ADVERTISEMENT

ಜಗಳೂರು | ಹಬ್ಬಗಳಲ್ಲಿ ಭಾವಾತಿರೇಕದ ಪ್ರದರ್ಶನ ಬೇಡ: ಡಿವೈಎಸ್‌ಪಿ ಬಸವರಾಜ್

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 7:11 IST
Last Updated 7 ಆಗಸ್ಟ್ 2025, 7:11 IST
 ಜಗಳೂರಿನ ಪೊಲೀಸ್ ಠಾಣೆಯಲ್ಲಿ  ಮಂಗಳವಾರ ಡಿವೈಎಸ್ ಪಿ ಬಸವರಾಜ್ ನೇತೃಥ್ವದಲ್ಲಿ  ಸಾರ್ವಜನಿಕರೊಂದಿಗೆ ಶಾಂತಿಸಭೆ ನಡೆಯಿತು. ಸಿಪಿಐ ಸಿದ್ರಾಮಯ್ಯ, ಎಸ್ಐ  ಆಶಾ ಇದ್ದರು.
 ಜಗಳೂರಿನ ಪೊಲೀಸ್ ಠಾಣೆಯಲ್ಲಿ  ಮಂಗಳವಾರ ಡಿವೈಎಸ್ ಪಿ ಬಸವರಾಜ್ ನೇತೃಥ್ವದಲ್ಲಿ  ಸಾರ್ವಜನಿಕರೊಂದಿಗೆ ಶಾಂತಿಸಭೆ ನಡೆಯಿತು. ಸಿಪಿಐ ಸಿದ್ರಾಮಯ್ಯ, ಎಸ್ಐ  ಆಶಾ ಇದ್ದರು.   

ಜಗಳೂರು: ‘ಹಬ್ಬ–ಹರಿದಿನಗಳು ಸಮಾಜದಲ್ಲಿ ಧರ್ಮಾತೀತವಾಗಿ ಸಂಭ್ರಮ ಸಡಗರಕ್ಕೆ ಕಾರಣವಾಗಬೇಕೆ ಹೊರತು ಭಾವಾತಿರೇಕದ ಪ್ರದರ್ಶನವಾಗಬಾರದು’ ಎಂದು ಡಿವೈಎಸ್‌ಪಿ ಬಸವರಾಜ್ ಹೇಳಿದರು.

ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳ ಅಂಗವಾಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ನಡೆದ ಸಾರ್ವಜನಿಕರೊಂದಿಗೆ ಶಾಂತಿ ಸಭೆಯಲ್ಲಿ  ಮಾತನಾಡಿದರು.

ಗಣೇಶ ಹಬ್ಬದ ಅಂಗವಾಗಿ ಸಾಂಸ್ಕೃತಿಕ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಡಿಜೆ ಅಬ್ಬರದ ಸದ್ದಿಗೆ ಕುಣಿಯುವುದೇ ಗಣೇಶೋತ್ಸವ ಅಲ್ಲ. ತಾಲ್ಲೂಕಿನಲ್ಲಿ ಎಲ್ಲಾ ಸಮುದಾಯಗಳ ನಡುವೆ ಸದಾ ಸಾಮರಸ್ಯ ಇದೆ. ಎಲ್ಲರೂ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸಂಭ್ರಮವನ್ನು ಹಂಚಬೇಕಿದೆ ಎಂದರು.

ADVERTISEMENT

ಪೊಲೀಸ್ ಕಾಯ್ದೆಯನ್ವಯ ಸಾರ್ವಜನಿಕರಿಗೆ ತೊಂದರೆ, ಕರ್ಕಶ ಶದ್ಧ ಉಂಟುಮಾಡುವ ಡಿಜೆ, ಧ್ವನಿ ವರ್ಧಕಗಳನ್ನು ಬಳಕೆ ಮಾಡಬಾರದು. ಗಣೇಶ ಉತ್ಸವ ಸಮಿತಿಯವರು ಪಟ್ಟಣ ಪಂಚಾಯಿತಿ, ಬೆಸ್ಕಾಂ, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಬೇಕು. ಸರ್ಕಾರದ ಆದೇಶದಂತೆ ಪರಿಸರಕ್ಕೆ ಪೂರಕವಾಗಿರಬೇಕು. ಗಣೇಶ ಹಬ್ಬ ಆಚರಣಾ ಸಮಿತಿ ಸದಸ್ಯರುಗಳ ಪಟ್ಟಿ ನೀಡಬೇಕು. ಜೊತೆಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಹಬ್ಬ ಆಚರಣೆಯಾಗಬೇಕು ಎಂದು ಸಿಪಿಐ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

ಪಿಎಸ್‌ಐ ಆಶಾ, ಗಾದಿಲಿಂಗಪ್ಪ, ಎಎಸ್ಐ ಜಿ.ಟಿ. ವೆಂಕಟೇಶ್, ನಟರಾಜ್, ಸಿಬ್ಬಂದಿ ಮಾರುತಿ, ಕರಿಬಸಪ್ಪ, ಗೌರೀಪುರ ಬಸವರಾಜ್, ಜಿ.ಟಿ. ಪಾಲಾಕ್ಷಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.