ADVERTISEMENT

ಡ್ರಗ್ಸ್‌ ಮಾಫಿಯಾದಲ್ಲಿ ರಾಜಕಾರಣಿ ಮಕ್ಕಳಿದ್ದರೂ ತನಿಖೆ

ಪೌರಾಡಳಿತ, ತೋಟಗಾರಿಕೆ ಸಚಿವ ಡಾ.ನಾರಾಯಣ ಗೌಡ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 10:56 IST
Last Updated 10 ಸೆಪ್ಟೆಂಬರ್ 2020, 10:56 IST
ನಾರಾಯಣ ಗೌಡ
ನಾರಾಯಣ ಗೌಡ   

ದಾವಣಗೆರೆ: ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳ ಮಕ್ಕಳ ಹೆಸರು ಕೇಳಿ ಬರುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈ ವಿಚಾರದಲ್ಲಿ ತನಿಖೆ ನಡೆಸಲು ಪೊಲೀಸರಿಗೆ ನಮ್ಮ ಸರ್ಕಾರ ನೀಡಿರುವಷ್ಡು ಸ್ವಾತಂತ್ರ್ಯವನ್ನು ಈ ಹಿಂದೆ ಯಾವ ಸರ್ಕಾರಗಳು ನೀಡಿರಲಿಲ್ಲ ಎಂದು ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ನಾರಾಯಣ ಗೌಡ ಹೇಳಿದರು.

ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕಲು ಕೇಂದ್ರ ಮತ್ತು ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಈ ಮಾಫಿಯದಲ್ಲಿ ರಾಜಕಾರಣಿ ಸಹಿತ ಯಾರೇ ಆಗಿದ್ದರೂ ಯಾರನ್ನೂ ಬಿಡುವ ಪ್ರಶ್ನೆಯೆ ಇಲ್ಲ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ರಾಗಿಣಿ ಅವರು ಬಿಜೆಪಿಯಂಥಲ್ಲ, ಬೇರೆ ಬೇರೆ ಪಕ್ಷಗಳ ಪರ ಪ್ರಚಾರ ಮಾಡಿದ್ದಾರೆ. ಬೇರೆ ಬೇರೆ ಪಕ್ಷಗಳ ನಾಯಕರ ಜತೆಗೆ ಇರುವ ಫೋಟೊಗಳೂ ಇವೆ. ನಮ್ಮ ಪಕ್ಷಕ್ಕೂ ಅವರಿಗೂ ಸಂಬಂಧವಿಲ್ಲ’ಎಂದು ಸ್ಪಷ್ಟಪಡಿಸಿದರು.

ADVERTISEMENT

ಅತಿ ಹೆಚ್ಚು ಮಳೆಯಾದಾಗ ಹಾನಿ ಸಹಜ. ಈ ವರ್ಷ ಮಳೆಯಿಂದ ಆದ ಹಾನಿ ಕಳೆದ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಡಿಮೆ ಇದೆ ಎಂದು ಹೇಳಿದರು.

ಮಳೆಯಿಂದ ಹಾನಿಗೊಳಗಾಗಿರುವ ಬೆಂಗಳೂರಿನ ಬಡಾವಣೆಗಳಿಗೆ ಸ್ಥಳೀಯ ಕಾರ್ಪೊರೇಟರ್‌ಗಳು ಮತ್ತು ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಹಾರ ಕಾರ್ಯ ಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜಕಾಲುವೆ ಒತ್ತುವರಿಯಿಂದ ಈ ಸಮಸ್ಯೆ ತಲೆದೋರಿರುವುದು ಗೊತ್ತಿರುವ ಸಂಗತಿ. ಈ ಒತ್ತುವರಿ ತೆರವುಗೊಳಿಸಬೇಕಾದರೆ ಕೆಲ ಅಡ್ಡಿಗಳು ಇರುವುದು ನಿಜ. ಆದರೆ ಒತ್ತುವರಿ ತೆರವುಗೊಳ್ಳಬೇಕಾದರೆ ಕೆಲ ತ್ಯಾಗಕ್ಕೆ ಸಿದ್ದರಾಗಿರಬೇಕು ಎಂದರು.

ಬೆಂಗಳೂರು ಅಭಿವೃದ್ಧಿಗೆ ಸರ್ಕಾರ ಹೊಸ ಯೋಜನೆಗಳನ್ನು ಸಿದ್ಧಪಡಿಸಿದ್ದು ಈ ಯೋಜನೆಗಳು ಹಂತ ಹಂತವಾಗಿ ಜಾರಿಗೆ ಬರಲಿವೆ ಎಂದು ತಿಳಿಸಿದರು.

ದಾವಣಗೆರೆಯಲ್ಲಿರುವ ಮೈಸೂರು ಸಿಲ್ಕ್‌ ಶೋರೂಂ ಮುಚ್ಚುವುದಿಲ್ಲ. ಇಲ್ಲಿಯದ್ದೂ ಸೇರಿ ಎಲ್ಲ ಕಡೆ ಶೋರೂಂ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.