ADVERTISEMENT

ದಾವಣಗೆರೆ |ಜುಲೈ 2ರಂದು ಪುರಿ ಜಗನ್ನಾಥ ರಥಯಾತ್ರೆ: ಅವಧೂತ ಚಂದ್ರದಾಸ್‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 15:23 IST
Last Updated 30 ಜೂನ್ 2025, 15:23 IST
ಅವಧೂತ ಚಂದ್ರದಾಸ್
ಅವಧೂತ ಚಂದ್ರದಾಸ್   

ದಾವಣಗೆರೆ: ಪುರಿ ಜಗನ್ನಾಥ ರಥಯಾತ್ರೆಯನ್ನು ಜುಲೈ 2ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ದಾವಣಗೆರೆ ‘ಇಸ್ಕಾನ್‌’ ಮುಖ್ಯಸ್ಥ ಅವಧೂತ ಚಂದ್ರದಾಸ್‌ ತಿಳಿಸಿದರು.

‘ಒಡಿಶಾದ ಪುರಿ ಜಗನ್ನಾಥ ರಥಯಾತ್ರೆಗೆ 5,000 ವರ್ಷಗಳ ಇತಿಹಾಸವಿದೆ. ಬ್ರಿಟಿಷರು ಇದನ್ನು ನಿಲ್ಲಿಸಲು ಪ್ರಯತ್ನಿಸಿ ವಿಫಲರಾಗಿದ್ದರು. ಕೋವಿಡ್ ಸಂದರ್ಭದಲ್ಲಿ ಕೂಡ ಇದು ಸ್ಥಗಿತವಾಗಿರಲಿಲ್ಲ. ನ್ಯೂಯಾರ್ಕ್, ಲಂಡನ್, ಪ್ಯಾರಿಸ್ ಸೇರಿದಂತೆ ಜಗತ್ತಿನ ಪ್ರಮುಖ ನಗರಗಳಲ್ಲಿ ಯಾತ್ರೆ ನಡೆಯುತ್ತಿದೆ. ದಾವಣಗೆರೆಯಲ್ಲಿ 4ನೇ ಬಾರಿಗೆ ಆಯೋಜಿಸಲಾಗಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮಂಡಿಪೇಟೆಯ ಕೋದಂಡರಾಮ ದೇಗುಲದ ಬಳಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಅಂದು ಮಧ್ಯಾಹ್ನ 1.30ಕ್ಕೆ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇಲ್ಲಿಂದ ಹೊರಡುವ ಯಾತ್ರೆ ಚಾಮರಾಜಪೇಟೆ, ಹಾಸಬಾವಿ ವೃತ್ತ, ಚೌಕಿಪೇಟೆ, ಹೊಂಡದ ವೃತ್ತ, ಅರುಣಾ ಟಾಕೀಸ್ ವೃತ್ತ, ಜಯದೇವ ವೃತ್ತ, ವಿದ್ಯಾರ್ಥಿ ಭವನದ ಮೂಲಕ ಗುಂಡಿ ಮಹಾದೇವಪ್ಪ ವೃತ್ತದಲ್ಲಿ ಕೊನೆಗೊಳ್ಳಲಿದೆ’ ಎಂದು ವಿವರಿಸಿದರು.

ADVERTISEMENT

‘ಹರಿನಾಮ ಕೀರ್ತನೆ, ಕಲಾತಂಡಗಳ ಜೊತೆಗೆ ರಥಯಾತ್ರೆ ಸಾಗಲಿದೆ. ಜಗನ್ನಾಥ, ಬಲರಾಮ, ಸುಭದ್ರೆಯ ಮೂರ್ತಿಗಳು ಯಾತ್ರೆಯಲ್ಲಿ ದರ್ಶನ ಭಾಗ್ಯ ಕರುಣಿಸಲಿವೆ. ಭಕ್ತರಿಗೆ ಪ್ರಸಾದ ವಿತರಿಸಲು 10 ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಹಾಗೂ ಪಾಲಿಕೆ ಆಯುಕ್ತೆ ರೇಣುಕಾ ಪಾಲ್ಗೊಳ್ಳಲಿದ್ದಾರೆ. ಭಕ್ತರು ಯಾತ್ರೆಯಲ್ಲಿ ಭಾಗವಹಿಸಿ ರಥ ಎಳೆದು ಪುನೀತರಾಗಬೇಕು’ ಎಂದು ಮನವಿ ಮಾಡಿದರು.

ಜಗನ್ನಾಥ ರಥಯಾತ್ರೆ ಸಮಿತಿಯ ಅಧ್ಯಕ್ಷರೂ ಅಗಿರುವ ‘ಧೂಡಾ’ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ‘ಮಕ್ಕಳಿಗೆ ಸಂಸ್ಕೃತಿ, ಧಾರ್ಮಿಕ ಪದ್ಧತಿ ಬಗ್ಗೆ ತಿಳಿಹೇಳಬೇಕಿದೆ. ಅನ್ಯ ಧರ್ಮಿಯರಿಗೆ ತೊಂದರೆ ಆಗದಂತೆ ಧಾರ್ಮಿಕ ಆಚರಣೆ ನಡೆಸುವ ರೀತಿಯನ್ನು ಹೇಳಿಕೊಡಬೇಕಿದೆ. ‘ಧೂಡಾ’ ವತಿಯಿಂದ ನಿವೇಶನ ನೀಡಲು ಸಿದ್ಧರಿದ್ದೇವೆ. ಆದಷ್ಟು ಬೇಗ ‘ಇಸ್ಕಾನ್’ ಸ್ವಂತ ಕಟ್ಟಡ ಹೊಂದುವಂತಾಗಲಿ’ ಎಂದರು.
ರಥಯಾತ್ರೆಯ ಸಂಘಟಕ ಸತ್ಯನಾರಾಯಣ ಹಾಜರಿದ್ದರು.

ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಮೂಲ ವಿಗ್ರಹದ ಮೆರವಣಿಗೆ ನಡೆಯುವುದರಿಂದ ಉಳಿದ ಉತ್ಸವಕ್ಕಿಂತ ಭಿನ್ನ. 148 ರೀತಿಯ ನೈವೇದ್ಯ ಇಲ್ಲಿನ ವಿಶೇಷ
ಅವಧೂತ ಚಂದ್ರದಾಸ್‌ ಮುಖ್ಯಸ್ಥ ‘ಇಸ್ಕಾನ್‌’ ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.