ADVERTISEMENT

ದಾವಣಗೆರೆ: ಮೇ 7ರಂದು ಅಂತರರಾಷ್ಟ್ರೀಯ ಕನ್ನಡ ಸಮ್ಮೇಳನ

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 15:50 IST
Last Updated 10 ಮಾರ್ಚ್ 2025, 15:50 IST

ದಾವಣಗೆರೆ: ನಗರದ ಜಿಎಂಐಟಿ ಸಮೀಪದ ಮೈದಾನದಲ್ಲಿ ಅಂತರರಾಷ್ಟ್ರೀಯ ಕನ್ನಡ ಸಮ್ಮೇಳನವನ್ನು ಮೇ 7ರಿಂದ 12ರವರೆಗೆ ಹಮ್ಮಿಕೊಳ್ಳಲಾಗಿದೆ. ಸುಮಾರು ₹ 10 ಕೋಟಿ ವೆಚ್ಚದಲ್ಲಿ ಸಮ್ಮೇಳನ ಸಂಘಟಿಸಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು.

‘ವಿಶ್ವ ಕನ್ನಡ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಈ ಸಮ್ಮೇಳನ ಆಯೋಜಿಸಲಾಗಿದೆ. 6 ದಿನ ನಡೆಯುವ ಉತ್ಸವಕ್ಕೆ 3 ಸಮನಾಂತರ ವೇದಿಕೆ ನಿರ್ಮಿಸಲಾಗುತ್ತಿದೆ. 2 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅಗತ್ಯ ಸಿದ್ಧತೆ ನಡೆಸಲಾಗುತ್ತಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಪುಸ್ತಕ ಬರೆಯುವವರು ಮಾತ್ರವೇ ಸಾಹಿತಿಗಳಲ್ಲ. ಸಿನಿಮಾ ಚಿತ್ರಕಥೆ, ಗೀತೆ ರಚನಾಕಾರರು ಕೂಡ ಸಾಹಿತಿಗಳೇ. ಇವರನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಉದ್ದೇಶದಿಂದ ಲೇಖಕರ ಮೇಳ, ಪ್ರಕಾಶಕರ ಮೇಳ, ಸಾಮಾಜಿಕ ಜಾಲತಾಣ ಬರಹಗಾರರ ಮೇಳ ಕೂಡ ನಡೆಸಲಾಗುತ್ತಿದೆ. ಯೂಟ್ಯೂಬ್‌ ಸೇರಿದಂತೆ ನವ ಮಾಧ್ಯಮಗಳ ಕುರಿತೂ ಚರ್ಚಾ ಗೋಷ್ಠಿಗಳು ನಡೆಯಲಿವೆ. ಸಮ್ಮೇಳನದ ಅಂಗವಾಗಿ ವಸ್ತುಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗುತ್ತಿದೆ’ ಎಂದು ವಿವರಿಸಿದರು.

ADVERTISEMENT

‘ಸಂಘ–ಸಂಸ್ಥೆ, ಖಾಸಗಿ ಕಂಪೆನಿಗಳ ನೆರವು ಪಡೆದು ದೊಡ್ಡ ಮಟ್ಟದಲ್ಲಿ ಸಮ್ಮೇಳನ ಆಯೋಜಿಸುತ್ತಿರುವುದು ಹೊಸ ಪ್ರಯತ್ನ. ಸಾಹಿತ್ಯ ಪರಿಷತ್‌ ಆಶಯಗಳಿಗೆ ಚ್ಯುತಿ ಉಂಟಾಗದಂತೆ ಸಮ್ಮೇಳನ ಸಂಘಟಿಸಲಾಗುತ್ತಿದೆ. ಹಣ ಗಳಿಸುವ ದೃಷ್ಟಿಯಿಂದ ಇದನ್ನು ಆಯೋಜಿಸುತ್ತಿಲ್ಲ. ಇದರಿಂದ ಕನ್ನಡ ಸಾಹಿತ್ಯ ಪರಿಷತ್‌ ಮಲಿನ ಆಗುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ವಿಶ್ವ ಕನ್ನಡಿಗರ ಟ್ರಸ್ಟ್‌ ಅಧ್ಯಕ್ಷ ಗುರುರಾಜ್‌ ಹೊಸಕೋಟೆ, ಆನಂದಗೌಡ, ವಿಕಾಸ ಎಕ್ಸ್‌ಪೊ ನಿರ್ದೇಶಕ ಲೋಕೇಶ್‌, ಕನ್ನಡ ಸಾಹಿತ್ಯ ಷರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷೆ ಸುಮತಿ, ಪದಾಧಿಕಾರಿಗಳಾದ ದಿಲ್ಯಪ್ಪ, ಪ್ರಕಾಶ್‌, ಎಸ್.ವಾಣಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.