ADVERTISEMENT

ದಾವಣಗೆರೆ: ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಜವಾಬ್ದಾರಿ

ಜನ ಸಂವಾದ ಕಾರ್ಯಕ್ರಮ ಉದ್ಘಾಟಿಸಿದ ಸಾಮಾಜಿಕ ಹೋರಾಟಗಾರ್ತಿ ಸುಧಾ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 5:11 IST
Last Updated 1 ಫೆಬ್ರುವರಿ 2023, 5:11 IST
ದಾವಣಗೆರೆಯ ನೆರಳು ಬೀಡಿ ಕಾರ್ಮಿಕರ ಯೂನಿಯನ್ ದಾವಣಗೆರೆ ಕಚೇರಿಯಲ್ಲಿ ಆಯೋಜಿಸಿದ್ದ ಜನ ಸಂವಾದ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರರಾದ ಸುಧಾ ಎನ್, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷರಾದ ಜಬೀನಾ ಖಾನಂ, ಸಮಿತಿ ಸದಸ್ಯರಾದ ನಾಹೇರಾ ಬಾನು, ಕರಿಬಸಪ್ಪ, ನೂರ್ ಫಾತೀಮಾ ಹಾಗೂ ಇತರರು ಚಿಗಟೇರಿ ಆಸ್ಪತ್ರೆ ಖಾಸಗೀಕರಣ ಬೇಡವೆಂದು ಒತ್ತಾಯಿಸಿ ಕೈಪಿಡಿ ಬಿಡುಗಡೆಗೊಳಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ನೆರಳು ಬೀಡಿ ಕಾರ್ಮಿಕರ ಯೂನಿಯನ್ ದಾವಣಗೆರೆ ಕಚೇರಿಯಲ್ಲಿ ಆಯೋಜಿಸಿದ್ದ ಜನ ಸಂವಾದ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರರಾದ ಸುಧಾ ಎನ್, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷರಾದ ಜಬೀನಾ ಖಾನಂ, ಸಮಿತಿ ಸದಸ್ಯರಾದ ನಾಹೇರಾ ಬಾನು, ಕರಿಬಸಪ್ಪ, ನೂರ್ ಫಾತೀಮಾ ಹಾಗೂ ಇತರರು ಚಿಗಟೇರಿ ಆಸ್ಪತ್ರೆ ಖಾಸಗೀಕರಣ ಬೇಡವೆಂದು ಒತ್ತಾಯಿಸಿ ಕೈಪಿಡಿ ಬಿಡುಗಡೆಗೊಳಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಆರೋಗ್ಯ ನಮ್ಮ ಹಕ್ಕು. ಆರೋಗ್ಯ ಸೇವೆಯನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ. ಅದರಿಂದ ಅವರು ನುಣುಚಿಕೊಳ್ಳುವಂತಿಲ್ಲ ಎಂದು ಬೆಂಗಳೂರಿನ ಸಾಮಾಜಿಕ ಹೋರಾಟಗಾರ್ತಿ ಮತ್ತು ಸಂಶೋಧಕಿ ಸುಧಾ ಎನ್‌. ಹೇಳಿದರು.

ಸಾರ್ಜನಿಕ ಆರೋಗ್ಯ ಸೇವೆ, ಸೌಲಭ್ಯ ಬಲಗೊಳಿಸಲು, ಚಿಗಟೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಖಾಸಗಿಕರಣವನ್ನು ವಿರೋಧಿಸಲು ನೆರಳು ಬೀಡಿ ಕಾರ್ಮಿಕರ ಯೂನಿಯನ್‌, ದಲಿತ–ಮುಸ್ಲಿಂ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಮಂಗಳವಾರ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜನ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ನಮ್ಮ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ. ಈಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ವೆಚ್ಚ ಭರಿಸುವುದು ಬಹಳ ಕಷ್ಟವಾಗಿದೆ. ಅದಕ್ಕಾಗಿಯೇ ಬಡವರು, ಕಾರ್ಮಿಕರು ಸರ್ಕಾರಿ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯೂ ಖಾಸಗಿಯಾದರೆ ಅವರೆಲ್ಲ ಎಲ್ಲಿ ಹೋಗಬೇಕು? ಚಿಕಿತ್ಸಾ ವೆಚ್ಚವನ್ನು ಭರಿಸುವುದು ಹೇಗೆ? ಎಂದು ಪ್ರಶ್ನಿಸಿದರು.

