
ಕೆ.ಸಿ.‌ವೀರೇಶ
ಕೆ.ಸಿ.‌ವೀರೇಶ   

ದಾವಣಗೆರೆ: ಎಸ್‌.ಶ್ರೇಯಸ್‌ ಆಲ್‌ರೌಂಡ್‌ ಆಟ ಹಾಗೂ ಕೆ.ಸಿ. ವೀರೇಶ್‌ ಸ್ಪಿನ್‌ ಬೌಲಿಂಗ್‌ ನೆರವಿನಿಂದ ದಾವಣಗೆರೆ ಜಿಲ್ಲಾ ತಂಡ ತುಮಕೂರು ವಲಯದ 16 ವರ್ಷದೊಳಗಿನ ಅಂತರ ಜಿಲ್ಲಾ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಸೋಮವಾರ ಮತ್ತೊಂದು ಪಂದ್ಯದಲ್ಲಿ ಸುಲಭ ಜಯ ಗಳಿಸಿತು.

ದಿನದ ಇನ್ನೊಂದು ಪಂದ್ಯದಲ್ಲಿ ತುಮಕೂರು ತಂಡ ಬಳ್ಳಾರಿ ವಿರುದ್ಧ ರೋಚಕ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಜಯ ದಾಖಲಿಸಿತು.

ಇಲ್ಲಿನ ಎಂಬಿಎ ಕಾಲೇಜು ಟರ್ಫ್‌ ಮೈದಾನದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸಿರುವ ಪಂದ್ಯಾವಳಿಯಲ್ಲಿ ಚಿತ್ರದುರ್ಗ ತಂಡದ ವಿರುದ್ಧ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ದಾವಣಗೆರೆ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 258 ರನ್‌ ಗಳಿಸಿತು.

ADVERTISEMENT

ಎಸ್‌.ಶ್ರೇಯಸ್‌ 67 (96 ಎಸೆತ, 5 ಬೌಂಡರಿ, 1 ಸಿಕ್ಸರ್‌), ಕೆ.ಅಖಿಲ್‌ 42 (31 ಎಸೆತ, 5 ಬೌಂಡರಿ), ಆರಂಭಿಕ ಆಟಗಾರ ಎ.ಜಿ. ಕಲ್ಲೇಶ್‌ 34 (41 ಎಸೆತ, 5 ಬೌಂಡರಿ) ಹಾಗೂ ಎಸ್‌.ಎನ್‌. ಅರ್ಜುನ್‌ 26 (50 ಎಸೆತ, 1 ಬೌಂಡರಿ) ರನ್ ಪೇರಿಸಿ ತಂಡಕ್ಕೆ ನೆರವಾದರು.

ಚಿತ್ರದುರ್ಗ ಪರ ಪಿ.ಎ. ಹೊನ್ನೇಶ್‌ 2, ಮಹಮ್ಮದ್‌ ನವಾಜ್, ಧ್ರುವಕುಮಾರ್‌ ಹಾಗೂ ಬಿ.ಕೆ. ಪುನೀತ್‌ ತಲಾ 1 ವಿಕೆಟ್‌ ಗಳಿಸಿದರು.‌
ಬೃಹತ್‌ ಗುರಿಯನ್ನು ಬೆನ್ನತ್ತಿದ ಚಿತ್ರದುರ್ಗ ತಂಡಕ್ಕೆ ದಾವಣಗೆರೆಯ ಎಡಗೈ ಸ್ಪಿನ್ನರ್‌ ಕೆ.ಸಿ. ವೀರೇಶ್‌ (4ಕ್ಕೆ 4) ಮಾರಕವಾಗಿ ಪರಿಣಮಿಸಿದರು. 10 ಓವರ್‌ ಬೌಲಿಂಗ್‌ ಮಾಡಿದ ವೀರೇಶ್‌, 7 ಓವರ್‌ ಮೇಡನ್‌ ಎಸೆದರು. ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಎಸ್‌.ಶ್ರೇಯಸ್‌ ಪಟಪಟನೇ 3 ವಿಕೆಟ್‌ ಪಡೆಯುವ ಎದುರಾಳಿ ತಂಡದ ಬ್ಯಾಟಿಂಗ್‌ ಮೂಲಕ ಮಗ್ಗುಲು ಮುರಿದರು.

ಮಹಮ್ಮದ್‌ ಅಕ್ರಮ್‌, ಕೆ.ಎಸ್‌. ಶ್ರೇಷ್ಠ, ಬಿ.ಸೃಜನ್‌ ತಲಾ 1 ವಿಕೆಟ್‌ ಪಡೆದರು. ಚಿತ್ರದುರ್ಗ ತಂಡ ಕೇವಲ 104 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ಪಂದ್ಯಾವಳಿಯಲ್ಲಿ ಎರಡನೇ ಸೋಲು ಅನುಭವಿಸಿತು.

