
ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಹರಿಹರ: ರಾಜ್ಯ ಸರ್ಕಾರವು ಪಂಚ ಗ್ಯಾರಂಟಿಗಳಿಗೆ ನೀಡುವಷ್ಟೇ ಆದ್ಯತೆಯನ್ನು ನೀರಾವರಿ ಸೌಲಭ್ಯಕ್ಕೂ ನೀಡಬೇಕು ಎಂದು ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
‘ಯಾರು ಕೇಳದಿದ್ದರೂ ಪಂಚ ಗ್ಯಾರಂಟಿಗೆ ₹ 60,000 ಕೋಟಿ ಅನುದಾನ ನೀಡಲಾಗುತ್ತಿದೆ. ಆದರೆ, ಕೆರೆಗಳಿಗೆ ನೀರು ಹರಿಸಿರಿ ಎಂದು ಅರ್ಜಿ ಹಾಕುವ ಅನಿವಾರ್ಯತೆ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ತುಂಗಭದ್ರ ನದಿಯಿಂದ ಏತ ನೀರಾವರಿ ಮೂಲಕ ಜಿಲ್ಲೆಯ ವಿವಿಧ ತಾಲ್ಲೂಕುಗಳ 100ಕ್ಕೂ ಹೆಚ್ಚು ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಆ ಭಾಗದ ಎಲ್ಲಾ ಸಮುದಾಯದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಸರ್ಕಾರಿ ನೌಕರರಿಗಿಂತ ಹೆಚ್ಚಿನ ಸೌಲಭ್ಯಗಳು ರೈತರಿಗೆ ಸಿಗಬೇಕು. 5 ಎಕರೆ ಜಮೀನಿರುವ ಯುವ ರೈತ ಮದುವೆಯಾಗಲು ಹೆಣ್ಣು ಸುಲಭವಾಗಿ ಸಿಗುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.
‘ಬೆಳೆ ನಷ್ಟವಾದಾಗ ₹ 10,000 ಪರಿಹಾರ ಪಡೆಯಲು ರೈತರು ವಿವಿಧ ದಾಖಲೆಗಳನ್ನು ಹೊಂದಿಸಿ ಅರ್ಜಿ ಹಾಕಬೇಕು. ಇದಕ್ಕೆ ₹ 5,000 ಖರ್ಚು ಮಾಡಬೇಕಿದೆ. ಬೆಳೆ ಪರಿಹಾರ ಪಡೆಯುವ ಪ್ರಕ್ರಿಯೆ ಸರಳಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಹೇಳಿದರು.
‘ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ ಹಾಳಾಗಿದೆ. ಇದನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಘೋಷಣೆ ಆಗುವವರೆಗೆ ರಾಜ್ಯ ಸರ್ಕಾರ ರಸ್ತೆಯನ್ನು ದುರಸ್ತಿ ಮಾಡಲಿ’ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
‘ಮುಂದಿನ ವರ್ಷದ ಹರ ಜಾತ್ರೆಯಲ್ಲಿ ತೇರು ಎಳೆಯಲಾಗುತ್ತಿದ್ದು, ಎರಡು ದಿನ ಜಾತ್ರೆ ನಡೆಯಲಿದೆ. ಅಗತ್ಯ ವಸತಿ ವ್ಯವಸ್ಥೆಗೆ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಡಾ.ಬಸವರಾಜ್ ವೀರಾಪುರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.