ADVERTISEMENT

ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ತಾಯಿ ಮರಣ ಹೊಂದುವ ರಾಜ್ಯ ಕರ್ನಾಟಕ. ನಮ್ಮಲ್ಲಿ ಅತಿ ಹೆಚ್ಚು ನರ್ಸಿಂಗ್‌ ಹೋಂಗಳು, ಆಸ್ಪತ್ರೆಗಳಿದ್ದರೂ ಹೀಗಾಗುತ್ತಿರುವುದು ದುರದೃಷ್ಟಕರ. ಸರ್ಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸುವ ಬದಲು ಅಲ್ಲಿ ಕೊರತೆ ಇರುವುದನ್ನು ಸರಿಪಡಿಸಬೇಕು. ಜನರಿಗೆ ಉತ್ತಮ ಸೇವೆ ಸಿಗಬೇಕು. ಅಲ್ಲಿಯ ಸಿಬ್ಬಂದಿ ಉತ್ತಮ ಸ್ಪಂದನೆ ನೀಡುವಂತೆ ಮಾಡಬೇಕು. ಎಷ್ಟೇ ಉತ್ತಮ ಚಿಕಿತ್ಸೆ ನೀಡಿದರೂ ಕೆಲವು ಸಾವು ತಪ್ಪಿಸಲು ಆಗುವುದಿಲ್ಲ. ಅವುಗಳನ್ನು ಬಿಟ್ಟು ನಿರ್ಲಕ್ಷ್ಯದಿಂದ ಉಂಟಾಗುವ ಸಾವುಗಳನ್ನು ಖಂಡಿತ ತಪ್ಪಿಸಬಹುದು ಎಂದು ಹೇಳಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆ ಜಬೀನಾಖಾನಂ ಮಾತನಾಡಿ, ‘ಜನಸಂವಾದ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರನ್ನು ಕರೆದಿದ್ದೆವು. ಬರುವುದಾಗಿ ಆರಂಭದಲ್ಲಿ ಒಪ್ಪಿಕೊಂಡಿದ್ದರೂ, ಈಗ ಬಾರದೇ ಗೈರಾಗಿದ್ದಾರೆ. ಜನಸಂವಾದವನ್ನು ನಿಮ್ಮ ಸಂಘಟನೆ ಯಾಕೆ ಮಾಡಬೇಕು ಎಂದೆಲ್ಲ ಕೇಳಿದ್ದಾರೆ. ಜನರ ತೆರಿಗೆಯಿಂದ ವೇತನ ಪಡೆಯುವ ಅವರು ಜನರ ಪ್ರಶ್ನೆಗಳಿಗೆ ಉತ್ತರಿಸಲು ಹಿಂಜರಿಯುವುದು ಯಾಕೆ? ಜನರ ಜತೆ ಸಂವಾದ ಮಾಡಿದರೆ ಸಮಸ್ಯೆಗಳು ಅವರಿಗೆ ಅರ್ಥವಾಗುತ್ತವೆ’ ಎಂದು ಹೇಳಿದರು.

ಜನರ ಸೇವೆಯಲ್ಲಿ ಇರುವವರು ಜನರನ್ನು ಶತ್ರುಗಳಂತೆ ನೋಡಬಾರದು. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಹಿಳೆಯರ ಒಪ್ಪಿಗೆ ಇಲ್ಲದೇ ಕಾಪರ್‌ ಟಿ ಹಾಕಲಾಗುತ್ತಿದೆ. ಹಲವು ಮಹಿಳೆಯರಿಗೆ ಇದರಿಂದ ಸಮಸ್ಯೆಯಾಗಿದೆ. ಇಂಥ ಅನೇಕ ಸಮಸ್ಯೆಗಳನ್ನು ಆರೋಗ್ಯ ಇಲಾಖೆಯ ಮುಂದಿಡಲು ತಯಾರಿ ನಡೆಸಲಾಗಿತ್ತು ಎಂದರು.

ಕಾರ್ಯಕಾರಿ ಸಮಿತಿ ಸದಸ್ಯರಾದ ನಾಹೆರಾಬಾನು, ಹಸಿನಾ, ಸಬ್ರಿನ್‌, ನೂರ್‌ ಫಾತಿಮಾ ಇದ್ದರು. ಯೂನಿಯನ್ ಪ್ರಧಾನ ಕಾರ್ಯದರ್ಶಿ ಎಂ. ಕರಿಬಸಪ್ಪ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.