ತುಮಕೂರಿಗೆ ರೋಚಕ ಗೆಲುವು:

ಮೊದಲ ಪಂದ್ಯದಲ್ಲಿ ಚಿತ್ರದುರ್ಗ ತಂಡದೆದುರು ಗೆಲುವ ಉ ಕಂಡಿದ್ದ ತುಮಕೂರು ಜಿಲ್ಲಾ ತಂಡ ಸೋಮವಾರ ಬಳ್ಳಾರಿ ವಿರುದ್ಧ 4 ರನ್‌ಗಳ ರೋಚಕ ಗೆಲುವು ಸಾಧಿಸಿತು.

‌‌ಇಲ್ಲಿನ ಜೆ.ಎಚ್‌. ಪಟೇಲ್‌ ಬಡಾವಣೆಯಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಬಳ್ಳಾರಿ ತಂಡ ತೀವ್ರ ಹಣಾಹಣಿ ನಡೆಸಿಯೂ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ತುಮಕೂರು, ಆರಂಭಿಕ ಆಘಾತಕ್ಕೆ ಒಳಗಾಗಿತ್ತಾದರೂ, ಮಧ್ಯಮ ಕ್ರಮಾಂಕದ ಎ.ಎಂ. ಅಭಿನವ್‌ ಅಜೇಯ ಶತಕ (103 ರನ್‌, 148 ಎಸೆತ, 13 ಬೌಂಡರಿ, 1 ಸಿಕ್ಸರ್‌) ದೊಂದಿಗೆ ಉತ್ತಮ ಮೊತ್ತ ಪೇರಿಸಿತು. 46 ರನ್‌ (31 ಎಸೆತ, 7 ಬೌಂಡರಿ) ಗಳಿಸಿದ ಅಭಿ ಕೊನೆಯಲ್ಲಿ ಸೂಕ್ತ ಬೆಂಬಲ ನೀಡಿದ್ದರಿಂದ ತಂಡ 50 ಓವರ್‌ಗಳಲ್ಲಿ ಎಂಟು ವಿಕೆಟ್‌ ನಷ್ಟಕ್ಕೆ 236 ರನ್‌ ಗಳಿಸಿತು.

ಬಳ್ಳಾರಿ ಪರ ಶೇಖ್‌ ಮಹಮ್ಮದ್‌ 3, ಪ್ರತೀಕ್‌ ಸಾಯಿ 3 ಹಾಗೂ ಅಭಿಷೇಕ್‌ ಮತ್ತು ರೋಹಿತ್‌ ರೆಡ್ಡಿ ತಲಾ 1 ವಿಕೆಟ್‌ ಗಳಿಸಿದರು.

237 ರನ್‌ಗಳ ಗುರಿ ಬೆನ್ನತ್ತಿದ ಬಳ್ಳಾರಿ ತಂಡ ರೋಹಿತ್‌ 66 (96 ಎಸೆತ, 9 ಬೌಂಡರಿ) ಹಾಗೂ ಆದಿಲ್‌ 44 (31 ಎಸೆತ, 8 ಬೌಂಡರಿ), ಅಮಿತ್‌ 28 (35 ಎಸೆತ, 2 ಬೌಂಡರಿ) ಅವರ ತೀವ್ರ ಹೋರಾಟದ ಹೊರತಾಗಿಯೂ ಕೇವಲ 4 ರನ್‌ಗಳ ಅಂತರದಲ್ಲಿ ಪರಾಭವಗೊಂಡಿತು.

ತುಮಕೂರು ಪರ ಕೆ.ಎಸ್‌. ರೋಹಿತ್‌ 39ಕ್ಕೆ 4 ವಿಕೆಟ್‌ ಗಳಿಸುವ ಮೂಲಕ ಗಮನ ಸೆಳೆದರು. ಅಭಿ 2, ನವೀನ್‌ಕುಮಾರ್‌, ಎಂ.ಜಿ. ಕಿಶೋರ್‌, ಲಕ್ಷಿತ್‌ ತಲಾ 1 ವಿಕೆಟ್‌ ಗಳಿಸಿದರು.

ಮಂಗಳವಾರ ನಡೆಯಲಿರುವ ಪಂದ್ಯಗಳಲ್ಲಿ ದಾವಣಗೆರೆ ತಂಡ ತುಮಕೂರು ವಿರುದ್ಧ, ಚಿತ್ರದುರ್ಗ ತಂಡ ಬಳ್ಳಾರಿ ವಿರುದ್ಧ ಸೆಣೆಸಲಿವೆ.

ಎ.ಎಂ.‌ಅಭಿನವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.