
ದಾವಣಗೆರೆ: ‘ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹಾಗೂ ಇಳುವರಿಯನ್ನು ಹೆಚ್ಚಿಸಿಕೊಳ್ಳಬಹುದು’ ಎಂದು ಬೇಸಾಯ ತಜ್ಞ ಮಲ್ಲಿಕಾರ್ಜುನ್ ಬಿ.ಒ ತಿಳಿಸಿದರು.
ಜಗಳೂರು ತಾಲ್ಲೂಕಿನ ಕಲ್ಲೇದೇವರಪುರದಲ್ಲಿ ಈಚೆಗೆ ನಡೆದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಏಕ ಬೆಳೆಯಾಗಿ ಮೆಕ್ಕೆಜೋಳ ಬೆಳೆಯುವುದರಿಂದ ಮಳೆ ಸರಿಯಾಗಿ ಬಾರದಿದ್ದರೆ ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಮೆಕ್ಕೆಜೋಳ ಬೆಳೆಯು ತೆಗೆದುಕೊಳ್ಳುವುದರಿಂದ ಫಲವತ್ತತೆ ಕಡಿಮೆಯಾಗುತ್ತದೆ. ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿ ಬೆಳೆಯುವುದರಿಂದ ಅಧಿಕ ಇಳುವರಿ ಪಡೆಯಬಹುದು’ ಎಂದರು.
‘ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸರಿಯಾದ ಸಮಯಕ್ಕೆ ನವೀನ ತಾಂತ್ರಿಕತೆಗಳನ್ನು ಒದಗಿಸಿರುವುದರಿಂದ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದೇವೆ’ ಎಂದು ಪ್ರಗತಿಪರ ಕೃಷಿಕ ಚಿತ್ರಲಿಂಗಪ್ಪ ತಿಳಿಸಿದರು.
‘ಬಿತ್ತನೆ ಸಮಯದಲ್ಲಿ ಬೀಜೋಪಚಾರ ಹಾಗೂ ತೊಗರಿ ಹೂವಾಡುವ ಸಂದರ್ಭದಲ್ಲಿ ‘ಪಲ್ಸ್ ಮ್ಯಾಜಿಕ್’ ಔಷಧಿ ಬಳಸುವುದರಿಂದ ಹೂ ಉದುರುವುದನ್ನು ತಡೆಯಬಹುದು’ ಎಂದು ಪ್ರಗತಿಪರ ಕೃಷಿಕ ಶಶಿಧರ್ ಹೇಳಿದರು.
ತೋಟಗಾರಿಕಾ ವಿಜ್ಞಾನಿ ಬಸವನಗೌಡ ಎಂ.ಜಿ. ಮಾತನಾಡಿದರು. ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಪರಿಶಿಷ್ಟ ಜಾತಿ ಉಪ ಯೋಜನೆ ಕಾರ್ಯಕ್ರಮದಡಿ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು. ವಿವಿಧ ಗ್ರಾಮಗಳ ಕೃಷಿಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.