ADVERTISEMENT

ಜಗಳೂರು: ಕಸದ ತಿಪ್ಪೆಯಲ್ಲಿ ಕೋವಿಡ್ ಲಸಿಕೆ ವಯಲ್‌ಗಳು

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 4:11 IST
Last Updated 30 ಜುಲೈ 2021, 4:11 IST
ಜಗಳೂರಿನಲ್ಲಿ ಕಸದ ತಿಪ್ಪೆಯಲ್ಲಿ ಪತ್ತೆಯಾಗಿರುವ ಅರೆಬರೆ ಬಳಿಸಿದ ಕೋವಿಡ್ ಲಸಿಕೆ ವಯಲ್‌ಗಳು.
ಜಗಳೂರಿನಲ್ಲಿ ಕಸದ ತಿಪ್ಪೆಯಲ್ಲಿ ಪತ್ತೆಯಾಗಿರುವ ಅರೆಬರೆ ಬಳಿಸಿದ ಕೋವಿಡ್ ಲಸಿಕೆ ವಯಲ್‌ಗಳು.   

ಜಗಳೂರು: ಕೋವಿಡ್ ಲಸಿಕೆ ಸಿಗದೆ ಎಲ್ಲೆಡೆ ಪರದಾಡುತ್ತಿರುವ ಈ ಸಂದರ್ಭದಲ್ಲಿ ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಲಸಿಕೆಯ 16ಕ್ಕೂ ಹೆಚ್ಚು ವಯಲ್‌ಗಳನ್ನು ಬೇಕಾಬಿಟ್ಟಿ ಕಸದ ತಿಪ್ಪೆಯಲ್ಲಿ ಎಸೆದಿದ್ದು, ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಗೆ ಸಮೀಪದ ಕಸದ ತಿಪ್ಪೆಯಲ್ಲಿ ಲಸಿಕೆ ತುಂಬಿರುವ 16 ಸಣ್ಣ ಸೀಸೆಗಳು (ವಯಲ್) ಪತ್ತೆಯಾಗಿವೆ. ಈ ಬಗ್ಗೆ ಮಾಹಿತಿ ಪಡೆದ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್ ಅವರು ಅವುಗಳನ್ನು ವಶಪಡಿಸಿಕೊಂಡಿದ್ದಾರೆ

ಲಸಿಕೆ ತುಂಬಿದ ಒಂದು ವಯಲ್ ನಲ್ಲಿ 10 ಮಂದಿಗೆ ಲಸಿಕೆ ಹಾಕಬಹುದು. ಆದರೆ ಒಂದು ವಯಲ್‌ನಲ್ಲಿ ಒಬ್ಬರು ಅಥವಾ ಇಬ್ಬರಿಗೆ ಮಾತ್ರ ಲಸಿಕೆ ಹಾಕಿ ಹೊರಗೆ ಎಸೆಯಲಾಗಿದೆ. 17 ವಯಲ್‌ಗಳಿಂದ ಕನಿಷ್ಠ 170 ಜನರಿಗೆ ಲಸಿಕೆ ಹಾಕಬಹುದಿತ್ತು. ಆದರೆ ಬೇಜವಾಬ್ದಾರಿಯಿಂದ ಅರೆಬರೆ ಬಳಸಿದ ವಯಲ್‌ಗಳನ್ನು ಆಸ್ಪತ್ರೆಯಿಂದ ಹೊರಗೆ ಎಸೆದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ತಾಲ್ಲೂಕಿನಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ನೀಡುವ ಗುರಿ ಹೊಂದಿದ್ದು, ಜಿಲ್ಲಾ ಕೇಂದ್ರದಿಂದ ಲಸಿಕೆ ಕೊರತೆಯಾಗದಂತೆ ತರಿಸಲಾಗುತ್ತಿದೆ. ಆದರೆ ಹೀಗೆ ಬೇಕಾಬಿಟ್ಟಿ ಲಸಿಕೆಯ ಸೀಸೆಗಳನ್ನು ಎಸೆದಿರುವುದು ಅಕ್ಷ್ಯಮ್ಯವಾಗಿದೆ. ಈ ಬಗ್ಗೆ ತನಿಖೆ ನಡೆಸಿ ಮೇಲಧಿಕಾರಿಗೆ ವರದಿ ಸಲ್ಲಿಸಲಾಗುವುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ, ನಾಗರಾಜ್ ತಿಳಿಸಿದ್ದಾರೆ.

‘ಲಸಿಕೆಯನ್ನು ವ್ಯರ್ಥವಾಗಿ ಎಸೆದಿರುವ ಘಟನೆ ಬಗ್ಗೆ ಮಾಹಿತಿ ಇದೆ. ಡಿಎಚ್ಒ ಅವರಿಗೆ ವರದಿ ಸಲ್ಲಿಸಲು ಸೂಚಿಸಿದ್ದೇನೆ. ತಪ್ಪು ಮಾಡಿದವರು ಯಾರೇ ಆಗಲಿ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.